ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Vijay: ದೀಪಾವಳಿ ಆಚರಿಸದಂತೆ ನಟ ದಳಪತಿ ವಿಜಯ್‌ ಕರೆ

Tamilaga Vettri Kazhagam: ಕಳೆದ ತಿಂಗಳು ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 41 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತರಿಗೂ ಸೂಚನೆ ನೀಡಿದ್ದಾರೆ.

ದೀಪಾವಳಿ ಆಚರಣೆಗೆ ನಟ ವಿಜಯ್‌ ಬ್ರೇಕ್‌

-

Ramesh B Ramesh B Oct 18, 2025 8:51 PM

ಚೆನ್ನೈ, ಅ. 18: ಕಳೆದ ತಿಂಗಳು ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ (Actor Vijay) ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 41 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ (Karur Stampede) ಈ ಬಾರಿ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ. ಜತೆಗೆ ತಮ್ಮ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಕಾರ್ಯಕರ್ತರಿಗೂ ಈ ಬಗ್ಗೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಸಂಭ್ರಮಾಚರಣೆಗೆ ಬ್ರೇಕ್‌ ಹಾಕಲಾಗಿದೆ.

ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ದೇಶದಲ್ಲೆಡೆ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಚೆನ್ನೈ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ನಗರದಾದ್ಯಂತ ಕಟ್ಟಡಗಳು ದೀಪಗಳಿಂದ ಬೆಳಗುತ್ತಿವೆ. ಆದರೆ ಚೆನ್ನೈಯ ಪನೈಯೂರ್‌ನಲ್ಲಿರುವ ವಿಜಯ್ ಅವರ ಟಿವಿಕೆ ಪ್ರಧಾನ ಕಚೇರಿಯು ಬಿಕೋ ಎನ್ನುತ್ತಿದೆ. ಅದಕ್ಕೆ ಕಾರಣ ವಿಜಯ್‌ ಅವರ ನಿರ್ಧಾರ. ಈಗಾಗಲೇ ವಿಜಯ್‌ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಕಾರ್ಯಕರ್ತರಿಗೆ ಮತ್ತು ಜಿಲ್ಲಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ, ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಸ್ಮರಣಾರ್ಥ ಈ ವರ್ಷ ದೀಪಾವಳಿ ಆಚರಿಸದಂತೆ ಹೇಳಿದ್ದಾರೆ.

ಸೆಪ್ಟೆಂಬರ್‌ 27ರಂದು ಕರೂರಿನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಸುಮಾರು 30,000 ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಅಸುನೀಗಿದ್ದರು. ದುರಂತದ ಸುದ್ದಿ ಗೊತ್ತಾಗುತ್ತಿದ್ದಂತೆ ದುಃಖ ವ್ಯಕ್ತಪಡಿಸಿದ್ದ ವಿಜಯ್‌ ಹೃದಯ ಚೂರಾಗಿದೆ ಎಂದಿದ್ದರು.

ಈ ಸುದ್ದಿಯನ್ನೂ ಓದಿ: Karur Stampede: ಕರೂರು ಕಾಲ್ತುಳಿತ; "ಸ್ಟಾಲಿನ್‌ ನೀವು ನನ್ನ ಮೇಲೆ ಸೇಡು ತೀರಿಸಿಕೊಳ್ಳಿ.... " ಸರ್ಕಾರಕ್ಕೆ ವಿಜಯ್‌ ಸವಾಲ್‌

ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ್ದ ವಿಜಯ್‌

ವಿಜಯ್‌ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದ ಅವರು, ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು.

ʼʼನನ್ನ ಹೃದಯ ಮುರಿದು ಹೋಗಿದೆ. ನಾನು ಅಸಹನೀಯ, ವರ್ಣನಾತೀತ ನೋವು ಮತ್ತು ದುಃಖದಲ್ಲಿದ್ದೇನೆ. ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತೇನೆʼʼ ಎಂದು ಅವರು ಹೇಳಿದ್ದರು.

10 ಲಕ್ಷ ರೂ. ಘೋಷಿಸಿದ್ದ ಮುಖ್ಯಮಂತ್ರಿ

ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಈ ಕಾಲ್ತುಳಿತ ದುರಂತಕ್ಕೆ ಆಘಾತ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಘೋಷಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಆಘಾತ ವ್ಯಕ್ತಪಡಿಸಿ, ʼʼತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದ ರಾಜಕೀಯ ರ‍್ಯಾಲಿಯಲ್ಲಿ ನಡೆದ ಘಟನೆ ತಿಳಿದು ದುಃಖವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬದ ಜತೆಗೆ ನಾವಿದ್ದೇವೆʼʼ ಎಂದು ಧೈರ್ಯ ಹೇಳಿದ್ದರು.

ತಮಿಳುನಾಡು ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಚಿತ್ರರಂಗದಿಂದ ದೂರ ಸರಿದು ವಿಜಯ್‌ ಕಳೆದ ವರ್ಷ ತಮಿಳಗ ವೆಟ್ರಿ ಕಳಗಂ ಪಕ್ಷ ಹುಟ್ಟು ಹಾಕಿದ್ದಾರೆ. ಪಕ್ಷದ ಅಭ್ಯರ್ಥಿಗಳು ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.