ಆಗ್ರಾ ರಸ್ತೆಯಲ್ಲಿ ಬೃಹತ್ ಗುಂಡಿ: ಏಣಿ ಮೂಲಕ 'ಪಾತಾಳʼಕ್ಕೆ ಇಳಿದು ಪ್ರತಿಭಟನೆ
Huge Pothole on Agra Roads: ಉತ್ತರ ಪ್ರದೇಶದ ಆಗ್ರಾದಲ್ಲಿ ರಸ್ತೆಯ ಮಧ್ಯೆ ಬೃಹತ್ ಗುಂಡಿ ಉಂಟಾಗಿದ್ದು, ಸಮಾಜವಾದಿ ಪಕ್ಷದ ನಾಯಕ ನಿತಿನ್ ಕೊಹ್ಲಿ ಏಣಿ ಮೂಲಕ ಆ ಗುಂಡಿಯೊಳಗೆ ಇಳಿದು ಪ್ರತಿಭಟನೆ ನಡೆಸಿದರು. ರಸ್ತೆ ಹಠಾತ್ತನೆ ಕುಸಿದು, ಹಲವು ಅಡಿ ಆಳದ ಹೊಂಡ ನಿರ್ಮಾಣವಾಗಿ, ಅಧಿಕಾರಿಗಳು ಆ ಮಾರ್ಗವನ್ನು ಸಂಚಾರಕ್ಕೆ ಮುಚ್ಚಬೇಕಾಯಿತು. ಅಚ್ಚರಿ ಎಂದರೆ ಈ ರಸ್ತೆ ಜುಲೈ 13ರಂದು ಉದ್ಘಾಟನೆಯಾಗಿತ್ತು.
ಆಗ್ರಾ ರಸ್ತೆಯಲ್ಲಿನ ಬೃಹತ್ ಗುಂಡಿಗೆ ಇಳಿದು ಪ್ರತಿಭಟನೆ ನಡೆಸಿದ ನಿತಿನ್ ಕೊಹ್ಲಿ -
ಲಖನೌ, ಆ. 8: ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ರಸ್ತೆಯ ಮಧ್ಯೆ ಬೃಹತ್ ಗುಂಡಿ ಉಂಟಾಗಿದ್ದು, ಸಮಾಜವಾದಿ ಪಕ್ಷದ (Samajwadi Party) ನಾಯಕ ನಿತಿನ್ ಕೊಹ್ಲಿ ಏಣಿ ಬಳಸಿ ಆ ಗುಂಡಿಯೊಳಗೆ ಇಳಿದು ಪ್ರತಿಭಟನೆ ನಡೆಸಿದರು. ರಸ್ತೆ ಏಕಾಏಕಿ ಕುಸಿದು ಉಂಟಾದ ಈ ಗುಂಡಿಯೊಳಗೆ ಸ್ಥಳೀಯರು ನೋಡುತ್ತಿದ್ದಂತೆಯೇ ನಿತಿನ್ ಕೊಹ್ಲಿ ಇಳಿದು, ಮುಂಗಾರು ಅವಧಿಯಲ್ಲಿ ಪದೇ ಪದೆ ರಸ್ತೆಗಳು ಕುಸಿಯುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ನಗರದ ಐಷಾರಾಮಿ ಕಮಲಾ ನಗರ ಪ್ರದೇಶದಲ್ಲಿ ಶುಕ್ರವಾರ (ಆ. 7) ರಸ್ತೆ ಹಠಾತ್ತನೆ ಕುಸಿದು, ಹಲವಾರು ಅಡಿ ಆಳದ ಹೊಂಡ ನಿರ್ಮಾಣವಾಗಿ, ಅಧಿಕಾರಿಗಳು ಆ ಮಾರ್ಗವನ್ನು ಮುಚ್ಚಬೇಕಾಯಿತು. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯವಾದ ಬಗ್ಗೆ ವರದಿಯಾಗಿಲ್ಲ. ಆದರೆ ಆ ಸಮಯದಲ್ಲಿ ವಾಹನವೊಂದು ಹಾದುಹೋಗಿದ್ದರೆ ದೊಡ್ಡ ಅಪಘಾತಕ್ಕೆ ಕಾರಣವಾಗುತ್ತಿತ್ತು ಎಂದು ನಿವಾಸಿಗಳು ಹೇಳಿದ್ದಾರೆ.
ರಸ್ತೆ ಮದ್ಯದ ಗುಂಡಿಗೆ ಇಳಿದು ಪ್ರತಿಭಟನೆ ನಡೆಸಿದ ನಿತಿನ್ ಕೊಹ್ಲಿ:
ಗುಂಡಿಯೊಳಗೆ ನಿಂತು, ಕೊಹ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ತಾಜ್‌ಮಹಲ್ ನಗರಿಯು ಗುಂಡಿಗಳ ನಗರಿ ಆಗಿ ಬದಲಾಗುತ್ತಿದೆ ಎಂದು ಹೇಳಿದರು. ಗುಂಡಿಯನ್ನು ಪಾತಾಳ ಲೋಕಕ್ಕೆ ಹೋಗುವ ರಸ್ತೆ ಎಂದು ಕರೆದ ಅವರು, ಮಳೆಗಾಲದಲ್ಲಿ ನಗರದ ರಸ್ತೆಗಳು ಕುಸಿಯುತ್ತವೇ ಇರುತ್ತವೆ. ಇದು ಜನರನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಮನೆ, ಗೋಡೆ ಕುಸಿದು 9 ಮಂದಿ ದುರ್ಮರಣ
ಲಖನೌ-ಕಾನ್ಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಹೊಸದಾಗಿ ತೆರೆಯಲಾದ ಹೆದ್ದಾರಿಯಲ್ಲಿ ಬಿರುಕುಗಳು ಮತ್ತು ಸವೆತಗಳು ವರದಿಯಾದ ನಂತರ ಆಗ್ರಾ ಘಟನೆ ನಡೆದಿದೆ. ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ ಮತ್ತು ಕಂಪನಿಯ ಕಾರ್ಯಾಚರಣೆಗಳಿಂದ ಡಿಬಾರ್ ಮಾಡಲಾಗಿದೆ. ಎಂಜಿನಿಯರಿಂಗ್ ತಂಡದ ಮುಖ್ಯಸ್ಥರನ್ನೂ ಅಮಾನತುಗೊಳಿಸಲಾಗಿದೆ ಎಂದು ಎನ್‌ಎಚ್‌ಎಐ ಹೇಳಿದೆ.
4,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಲಖನೌ-ಕಾನ್ಪುರ ಎಕ್ಸ್‌ಪ್ರೆಸ್‌ವೇಯನ್ನು ಆಗ್ರಾ ಮೂಲದ ಪಿಎನ್‌ಸಿ ಇನ್ಫ್ರಾಟೆಕ್ ಲಿಮಿಟೆಡ್ ನಿರ್ಮಿಸಿದೆ. ಇದನ್ನು ಜುಲೈ 13ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದರು.