ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಖನೌ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಅಗ್ನಿ ದುರಂತ: 14 ಮಂದಿ ಸಾವು, ಹಲವು ವಿದ್ಯಾರ್ಥಿಗಳು ಸಿಲುಕಿರುವ ಶಂಕೆ

Lucknow Coaching Centre Fire: ಉತ್ತರ ಪ್ರದೇಶದ ಲಖನೌನಲ್ಲಿರುವ ಮೂರು ಅಂತಸ್ತಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ಕಟ್ಟಡದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಘಟನೆಯ ಕಾರಣ ಶಾರ್ಟ್ ಸರ್ಕ್ಯೂಟ್ ಇರಬಹುದು ಎಂದು ಶಂಕಿಸಲಾಗಿದೆ.

ಲಖನೌ ಅಗ್ನಿ ದುರಂತ: 14 ಮಂದಿ ಬಲಿ

ಲಖನೌ ಅಗ್ನಿ ಅವಘಡ -

Profile
Sushmitha Jain Jun 22, 2026 6:18 PM

ಲಖನೌ, ಜೂ. 22: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಸೋಮವಾರ (ಜೂನ್‌ 22) ಮಧ್ಯಾಹ್ನ 3 ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಆಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಉಷಾ ಮೆಹ್ತಾ ಮಾರ್ಗದಲ್ಲಿರುವ ಕೋಚಿಂಗ್ ಸೆಂಟರ್ ಕಟ್ಟಡದಲ್ಲಿ ಅಪರಾಹ್ನ 3 ಗಂಟೆಯ ಸುಮಾರಿಗೆ ಈ ಭಯಾನಕ ದುರಂತ ಸಂಭವಿಸಿದ್ದು, ಸ್ಥಳದಲ್ಲಿ ಭಾರೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕಟ್ಟಡದಲ್ಲಿ ದಟ್ಟವಾದ ಹೊಗೆ ಮತ್ತು ಬೆಂಕಿಯ ಭೀಕರ ಜ್ವಾಲೆಗಳು ಇಡೀ ಆವರಣವನ್ನು ಆವರಿಸಿಕೊಳ್ಳುತ್ತಿದ್ದಂತೆ, ಪ್ರಾಣ ಉಳಿಸಿಕೊಳ್ಳಲು ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆತಂಕದಿಂದ ಒದ್ದಾಡಿದರು. ಕೊಠಡಿಗಳೊಳಗೆ ಸಿಲುಕಿದ ಹಲವು ವಿದ್ಯಾರ್ಥಿಗಳು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, 7ರಿಂದ 8 ವಿದ್ಯಾರ್ಥಿಗಳು ತೀವ್ರ ಆತುರದಲ್ಲಿ ಕಟ್ಟಡದಿಂದ ಕೆಳಗೆ ಜಿಗಿದು ಪಾರಾಗಿದ್ದು, ಈ ವೇಳೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಖನೌ ಅಗ್ನಿ ಅವಘಡದ ದೃಶ್ಯ:



ಕಟ್ಟಡದೊಳಗೆ ಇನ್ನೂ 20 ರಿಂದ 25 ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಶಂಕೆ ಎದುರಾಗಿದೆ. ಘಟನಾ ಸ್ಥಳಕ್ಕೆ ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ ಸೇರಿದಂತೆ 14 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಠಿಣ ಕಾರ್ಯದಲ್ಲಿ ತೊಡಗಿವೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ದುರಂತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯು ಜೆಸಿಬಿ ಯಂತ್ರಗಳ ಸಹಾಯದಿಂದ ಗೋಡೆಯನ್ನು ಒಡೆದು ಕಟ್ಟಡದ ಒಳಗೆ ಪ್ರವೇಶಿಸಿ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಲಿಗಢ ಪ್ರವಾಸವನ್ನು ರದ್ದುಗೊಳಿಸಿ ತಕ್ಷಣ ಲಖನೌಗೆ ಮರಳಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದ್ದು, ನಿಖರವಾದ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ಈ ಘಟನೆಯು ಶೈಕ್ಷಣಿಕ ಸಂಸ್ಥೆಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.