ನಿರಂತರ ಮಳೆ: ಒಂದೇ ದಿನದಲ್ಲಿ ಮಹಾರಾಷ್ಟ್ರದಲ್ಲಿ 13 ಮಂದಿ ಸಾವು
ಮಹಾರಾಷ್ಟ್ರದಾದ್ಯಂತ ತೀವ್ರ ಮಳೆಗೆ ಒಂದೇ ದಿನದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಮುಂಬೈ, ಥಾಣೆ, ಪಾಲ್ಘರ್, ಪುಣೆ, ನಾಸಿಕ್ ಸೇರಿದಂತೆ ಮಹಾರಾಷ್ಟ್ರದ ಹಲವು ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು, ಅಲ್ಲಲ್ಲಿ ಭೂಕುಸಿತ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವೆಡೆ ಮಳೆ ಸಂಬಂಧಿತ ದುರಂತಗಳು ನಡೆದಿವೆ. ಭಾರತ ಹವಾಮಾನ ಇಲಾಖೆ (ಐಎಂಡಿ) ರಾಜ್ಯಾದ್ಯಂತ ಆರೆಂಜ್ ಅಲರ್ಟ್ ನೀಡಿದೆ.
ಸಂಗ್ರಹ ಚಿತ್ರ -
ಮಹಾರಾಷ್ಟ್ರ: ಭಾರಿ ಮಳೆಯಿಂದಾಗಿ (Heavy rain) ಮುಂಬೈ, ಥಾಣೆ, ಪಾಲ್ಘರ್, ಪುಣೆ, ನಾಸಿಕ್ ಸೇರಿದಂತೆ ಮಹಾರಾಷ್ಟ್ರದ (Maharastra) ಹಲವು ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದೇ ದಿನದಲ್ಲಿ ಸುಮಾರು 13 ಮಂದಿ ಸಾವನ್ನಪ್ಪಿದ್ದು, ಮುಂಬೈ, ಕೊಲ್ಹಾಪುರ, ಸತಾರಾ, ಸಿಂಧುದುರ್ಗ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಭಾರತ ಹವಾಮಾನ ಇಲಾಖೆ (India Meteorological Department) ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಮಹಾರಾಷ್ಟ್ರದಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಲವಾರು ಅಪಘಾತಗಳು ಸಂಭವಿಸಿವೆ.
ನಿರಂತರ ಭಾರೀ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು, ಅಲ್ಲಲ್ಲಿ ಭೂಕುಸಿತ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮುಂಬೈ, ಕೊಲ್ಹಾಪುರ, ಸತಾರಾ, ಸಿಂಧುದುರ್ಗ ಮತ್ತು ರತ್ನಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಇನ್ನು ಕೆಲವೆಡೆ ಸಾಮಾನ್ಯ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಮುಂಬೈ, ಥಾಣೆ, ರಾಯಗಢ, ಪುಣೆ ಮತ್ತು ನಾಸಿಕ್‌ನ ಘಟ್ಟಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು, ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ಕಚೇರಿಗಳು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಪ್ರಕಟಿಸುವಂತೆ ಘೋಷಿಸಿದೆ. ಜೊತೆಗೆ ತುರ್ತು ಕ್ರಮಗಳಿಗಾಗಿ ವಿಪತ್ತು ಪರಿಹಾರ ಪಡೆಗಳನ್ನು ನಿಯೋಜಿಸಿದೆ. ನಾಸಿಕ್-ತ್ರಿಂಬಕೇಶ್ವರ ಪ್ರದೇಶದಲ್ಲಿ ಮಂಗಳವಾರ ಮೇಘ ಸ್ಫೋಟವಾಗುವ ಎಚ್ಚರಿಕೆ ಸಿಕ್ಕಿರುವುದರಿಂದ ನಾಗರಿಕರು ಜಾಗರೂಕರಾಗಿರಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ.
🚨 IMPORTANT UPDATE
— MSRDCofficial (@MSRDC_official) July 6, 2026
✅ Traffic has resumed on the Pune–Mumbai Connecting Link Road. Vehicular movement has been restored after completion of extensive safety operations.
