ಹಾಸ್ಟೆಲ್‌ನಲ್ಲಿ 6 ವಿದ್ಯಾರ್ಥಿನಿಯರಿಗೆ ಹಾವು ಕಡಿತ: ಮೂವರ ಸಾವು, ಮತ್ತೋರ್ವಳ ಸ್ಥಿತಿ ಗಂಭೀರ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಗ್ಧ ಬಾಲಕಿಯರು ಬಲಿ
Snake Bites: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿ ಮಲಗಿದ್ದ ಆರು ವಿದ್ಯಾರ್ಥಿನಿಯರಿಗೆ ಹಾವು ಕಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಗಪುರಕ್ಕೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ. ಶಾಲಾ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಮೃತ ವಿದ್ಯಾರ್ಥಿನಿಯರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹಾವು ಕಡಿತಕ್ಕೆ ಒಳಗಾದ ಬಾಲಕಿಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು -
ಮುಂಬೈ, ಆ. 10: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಜಪ್ತಲಾಯಿ ಗ್ರಾಮದ ಸರ್ಕಾರಿ ಅನುದಾನಿತ ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿ ಮಲಗಿದ್ದ ಆರು ವಿದ್ಯಾರ್ಥಿನಿಯರಿಗೆ ಹಾವು ಕಡಿದ (Snake Bite) ಘಟನೆ ಸೋಮವಾರ (ಆಗಸ್ಟ್ 10) ಮುಂಜಾನೆ ನಡೆದಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಮತ್ತೋರ್ವಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಾಸ್ಟೆಲ್‌ನಲ್ಲಿ ಮಲಗಿದ್ದ ವೇಳೆ ವಿದ್ಯಾರ್ಥಿನಿಯರಿಗೆ ಹಾವು ಕಡಿದಿದ್ದು, ಕೆಲವೇ ಸಮಯದಲ್ಲಿ ಅವರು ಅಸ್ವಸ್ಥರಾಗಲು ಆರಂಭಿಸಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಡ್ಚಿರೋಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಚಿಕಿತ್ಸೆ ಪಡೆಯುತ್ತಿದ್ದ ಆರು ವಿದ್ಯಾರ್ಥಿನಿಯರ ಪೈಕಿ 8, 12 ಮತ್ತು 14 ವರ್ಷದ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ. ಉಳಿದ ಮೂವರು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರಲ್ಲಿ ಓರ್ವಳ ಸ್ಥಿತಿ ಏಕಾಏಕಿ ಗಂಭೀರವಾಗಿದೆ. ಆಕೆಗೆ ತುರ್ತು ಹಾಗೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರ ಸಹಕಾರದೊಂದಿಗೆ ವಿಮಾನದ ಮೂಲಕ ನಾಗಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಹಾವು ಕಡಿತದಿಂದ ಸಾವು: ಕರ್ನಾಟಕದಲ್ಲಿಯೇ ಅತ್ಯಧಿಕ! 2025ರಲ್ಲಿ ದುಪ್ಪಟ್ಟು
ಘಟನೆ ವಿದ್ಯಾರ್ಥಿನಿಯರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಆಡಳಿತದ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂದು ಆರೋಪಿಸಿರುವ ಅವರು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹಾಸ್ಟೆಲ್ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಘಟನೆ ಬಳಿಕ ಶಾಲಾ ಆಡಳಿತ ಕೈಗೊಂಡ ಕ್ರಮಗಳ ಬಗ್ಗೆಯೂ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ವಿದ್ಯಾರ್ಥಿನಿಯರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲು ವೈದ್ಯಕೀಯ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಗಡ್ಚಿರೋಲಿ ಜಿಲ್ಲೆಯ ಉಸ್ತುವಾರಿ ಸಚಿವ ಆಶಿಷ್ ಜೈಸ್ವಾಲ್ ಶಾಲೆಗೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಘಟನೆಗೆ ಕಾರಣವಾದ ಪರಿಸ್ಥಿತಿ ಹಾಗೂ ಶಾಲಾ ಆಡಳಿತದ ನಿರ್ಲಕ್ಷ್ಯದ ಆರೋಪಗಳ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.