ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jagdeep Dhankhar: ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್‌ ಧನಕರ್‌

Jagdeep Dhankhar Resigns: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ದಿಢೀರ್‌ ಆಗಿ ರಾಜೀನಾಮೆ ಘೋಷಿಸಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 1951ರಲ್ಲಿ ರಾಜಸ್ಥಾನದಲ್ಲಿ ಜನಿಸಿದ ಅವರು 2022ರಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ರಾಜೀನಾಮೆ

Profile Ramesh B Jul 21, 2025 9:51 PM

ನವದೆಹಲಿ: ಭಾರತದ 14ನೇ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ (Jagdeep Dhankhar) ದಿಢೀರ್‌ ರಾಜೀನಾಮೆ ಘೋಷಿಸಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಸೋಮವಾರ (ಜುಲೈ 21) ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. “ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯರ ಸಲಹೆ ಮೇರೆಗೆ ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆʼʼ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ʼʼಈ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಿರುವುದು ತೃಪ್ತಿ ತಂದಿದೆʼʼ ಎಂದು 74 ವರ್ಷದ ಧನಕರ್‌ ಹೇಳಿದ್ದಾರೆ.



“ಸಂಪೂರ್ಣ ಸಹಕಾರ ನೀಡಿದ ಪ್ರಧಾನ ಮಂತ್ರಿ ಮತ್ತು ಮಂತ್ರಿ ಮಂಡಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಪ್ರಧಾನ ಮಂತ್ರಿ ಅವರ ಸಹಕಾರ ಮತ್ತು ಬೆಂಬಲ ಅಮೂಲ್ಯವಾದುದು ಮತ್ತು ನಾನು ನನ್ನ ಅಧಿಕಾರಾವಧಿಯಲ್ಲಿ ಬಹಳಷ್ಟು ಕಲಿತಿದ್ದೇನೆʼʼ ಎಂದು ಅವರು ವಿವರಿಸಿದ್ದಾರೆ. 1951ರಲ್ಲಿ ರಾಜಸ್ಥಾನದಲ್ಲಿ ಜನಿಸಿದ ಅವರು 2022ರಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹೃದಯ ಸಂಬಂಧಿ ಕಾಯಿಲೆ ಕಂಡುಬಂದ ಹಿನ್ನೆಲೆಯಲ್ಲಿ ಅವರು ಈ ವರ್ಷದ ಮಾರ್ಚ್‌ನಲ್ಲಿ 4 ದಿನಗಳ ಕಾಲ ದೆಹಲಿ ಏಮ್ಸ್‌ಗೆ ದಾಖಲಾಗಿದ್ದರು.

ಈ ಸುದ್ದಿಯನ್ನೂ ಓದಿ: Supreme Court: ಐಐಟಿ ಖರಗ್‌ಪುರ, ಶಾರದಾ ವಿವಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ; ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆ

ಮುಂದೇನಾಗಲಿದೆ?

ರಾಜೀನಾಮೆ ನೀಡಿದ 60 ದಿನಗಳ ಒಳಗೆ ನೂತನ ಉಪರಾಷ್ಟ್ರಪತಿಯವರನ್ನು ನೇಮಿಸಬೇಕಿದೆ. ಸಂಸತ್ತಿನ ಎರಡೂ ಸದನಗಳ ಎಲ್ಲ ಸದಸ್ಯರ ಸಮ್ಮುಖದಲ್ಲಿ ಉಪರಾಷ್ಟ್ರಪತಿ ನೇಮಕ ನಡೆಯಲಿದೆ. ಸಂವಿಧಾನದ ಪ್ರಕಾರ ಉಪರಾಷ್ಟ್ರಪತಿ ಹುದ್ದೆ ತೆರವಾದ ಬಳಿಕ ರಾಜ್ಯಸಭೆಯ ಉಪಸಭಾಪತಿ ಮೇಲ್ಮನೆಯ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಆ ಸ್ಥಾನವನ್ನು ಹರಿವಂಶ್ ನಾರಾಯಣ್ ಸಿಂಗ್ ತುಂಬಲಿದ್ದಾರೆ. ಅಂದರೆ ತಾತ್ಕಾಲಿಕವಾಗಿ ಉಪರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರು 2022ರ ಆಗಸ್ಟ್‌ನಲ್ಲಿ ನೇಮಕಗೊಂಡಿದ್ದರು.

ಜಗದೀಪ್‌ ಧನಕರ್‌ ಹಿನ್ನೆಲೆ

ಜಗದೀಪ್‌ ಧನಕರ್‌ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು 1989ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಇವರು 1951ರಲ್ಲಿ ಮೇ 18ರಂದು ರಾಜಸ್ಥಾನದ ಝಂಝನು ಜಿಲ್ಲೆಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ತಂದೆ ದಿ. ಗೋಕಲ್ ಚಂದ್, ತಾಯಿ ದಿ. ಕೇಸರಿ ದೇವಿ. ರಾಜಸ್ಥಾನದ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿಯೂ ಜಗದೀಪ್‌ ಧನಕರ್‌ ಸೇವೆ ಸಲ್ಲಿಸಿದ್ದಾರೆ.

ಧನಕರ್‌ 1989ರಲ್ಲಿ ರಾಜಸ್ಥಾನದ ಝಂಝನು ಕ್ಷೇತ್ರದಿಂದ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1993-1998ರಲ್ಲಿ ಅಜ್ಮೀರ್‌ ಜಿಲ್ಲೆಯ ಕಿಶಾನ್‌ಗರ್ಗ್‌ ಕ್ಷೇತ್ರದ ಶಾಸಕರಾಗಿದ್ದರು. 1990ರಲ್ಲಿ ಕೇಂದ್ರ ಸಚಿವರಾಗಿದ್ದರು. ರಾಜಸ್ಥಾನ ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರೂ ಆಗಿದ್ದರು. ಆರಂಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಅವರು ಬಳಿಕ ಬಿಜೆಪಿ ಸೇರಿದ್ದರು. 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕವಾಗಿದ್ದರು.