ಚೆನ್ನೈನಲ್ಲಿ ಹಕ್ಕಿ ಜ್ವರದ ಭೀತಿ; ನೂರಾರು ಕಾಗೆಗಳ ಹಠಾತ್ ಸಾವು: ಮತ್ತೊಮ್ಮೆ ಕೋವಿಡ್ ರೀತಿಯ ಸಾಂಕ್ರಾಮಿಕ ರೋಗ ಹರಡುತ್ತಾ?
ಚೆನ್ನೈನ ವಿವಿಧ ಭಾಗಗಳಲ್ಲಿ ನೂರಾರು ಕಾಗೆಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, H5N1 ಬರ್ಡ್ ಫ್ಲೂ ಹರಡುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆ ಎಚ್ಚರಿಕೆ ಪ್ರಕಟಿಸಿ, ಮೃತ ಪಕ್ಷಿಗಳನ್ನು ಮುಟ್ಟದಂತೆ ಹಾಗೂ ಇಂತಹ ಪ್ರಕರಣಗಳು ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಸಾಂದರ್ಭಿಕ ಚಿತ್ರ. -
ಚೆನ್ನೈ, ಫೆ. 6: ತಮಿಳುನಾಡಿನ (Tamil Nadu) ರಾಜಧಾನಿ ಚೆನ್ನೈಯಲ್ಲಿ (Chennai) ನೂರಾರು ಕಾಗೆಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಕಂಡುಬಂದಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಅತೀ ವೇಗವಾಗಿ ಹರಡುವ H5N1 (ಬರ್ಡ್ ಫ್ಲೂ) ವೈರಸ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. H5N1 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಕೇಂದ್ರ ಪಶುಸಂಗೋಪನೆ ಸಚಿವಾಲಯವು ತಮಿಳುನಾಡು ಸರ್ಕಾರಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
"H5N1 ವೈರಸ್ ಪ್ರಾಣಿ ಮತ್ತು ಮಾನವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಅತಿ ವೇಗವಾಗಿ ಹರಡುತ್ತಿರುವ ಈ ವೈರಸ್ ಅನ್ನು ತಡೆಗಟ್ಟಲು ತಕ್ಷಣದ ಕ್ರಮ ಅಗತ್ಯ" ಎಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಪ್ರಮುಖ ಮುನ್ನೆಚ್ಚರಿಕೆಗಳು
ಸತ್ತ ಪಕ್ಷಿಗಳೊಂದಿಗೆ ನೇರ ಸಂಪರ್ಕಕ್ಕೆ ಬರಬಾರದು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಅಲ್ಲದೇ ಮೃತ ಪಕ್ಷಿಗಳ ಮರಣೋತ್ತರ ಪರೀಕ್ಷೆಯನ್ನು (Postmortem) ಸ್ಥಳದಲ್ಲಿಯೇ ಮಾಡದಂತೆ ಪಶು ವೈದ್ಯಕೀಯ ಸಿಬ್ಬಂದಿಗೆ ಆದೇಶಿಸಲಾಗಿದೆ. 'ಒನ್ ಹೆಲ್ತ್' (One Health) ಯೋಜನೆಯಡಿ ಮಾನವ ಆರೋಗ್ಯ, ವನ್ಯಜೀವಿ ಮತ್ತು ಪಶುಸಂಗೋಪನಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಸಮಸ್ಯೆಯನ್ನು ಸಮಗ್ರವಾಗಿ ಎದುರಿಸಬೇಕು” ಎಂದು ಸಚಿವಾಲಯ ಸೂಚಿಸಿದೆ.
ಚೆನ್ನೈಯಲ್ಲಿ ಕಾಗೆಗಳ ಸಾವಿನ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಪಶುಸಂಗೋಪನಾ ಖಾತೆ ರಾಜ್ಯ ಸಚಿವ ಎಸ್.ಪಿ. ಸಿಂಗ್ ಬಘೇಲ್, "ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಅಗತ್ಯ ಮಾರ್ಗಸೂಚಿಗಳನ್ನು ನೀಡುತ್ತಲೇ ಇರುತ್ತದೆ" ಎಂದು ಭರವಸೆ ನೀಡಿದ್ದಾರೆ.
ಚೆನ್ನೈಯಲ್ಲಿ ಸತ್ತು ಬಿದ್ದ ಕಾಗೆಗಳು:
Several crow deaths in Chennai last month have been linked to H5N1 avian influenza. After reports from Adyar, TN animal husbandry department’s animal disease intelligence unit collected samples in late January & sent them to ICAR-NIHAS, Bhopal. #news #crow #influenza #chennailive pic.twitter.com/JCcV8U9Fbq
— Chennai Live Digital 104.8 (@chennailive1048) February 5, 2026
ಏನಿದು H5N1 ವೈರಸ್?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, H5N1 ಎಂಬುದು ಹಕ್ಕಿಗಳಲ್ಲಿ ಅತೀ ವೇಗವಾಗಿ ಹರಡುವ ಉಸಿರಾಟದ ಕಾಯಿಲೆ. ಇದು ಮಾನವರಿಗೂ ಹರಡುವ ಸಾಧ್ಯತೆಯಿದ್ದು, ಸಾಮಾನ್ಯ ಜ್ವರದಿಂದ ಹಿಡಿದು ಸಾವಿನವರೆಗೆ ಗಂಭೀರ ಪರಿಣಾಮ ಬೀರಬಹುದು. ತೀವ್ರ ಉಸಿರಾಟದ ಸಮಸ್ಯೆ, ಕಣ್ಣಿನ ಸೋಂಕು (Conjunctivitis), ಜ್ವರ ಮತ್ತು ಸುಸ್ತು ಆಗುವುದು ಈ ರೋಗದ ಪ್ರಮುಖ ಲಕ್ಷಣ.
ಹಿನ್ನೆಲೆ
H5N1 ವೈರಸ್ ಮೊದಲ ಬಾರಿಗೆ 1996ರಲ್ಲಿ ಪತ್ತೆಯಾಗಿತ್ತು. 2021ರಿಂದ ಈ ವೈರಸ್ ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಹಕ್ಕಿಗಳ ಸಾವಿಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಸಸ್ತನಿಗಳಿಗೂ ಹರಡುತ್ತಿರುವುದು ಆತಂಕದ ವಿಷಯ ಎಂದು ತಜ್ಞರು ಹೇಳಿದ್ದಾರೆ.