ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೂರಾರು ಜನರ ಜೀವ ಉಳಿಸಿದ ಪೈಲಟ್‌ಗೆ ಸ್ಮಿತ್‌ಗಾಗಿ ತುಜ್‌ ಮೇ ರಬ್‌ ದಿಕ್‌ತಾಹೇ ಹಾಡು ಹಾಡಿದ ಇಸ್ರೇಲಿ ಗಾಯಕ!

ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯ ವೇಳೆ ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿ ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲಿ ಗಾಯಕ ಇಟಾಯ್ ಬೆಂಡಾ ವಿಶೇಷ ಗೌರವ ಸಲ್ಲಿಸಿದ್ದಾರೆ. ಶಾರುಖ್ ಖಾನ್ ಅಭಿನಯದ ‘ತುಜ್ ಮೇ ರಬ್ ದಿಖ್ತಾ ಹೈ’ ಹಾಡನ್ನು ಹಾಡಿ, ಅದನ್ನು ಕ್ಯಾಪ್ಟನ್ ಸ್ಮಿತ್ ಹಾಗೂ ಭಾರತೀಯರಿಗೆ ಸಮರ್ಪಿಸಿದ್ದಾರೆ.

ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಇಸ್ರೇಲಿ ಗಾಯಕನ ವಿಶೇಷ ಗೌರವ

ಇಸ್ರೇಲ್ ಗಾಯಕ ಇಟಾಯ್ ಬೆಂಡಾ -

Profile
Sushmitha Jain Oct 6, 2026 12:16 PM

ಟೆಲ್ ಅವೀವ್, ಅಕ್ಟೋಬರ್ 5: ಫ್ಲೈದುಬೈ ವಿಮಾನದಲ್ಲಿ (Flydubai flight) ಸಂಭವಿಸಿದ ಭೀಕರ ಘಟನೆಯ ವೇಳೆ ಸಮಯಪ್ರಜ್ಞೆ ಹಾಗೂ ಧೈರ್ಯ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ (Indian pilot) ಕ್ಯಾಪ್ಟನ್ ಸ್ಮಿತ್ ಮಚ್ಚರ್ (Captain Smit Machchhar) ಅವರಿಗೆ ವಿಶ್ವದ ವಿವಿಧೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೀಗ ಇಸ್ರೇಲಿ-ಅಮೆರಿಕನ್ ಗಾಯಕ ಇಟಾಯ್ ಬೆಂಡಾ (Itay Benda) ಅವರು ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ‘ರಬ್ ನೆ ಬನಾ ದಿ ಜೋಡಿ’ ಚಿತ್ರದ ಜನಪ್ರಿಯ ‘ತುಜ್ ಮೇ ರಬ್ ದಿಖ್ತಾ ಹೈ’ ಹಾಡನ್ನು ಕಲಿತು ಹಾಡುವ ಮೂಲಕ ಕ್ಯಾಪ್ಟನ್ ಸ್ಮಿತ್ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಇಟಾಯ್ ಬೆಂಡಾ ಹಿಂದಿಯಲ್ಲಿ ಹಾಡುತ್ತಾ, ಈ ಹಾಡನ್ನು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ವಿಶ್ವದಾದ್ಯಂತ ಇರುವ ಭಾರತೀಯರಿಗೆ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ. “ಇದು ನನ್ನ ಕಡೆಯಿಂದ ಧನ್ಯವಾದ ಹೇಳುವ ಒಂದು ಸಣ್ಣ ಪ್ರಯತ್ನ” ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ. ಅವರ ಹಿಂದಿ ಉಚ್ಚಾರಣೆ ಹಾಗೂ ಭಾವಪೂರ್ಣ ಗಾಯನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಯಾಪ್ಟನ್ ಸ್ಮಿತ್‌ಗೆ ಹಾಡಿನ ಮೂಲಕ ನಮನ

2008ರಲ್ಲಿ ಬಿಡುಗಡೆಯಾದ ರಬ್ ನೆ ಬನಾ ದಿ ಜೋಡಿ ಚಿತ್ರದ ಈ ಹಾಡನ್ನು ಮೂಲತಃ ರೂಪ್ ಕುಮಾರ್ ರಾಥೋಡ್ ಹಾಡಿದ್ದಾರೆ. ಕ್ಯಾಪ್ಟನ್ ಸ್ಮಿತ್ ಅವರ ಸಾಹಸಕ್ಕೆ ಗೌರವ ಸೂಚಿಸಲು ಇಟಾಯ್ ಅವರು ವಿಶೇಷವಾಗಿ ಈ ಹಿಂದಿ ಹಾಡನ್ನು ಕಲಿತು ಹಾಡಿರುವುದು ಗಮನ ಸೆಳೆದಿದೆ. ಹಲವರು ಇದನ್ನು ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹ ಹಾಗೂ ಮಾನವೀಯತೆಯ ಸುಂದರ ಅಭಿವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.

ಪೈಲಟ್ ಕೊಂದು ಫ್ಲೈದುಬೈ ವಿಮಾನ ಅಪಹರಣ, ಇಸ್ರೇಲ್ ಏರ್ ಪೋರ್ಟ್ ಮೇಲೆ ದಾಳಿಗೆ ಸಂಚು: ಬಯಲಾಯ್ತು ಉಗ್ರ ಸಹ ಪೈಲಟ್ ನ ಡೆಡ್ಲಿ ಪ್ಲ್ಯಾನ್

ವಿಮಾನದಲ್ಲೇ ಕ್ಯಾಪ್ಟನ್ ಮೇಲೆ ದಾಳಿ
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಒಮಾನ್ ಮೂಲದ ಸಹ ಪೈಲಟ್ ದಾಳಿ ನಡೆಸಿದ್ದ. ಘಟನೆಯ ವೇಳೆ ವಿಮಾನದ ನಿಯಂತ್ರಣಕ್ಕೆ ಅಡ್ಡಿಪಡಿಸುವ ಪ್ರಯತ್ನವೂ ನಡೆದಿತ್ತು ಎಂದು ವರದಿಯಾಗಿದೆ.

ದಾಳಿಯಲ್ಲಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಕಾಕ್‌ಪಿಟ್‌ನ ನಿಯಂತ್ರಣವನ್ನು ಮರಳಿ ಪಡೆಯಲು ನೆರವಾದರು. ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರ ಸಹಕಾರದಿಂದ ಸಹ ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು. ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಕ್ಯಾಪ್ಟನ್ ಸ್ಮಿತ್ ಅವರ ಸಾಹಸಕ್ಕೆ ಈಗಾಗಲೇ ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಇಟಾಯ್ ಬೆಂಡಾ ಹಾಡಿನ ಮೂಲಕ ಸಲ್ಲಿಸಿರುವ ಗೌರವವೂ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಗಮನ ಸೆಳೆದಿದೆ.