ಎಲ್ ನಿನೊ ಪರಿಣಾಮ; ಭಾರತದಲ್ಲಿ ಮಳೆ ಕೊರತೆ, ಬರಗಾಲದ ಆತಂಕ
ಪೆಸಿಫಿಕ್ ಮಹಾಸಾಗರದ ನೀರು ಬೆಚ್ಚಗಾಗಿ ಉಂಟಾಗುವ ಎಲ್ ನಿನೊ ಪರಿಣಾಮ ಈ ಬಾರಿ ಭಾರತದಲ್ಲಿ ತೀವ್ರ ಮಳೆ ಕೊರತೆ, ಬರಗಾಲ ಉಂಟಾಗುವ ಆತಂಕ ಎದುರಾಗಿದೆ. ಎಲ್ ನಿನೊ ಪ್ರಬಲವಾಗಿದ್ದು, ಇದು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಶುಕ್ರವಾರ ತಿಳಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಪೆಸಿಫಿಕ್ ಮಹಾಸಾಗರದ (Pacific Ocean) ಉಷ್ಣ ವಲಯದ ಭಾಗದಲ್ಲಿ ಸಮುದ್ರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಪ್ರಕ್ರಿಯೆಯಾಗಿರುವ ಎಲ್ ನಿನೊ (El nino effect to India) ಪರಿಣಾಮ ಈ ಬಾರಿ ಭಾರತದಲ್ಲಿ ತೀವ್ರ ಮಳೆ ಕೊರತೆ (rain), ಬರಗಾಲ (drought fear) ಉಂಟಾಗುವ ಆತಂಕ ಎದುರಾಗಿದೆ. ಎಲ್ ನಿನೊ (El nino) ಕಾರಣದಿಂದ ಜಾಗತಿಕ ಹವಾಮಾನದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಮಳೆ ಮತ್ತು ತಾಪಮಾನದಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಎಂದು ವಿಶ್ವ ಹವಾಮಾನ ಸಂಸ್ಥೆ (World Meteorological Organisation) ಶುಕ್ರವಾರ ಎಚ್ಚರಿಸಿದೆ.
ಸ್ಪ್ಯಾನಿಷ್ ಭಾಷೆಯಲ್ಲಿ ಎಲ್ ನಿನೊ ಎಂದರೆ ಪುಟ್ಟ ಬಾಲಕ ಎಂದರ್ಥ. ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಹುಟ್ಟುವ ಇದು ಜಗತ್ತಿನ ಕೃಷಿ, ಅರ್ಥ ವ್ಯವಸ್ಥೆ, ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಈಗಾಗಲೇ ಹುಟ್ಟಿಕೊಂಡಿರುವ ಎಲ್ ನಿನೊ ಇನ್ನು ಬೆಳೆಯುವ ನಿರೀಕ್ಷೆಯಿದೆ. ಇದು ಸಾಕಷ್ಟು ಪ್ರಬಲವಾಗಿರಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ ತಿಳಿಸಿದೆ.
"ಪಂಜಾಬ್ ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು"; ಪಕ್ಷಾಂತರಿಗಳ ಫೋಟೋ ಹಂಚಿಕೊಂಡ ಆಮ್ ಆದ್ಮಿ
ಎಲ್ ನಿನೊ ಪರಿಣಾಮ ಹಿಮಾಲಯದಾದ್ಯಂತ ಹಿಮದ ನಿಕ್ಷೇಪಗಳು ದಾಖಲೆಯ ಮಟ್ಟದಲ್ಲಿ ಕುಸಿದಿದೆ. ಇದರೊಂದಿಗೆ ಮುಂಗಾರಿಗೆ ಸಿದ್ಧವಾಗುತ್ತಿದ್ದ ಭಾರತದಲ್ಲಿ ಕನಿಷ್ಠ ಮುಂಗಾರು ಉಂಟಾಗುವ ಸಾಧ್ಯತೆ ಇದೆ. ಇದು ಮುಂದೆ ಸಾಕಷ್ಟು ಸವಾಲುಗಳನ್ನು ತರಬಹುದು ಎನ್ನಲಾಗಿದೆ.