Despite relentless monsoon conditions, including heavy rainfall, strong winds and low visibility, MSRDC… pic.twitter.com/LCRirbWao0
ಜನಜೀವನ ಅಸ್ತವ್ಯಸ್ತ
ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮುಂಬೈ, ಥಾಣೆ, ಪಾಲ್ಘರ್ ಮತ್ತು ವಿಶಾಲ ಕೊಂಕಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಗಳು ಮುಳುಗಿವೆ. ಅನೇಕ ವಸತಿ ಕಟ್ಟಡಗಳೊಳಗೆ ಮಳೆ ನೀರು ಪ್ರವೇಶಿಸಿದೆ. ಕಳೆದ 48 ಗಂಟೆಗಳಲ್ಲಿ ಮುಂಬೈ ನಗರದಲ್ಲಿ 300 ಮಿಮೀ ಮಳೆಯಾಗಿದ್ದು, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 380 ಮಿಮೀ ಮತ್ತು 345 ಮಿಮೀ ಮಳೆಯಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದಾದ್ಯಂತ ಒಂಬತ್ತು ಜನರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇವರಲ್ಲಿ ಎಂಟು ಜನರು ಗೋಡೆ ಕುಸಿದು ಮತ್ತು ಒಬ್ಬರು ಮರ ಬಿದ್ದು ಸಾವನ್ನಪ್ಪಿದ್ದಾರೆ. ಮುಂಬೈನ ಉಪನಗರದಲ್ಲಿ ಆರು ಮಂದಿ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಇನ್ನು ಮುಂಬೈ, ಪುಣೆ ಮತ್ತು ಥಾಣೆಯಲ್ಲಿ ತಲಾ ಒಬ್ಬರು ಮರ ಬಿದ್ದು ಸಾವನ್ನಪ್ಪಿದ್ದಾರೆ. ಮುಂಬೈನ ಮನ್ಖುರ್ಡ್ ಪ್ರದೇಶದಲ್ಲಿ ಮೂರು ಅಂತಸ್ತಿನ ಚಾಲ್‌ನ ಒಂದು ಭಾಗ ಕುಸಿದು ಆರು ಜನರು ಸಾವನ್ನಪ್ಪಿದ್ದಾರೆ. ಕಟ್ಟಡ ಅಪಾಯಕಾರಿಯಾಗಿದೆ ಎಂದು ಘೋಷಿಸಲಾಗಿದ್ದು, ಜನರು ಸ್ಥಳಾಂತರಿಸಲು ಸಿದ್ಧತೆ ನಡೆಸುತ್ತಿದ್ದಾಗ ದುರಂತ ಸಂಭವಿಸಿದೆ.
ಮಹಾರಾಷ್ಟ್ರದಾದ್ಯಂತ ಸೋಮವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಸುಮಾರು 13 ಮಂದಿ ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ. ಭಾರೀ ಮಳೆಯಿಂದಾಗಿ ಸುಮಾರು 100 ಮನೆಗಳು ಹಾನಿಗೊಳಗಾಗಿದ್ದು, ಪ್ರವಾಹ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮಳೆ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಹೈ ಅಲರ್ಟ್ ಘೋಷಿಸಿದ್ದು, ಯುದ್ಧೋಪಾದಿಯಲ್ಲಿ ತುರ್ತು ಕಾರ್ಯಗಳನ್ನು ನಿರ್ವಹಿಸಲು ತಂಡಗಳನ್ನು ನಿಯೋಜಿಸಿದೆ. ವಿಪತ್ತು ನಿರ್ವಹಣಾ ಇಲಾಖೆಯು 24/7 ಪರಿಸ್ಥಿತಿ ಮೇಲ್ವಿಚಾರಣೆ ನಡೆಸುತ್ತಿದೆ. ಮುಂಬೈನಲ್ಲಿರುವ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ನಾಗರಿಕರು ನಡೆಸುವ ಶಾಲೆ ಮತ್ತು ಕಾಲೇಜುಗಳನ್ನು ಮಂಗಳವಾರ ಮುಚ್ಚಲು ಆದೇಶಿಸಲಾಗಿದೆ.
ನೀರಿನ ಮಟ್ಟ ಏರಿಕೆ
ಭಾರೀ ಮಳೆಯಿಂದಾಗಿ ಮುಂಬೈಗೆ ಸರಬರಾಜು ಮಾಡುವ ನೀರಿನ ಸಂಗ್ರಹವು ಗಮನಾರ್ಹವಾಗಿ ಹೆಚ್ಚಳವಾಗಿದೆ. ಮುಂಬೈಗೆ ಸರಬರಾಜು ಮಾಡುವ ಏಳು ಜಲಾಶಯಗಳಲ್ಲಿ ನೀರಿನ ಸಂಗ್ರಹವು ಶೇ. 28.92ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟ ಶೇಕಡಾ 12ರಷ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ; 38 ಮಂದಿಗೆ ಮರಣದಂಡನೆ, 11 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಹೈಕೋರ್ಟ್
ಎಚ್ಚರಿಕೆ
ಮುಂಬೈ ಸೇರಿದಂತೆ ಅದರ ಉಪನಗರಗಳಲ್ಲಿ ಜುಲೈ 7, ಜುಲೈ 8ರಂದು ಭಾರಿ ಗಾಳಿ, ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ನಾಸಿಕ್ ನಗರ ಮತ್ತು ಇಗತ್ಪುರಿ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜಿಲ್ಲೆಯ ಕೆಲವು ಭಾಗಗಳಲ್ಲಿ 300 ಮಿಮೀಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ತ್ರಿಂಬಕೇಶ್ವರ ಪ್ರದೇಶದಲ್ಲಿ ಮೇಘಸ್ಫೋಟದ ಎಚ್ಚರಿಕೆಯನ್ನು ನೀಡಲಾಗಿದೆ. ಭಾರೀ ಮಳೆಯ ಕಾರಣ ಜನರು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಬಿಎಂಸಿ ತಿಳಿಸಿದೆ.