ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

E-20 ಬಳಿಕ ಶೀಘ್ರದಲ್ಲೇ ಮಾರುಕಟ್ಟೆಗೆ ಬರುತ್ತಾ E-25 ಪೆಟ್ರೋಲ್? ಗ್ರಾಹಕರ ಗೊಂದಲಕ್ಕೆ ಕೇಂದ್ರ ಹೇಳಿದ್ದೇನು?

E-25 Petrol: ದೇಶದಲ್ಲಿ ಶೀಘ್ರದಲ್ಲೇ E-25 ಪೆಟ್ರೋಲ್ ಪರಿಚಯಿಸಲಾಗುತ್ತದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಸದ್ಯ E-20 ಮಟ್ಟಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. E-25 ಕುರಿತು ಸಂಶೋಧನೆಗಳು ಇನ್ನೂ ನಡೆಯುತ್ತಿದ್ದು, ಎಂಜಿನ್ ಕಾರ್ಯಕ್ಷಮತೆ, ವಾಹನಗಳ ಸುರಕ್ಷತೆ ಹಾಗೂ ವೈಜ್ಞಾನಿಕ ಅಧ್ಯಯನದ ವರದಿ ಬಂದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

E-25 ಪೆಟ್ರೋಲ್‌ ಬಗ್ಗೆ ಹರಿದಾಡಿದ ವದಂತಿಗೆ ಕೇಂದ್ರದಿಂದ ಬ್ರೇಕ್

ಸಾಂದರ್ಭಿಕ ಚಿತ್ರ -

Profile
Sushmitha Jain Jul 7, 2026 7:57 PM

ನವದೆಹಲಿ, ಜು. 7: ದೇಶದಲ್ಲಿ ಶೀಘ್ರದಲ್ಲೇ E-25 (25% Ethanol Blended Petrol) ಪೆಟ್ರೋಲ್ ಪರಿಚಯಿಸಲಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ (Central Government) ತಳ್ಳಿ ಹಾಕಿದೆ. ಸದ್ಯದ E-20 (20% Ethanol Blended Petrol) ಮಟ್ಟಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಉನ್ನತ ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. E-25 ಪೆಟ್ರೋಲ್ ಜಾರಿಗೆ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂಬ ವರದಿಗಳು ಆಧಾರರಹಿತ ಹಾಗೂ ತಪ್ಪು ಮಾಹಿತಿ ಎಂದು ಸರ್ಕಾರ ಹೇಳಿದೆ.

"ಸಂಶೋಧನೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಿರುವಾಗ E-25 ಕುರಿತು ಅಂತಿಮ ನಿರ್ಧಾರ ಹೇಗೆ ಸಾಧ್ಯ?" ಎಂದು ಹಿರಿಯ ಅಧಿಕಾರಿಯೊಬ್ಬರುಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಕಾರ, ಎಥನಾಲ್ ಮಿಶ್ರಣ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ವಾಹನ ತಯಾರಕ ಸಂಸ್ಥೆಗಳು ಹಾಗೂ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಿ, ವೈಜ್ಞಾನಿಕ ಪರೀಕ್ಷೆಗಳ ಬಳಿಕವೇ ಪ್ರತಿ ಹಂತವನ್ನು ಜಾರಿಗೆ ತರಲಾಗುತ್ತದೆ.

ದೇಶದಲ್ಲಿ E-15 ಅನ್ನು 2023ರ ಏಪ್ರಿಲ್‌ನಲ್ಲಿ, E-19 ಅನ್ನು 2024ರ ಏಪ್ರಿಲ್‌ನಲ್ಲಿ ಹಾಗೂ E-20 ಅನ್ನು 2025ರ ಏಪ್ರಿಲ್‌ನಿಂದ ಜಾರಿಗೆ ತರಲಾಗಿದೆ. ಈ ಎಲ್ಲ ಹಂತಗಳಲ್ಲೂ ವಾಹನಗಳ ಕಾರ್ಯ ಕ್ಷಮತೆ, ಸುರಕ್ಷತೆ ಮತ್ತು ಇಂಧನ ಬಳಕೆಯ ಕುರಿತು ಸಮಗ್ರ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ-ಕೆವೈಸಿ ಆಗದೆ ಹಣವಿದ್ದರೂ ಕೊಡದ ಬ್ಯಾಂಕ್; ಸಕಾಲದಲ್ಲಿ ಚಿಕಿತ್ಸೆ ಸಿಗದೆ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟ ವ್ಯಕ್ತಿ

ಸದ್ಯ ಭಾರತದಲ್ಲಿ ಸುಮಾರು 20 ಕೋಟಿ ಪೆಟ್ರೋಲ್ ದ್ವಿಚಕ್ರ ವಾಹನಗಳು ಹಾಗೂ 20 ಲಕ್ಷ ಪೆಟ್ರೋಲ್ ಕಾರುಗಳು E-20 ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಸುತ್ತಿವೆ. ಇದುವರೆಗೆ ಯಾವುದೇ ಗಂಭೀರ ತಾಂತ್ರಿಕ ಸಮಸ್ಯೆಗಳು ವರದಿಯಾಗಿಲ್ಲ ಎಂದು ಸರ್ಕಾರ ವಿವರಿಸಿದೆ.

ಇದೀಗ ವಿವಿಧ ವಾಹನ ಕಂಪನಿಗಳ ವಿವಿಧ ಮಾದರಿಗಳ ಮೇಲೆ E-25 ಹೊಂದಾಣಿಕೆ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಈ ಪರೀಕ್ಷೆಗಳ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ವರದಿಗಳನ್ನು ಪರಿಶೀಲಿಸಿದ ಬಳಿಕ ಮಾತ್ರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಂಜಿನ್ ಕಾರ್ಯಕ್ಷಮತೆ, ವಾಹನಗಳ ಸುರಕ್ಷತೆ, ಇಂಧನ ದಕ್ಷತೆ ಹಾಗೂ ಎಂಜಿನ್ ಬಾಳಿಕೆ ಕುರಿತು ವೈಜ್ಞಾನಿಕ ದೃಢೀಕರಣ ದೊರೆತ ನಂತರವೇ ಎಥನಾಲ್ ಪ್ರಮಾಣ ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕಚ್ಚಾ ತೈಲದ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಇಂಧನ ಸ್ವಾವಲಂಬನೆ ಸಾಧಿಸುವುದು ಹಾಗೂ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶ ಕಲ್ಪಿಸುವುದು ಎಥನಾಲ್ ಮಿಶ್ರಣ ಯೋಜನೆಯ ಪ್ರಮುಖ ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜತೆಗೆ E-25 ಕುರಿತು ಅನಗತ್ಯ ಆತಂಕ ಬೇಡ ಎಂದು ಮನವಿ ಮಾಡಿದೆ.