ವಿಶ್ವ ಹವಾಮಾನ ಸಂಸ್ಥೆಯ ಅಧ್ಯಯನದ ಪ್ರಕಾರ ಹವಾಮಾನ ವೈಪರೀತ್ಯದ ಪರಿಣಾಮ ಪೆಸಿಫಿಕ್‌ನಲ್ಲಿ ಸ್ಪಷ್ಟ ಬದಲಾವಣೆಯನ್ನು ಸೂಚಿಸಿದೆ. ಸಮುದ್ರದ ಮೇಲ್ಮೈ ತಾಪಮಾನ ವೇಗವಾಗಿ ಏರುತ್ತಿದೆ. ಇದರಿಂದ ಮೇ- ಜುಲೈ ಆರಂಭದಲ್ಲಿ ಎಲ್ ನಿನೊ ಪ್ರಭಾವ ತೀವ್ರಗೊಳ್ಳಲಿದ್ದು, ಭೂ ಮೇಲ್ಮೈ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಜುಲೈ ವರೆಗೆ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ.
ಎಲ್ ನಿನೊ ಸಾಮಾನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಇದು ಸುಮಾರು ಒಂಬತ್ತರಿಂದ 12 ತಿಂಗಳವರೆಗೆ ಇರುತ್ತದೆ. ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಇದರಿಂದ ಬರಗಾಲ ಕಾಣಿಸಿಕೊಳ್ಳುತ್ತದೆ. ದಕ್ಷಿಣ ದಕ್ಷಿಣ ಅಮೆರಿಕಾ, ದಕ್ಷಿಣ ಯುಎಸ್, ಆಫ್ರಿಕಾ ಮತ್ತು ಮಧ್ಯ ಏಷ್ಯಾದ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯನ್ನೂ ಉಂಟು ಮಾಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಎಲ್ ನಿನೊ ಮಳೆಗಾಲದ ಮಳೆಯನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಹೆಚ್ಚಿಸುತ್ತದೆ.
ಹವಾಮಾನ ಬದಲಾವಣೆಯ ಕಾರಣದಿಂದ 2023–2024ರಲ್ಲಿ ಉಂಟಾದ ಪ್ರಬಲ ಎಲ್ ನಿನೊ ಪರಿಣಾಮ 2024 ದಾಖಲೆಯ ಅತ್ಯಂತ ಬಿಸಿಯಾದ ವರ್ಷವಾಗಿತ್ತು. ಹವಾಮಾನ ಬದಲಾವಣೆಯ ಕಾರಣದಿಂದಲೇ ಎಲ್ ನಿನೋ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ಬೆಚ್ಚಗಿನ ಸಾಗರ, ವಾತಾವರಣದ ಬಿಸಿ, ಭಾರೀ ಮಳೆಯಂತಹ ತೀವ್ರ ಹವಾಮಾನದ ಕಾರಣದಿಂದ ಇದು ಉಂಟಾಗುತ್ತದೆ ಎಂಬುದಾಗಿ ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
ಒರಾಕಲ್ ಬಳಿಕ ಮೆಟಾ ಸರದಿ: ಮೇ 20 ರಿಂದ 8,000 ಉದ್ಯೋಗಿಗಳಿಗೆ ಗೇಟ್‌ಪಾಸ್, ಹೊಸ ನೇಮಕಾತಿಯೂ ಇಲ್ಲ
ಈ ವರ್ಷ ಭಾರತದಲ್ಲಿ ಮುಂಗಾರು ಮಳೆಯು ಕಳೆದ 11 ವರ್ಷಗಳಿಗೆ ಹೋಲಿಸಿದರೆ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸೂಚನೆ ಇದೆ. ಇದಕ್ಕೆ ಎಲ್ ನಿನೋ ಕಾರಣವಾಗಿದೆ. ಭಾರತದಲ್ಲಿ ಕೊನೆಯ ಬಾರಿಗೆ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಮಳೆಯು 2023 ರಲ್ಲಿ ಆಗಿತ್ತು. ಇದು ದೇಶದಲ್ಲಿ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಲಿದೆ. ಈಗಾಗಲೇ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಹಣದುಬ್ಬರ ಉಂಟಾಗಿದ್ದು, ಮುಂಗಾರು ಮಳೆಯು ಕಡಿಮೆಯಾದರೆ ದೇಶದ ಆರ್ಥಿಕತೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.