ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿ ಶಾಸಕರ ನಿವಾಸದ ಆವರಣದಲ್ಲಿ ಸ್ಫೋಟ! ಹೆಚ್ಚಿದ ಭೀತಿ

ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಬಿಜೆಪಿ ಶಾಸಕ ಹಾಗೂ ಸರ್ಕಾರದ ವಕ್ತಾರ ಸಪಮ್ ರಂಜನ್ ಸಿಂಗ್ ಅವರ ನಿವಾಸದ ಆವರಣದಲ್ಲಿ ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಅಪರಿಚಿತರು ಸ್ಫೋಟಕ ಸಾಧನ ಸಿಡಿಸಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ನಿವಾಸದ ಗೋಡೆಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಬರ್ಬರ ದಾಳಿ ಎಂದು ಖಂಡಿಸಿದ್ದಾರೆ.

ಮಣಿಪುರ ಬಿಜೆಪಿ ಶಾಸಕನ ನಿವಾಸದ ಮೇಲೆ ಸ್ಫೋಟಕ ದಾಳಿ

ಬಿಜೆಪಿ ಶಾಸಕ ಸಪಮ್ ರಂಜನ್ -

Profile
Sushmitha Jain Aug 29, 2026 8:15 AM

ಇಂಫಾಲ್, ಆಗಸ್ಟ್ 28: ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಕೊಂಥೌಜಮ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ರಾಜ್ಯ ಸರ್ಕಾರದ ವಕ್ತಾರ ಸಪಮ್ ರಂಜನ್ ಸಿಂಗ್ ಅವರ ನಿವಾಸದ ಆವರಣದಲ್ಲಿ ಶುಕ್ರವಾರ ಮುಂಜಾನೆ ಸ್ಫೋಟ ಸಂಭವಿಸಿದೆ. ಅಪರಿಚಿತ ವ್ಯಕ್ತಿಗಳು ಸ್ಫೋಟಕ ಸಾಧನವನ್ನು ಸಿಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 28ರ ಮುಂಜಾನೆ ಸುಮಾರು 1.30ಕ್ಕೆ ಶಾಸಕರ ನಿವಾಸದ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಭಾರೀ ಶಬ್ದ ಕೇಳಿಸಿದೆ. ಸ್ಫೋಟದ ತೀವ್ರತೆಗೆ ಮನೆಯೂ ಕಂಪಿಸಿದ ಅನುಭವವಾಗಿತ್ತು ಎಂದು ಸಪಮ್ ರಂಜನ್ ಸಿಂಗ್ ತಿಳಿಸಿದ್ದಾರೆ.

ಸ್ಫೋಟದಿಂದ ನಿವಾಸದ ಗೋಡೆಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದ್ದು, ನೆಲದಲ್ಲಿ ಸಣ್ಣ ಗುಂಡಿಯೊಂದು ನಿರ್ಮಾಣವಾಗಿದೆ. ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಬಳಸಲಾದ ಸ್ಫೋಟಕದ ಸ್ವರೂಪ, ಅದನ್ನು ಹೇಗೆ ಸಿಡಿಸಲಾಯಿತು ಹಾಗೂ ಘಟನೆಯ ಹಿಂದಿರುವ ಉದ್ದೇಶದ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗಾಗಿ ಭದ್ರತಾ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಿವೆ.

ಘಟನೆಗೂ ಮುನ್ನ ತಮಗೆ ಯಾವುದೇ ಬೆದರಿಕೆ ಬಂದಿರಲಿಲ್ಲ ಎಂದು ಸಪಮ್ ರಂಜನ್ ಸಿಂಗ್ ಹೇಳಿದ್ದಾರೆ. ಗುರುವಾರ ರಾಜ್ಯದ ಹೊರಗಿನಿಂದ ಇಂಫಾಲ್‌ಗೆ ಮರಳಿದ್ದ ಅವರು, ಸಂಜೆ ತಮ್ಮ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಇದಕ್ಕೂ ಒಂದು ದಿನ ಮೊದಲು ನವದೆಹಲಿಗೆ ತೆರಳಿ, ಮಣಿಪುರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ನಾಯಕರೊಂದಿಗೆ ಸಭೆ ನಡೆಸಿದ್ದರು.

ಘಟನೆಯನ್ನು ಖಂಡಿಸಿರುವ ಸಿಂಗ್, ಯಾರೇ ಇದರ ಹಿಂದೆ ಇದ್ದರೂ ಇಂತಹ ಹಿಂಸಾಚಾರವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ದೇವರ ಕೃಪೆಯಿಂದ ಯಾರಿಗೂ ಅಪಾಯವಾಗಿಲ್ಲ, ಇಂತಹ ಘಟನೆಗಳು ಮತ್ತೆಂದೂ ನಡೆಯಬಾರದು ಎಂದು ಅವರು ತಿಳಿಸಿದ್ದಾರೆ.

ಹತ್ತಿರದಿಂದ ಶೂಟ್, ಮುರಿದ ಪಕ್ಕೆಲುಬು...ಹನೂರು ಶೂಟೌಟ್‌ ವೇಳೆ ಹತರಾದ ತಮಿಳುನಾಡು ಬೇಟೆಗಾರರ ಮರಣೋತ್ತರ ಪರಿಕ್ಷೆಯ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಸಿಎಂ ಭೇಟಿ, ಘಟನೆ ಖಂಡನೆ

ಮಣಿಪುರ ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಶುಕ್ರವಾರ ಮಧ್ಯಾಹ್ನ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಸ್ಫೋಟ ಸಂಭವಿಸಿದ ಸ್ಥಳವನ್ನು ಪರಿಶೀಲಿಸಿದರು.

ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು ಈ ಘಟನೆಯನ್ನು “ಅರ್ಥಹೀನ ಮತ್ತು ಬರ್ಬರ ದಾಳಿ” ಎಂದು ಖಂಡಿಸಿ, ಸಾರ್ವಜನಿಕ ಪ್ರತಿನಿಧಿಯ ಮೇಲೆ ನಡೆದ ಈ ದಾಳಿಗೆ ಕಾರಣರಾದವರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಸ್ಫೋಟವನ್ನು ಖಂಡಿಸಿ ಕೊಂಥೌಜಮ್ ಪ್ರದೇಶದ ಮಹಿಳೆಯರು ಶಾಸಕರ ನಿವಾಸದ ಹೊರಗೆ ಧರಣಿ ನಡೆಸಿದರು. ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಅಂತ್ಯ ಹಾಡಬೇಕು ಎಂದು ಅವರು ಆಗ್ರಹಿಸಿದರು. ಸದ್ಯ ಭದ್ರತಾ ಸಂಸ್ಥೆಗಳು ಸ್ಫೋಟದ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದು, ಘಟನೆಯ ಹಿಂದಿನ ಉದ್ದೇಶವೇನು ಮತ್ತು ಇದು ಮಣಿಪುರದ ವ್ಯಾಪಕ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದೆಯೇ ಎಂಬುದನ್ನು ತನಿಖೆಯಿಂದ ತಿಳಿಯಬೇಕಿದೆ.