ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಖನೌ ಬೆಂಕಿ ದುರಂತ: ಮೃತ ಯಾವ ವಿದ್ಯಾರ್ಥಿಗಳ ಶರೀರದಲ್ಲೂ ಸುಟ್ಟು ಗಾಯಗಳಿಲ್ಲ; ಬಲಿಯಾಗಿದ್ದು ಹೇಗೆ?

Lucknow Fire: ಉತ್ತರ ಪ್ರದೇಶದ ವಾಯುವ್ಯ ಲಖನೌದ ಅಲಿಗಂಜ್ ಪ್ರದೇಶದಲ್ಲಿರುವ ತರಬೇತಿ ಕೇಂದ್ರವಿದ್ದ ಕಟ್ಟಡಕ್ಕೆ ಸೋಮವಾರ (ಜೂನ್‌ 22) ಬೆಂಕಿ ಹತ್ತಿ ಉರಿದಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಆದರೆ ಯಾರೂ ಸುಟ್ಟ ಗಾಯಗಳಿಂದ ಮೃತಪಟ್ಟಿಲ್ಲ. ಉಸಿರುಗಟ್ಟಿ, ಹೊಗೆ ಉಸಿರಾಡಿ ಮೃತಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಲಖನೌ ಬೆಂಕಿ ದುರಂತದಲ್ಲಿ ಮೃತರ ಶರೀರದಲ್ಲಿ ಸುಟ್ಟು ಗಾಯಗಳಿಲ್ಲ

ಉತ್ತರ ಪ್ರದೇಶದ ಲಖನೌ ಕೋಚಿಂಗ್‌ ಸೆಂಟರ್‌ನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ -

Ramesh Ballamoole
Ramesh Ballamoole Jun 23, 2026 11:31 PM

ಲಖನೌ, ಜೂ. 23: ಉತ್ತರ ಪ್ರದೇಶದ ವಾಯುವ್ಯ ಲಖನೌದ ಅಲಿಗಂಜ್ ಪ್ರದೇಶದಲ್ಲಿರುವ ತರಬೇತಿ ಕೇಂದ್ರವಿದ್ದ ಕಟ್ಟಡಕ್ಕೆ ಸೋಮವಾರ (ಜೂನ್‌ 22) ಬೆಂಕಿ ಹತ್ತಿ ಉರಿದಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Lucknow Fire). ಇದೀಗ ಈ ಅವಘಡಕ್ಕೆ ಸಂಬಂಧಿಸಿದಂತೆ ಒಂದೊಂದೇ ಆಘಾತಕಾರಿ, ಅಚ್ಚರಿಯ ಮಾಹಿತಿ ಹೊರ ಬೀಳುತ್ತಿದೆ. ಬೆಂಕಿಯಿಂದ ಉಂಟಾದ ಸುಟ್ಟ ಗಾಯಗಳಿಂದ ಯಾರೂ ಮೃತಪಟ್ಟಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (KGMU) ಅಧಿಕಾರಿಗಳು ಈ ವಿಚಾರ ಬಹಿರಂಗಪಡಿಸಿದ್ದಾರೆ. ಹಾಗಾದರೆ 15 ಮಂದಿ ಮೃತಪಟ್ಟಿದ್ದು ಹೇಗೆ? ಇಲ್ಲಿದೆ ವಿವರ.

ಬೆಂಕಿ ಕಾಣಿಸಿಕೊಂಡ ವೇಳೆ ಕಟ್ಟಡದೊಳಗೆ ಹೆಚ್ಚಿನ ಪ್ರಮಾಣದ ಹೊಗೆ ಆವರಿಸಿದ್ದು, ಆಮ್ಲಜನಕ ಕಡಿಮೆಯಾಗಿ ಹೊಗೆ ಉಸಿರಾಡಿದ್ದರಿಂದ ಸಾವು ಸಂಭವಿಸಿದೆ ಎಂದು ಕೆಜಿಎಂಯು ವಕ್ತಾರ ಪ್ರೊಫೆಸರ್ ಕೆ.ಕೆ. ಸಿಂಗ್ ಹೇಳಿದ್ದಾರೆ. "ಯಾವುದೇ ಮಕ್ಕಳು ಸುಟ್ಟಗಾಯಗಳಿಂದ ಸಾವನ್ನಪ್ಪಿಲ್ಲ" ಎಂದು ಅವರು ತಿಳಿಸಿದ್ದಾರೆ. ʼʼಹೆಚ್ಚಿನ ಪ್ರಮಾಣದಲ್ಲಿ ಆವರಿಸಿದ ಹೊಗೆಯನ್ನು ಉಸಿರಾಡಿದ್ದರಿಂದ ಕೆಲವರು ಮತ್ತು ಉಸಿರುಗಟ್ಟಿ ಕೆಲವರು ಮೃತಪಟ್ಟಿದ್ದಾರೆʼʼ ಎಂದು ವಿವರಿಸಿದ್ದಾರೆ. ಹೊಗೆ ಸಂತ್ರಸ್ತರ ಶ್ವಾಸಕೋಶದೊಳಕ್ಕೆ ಪ್ರವೇಶಿಸಿ, ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡಿ ಸಾವಿಗೆ ಕಾರಣವಾಯಿತು.

ಲಖನೌ ಬೆಂಕಿ ದುರಂತದ ದೃಶ್ಯ:



ʼʼರಕ್ಷಣಾ ಕಾರ್ಯಕರ್ತರು 22 ಮಕ್ಕಳನ್ನು ಕೆಜಿಎಂಯು ಆಸ್ಪತ್ರೆಗೆ ದಾಖಲಿಸಿದರು. ಈ ಪೈಕಿ ಐವರು ಆಸ್ಪತ್ರೆಗೆ ಬರುವಷ್ಟರಲ್ಲೇ ಮೃತಪಟ್ಟಿದ್ದರು. ಇನ್ನು 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಿದ ನಂತರ ಡಿಸ್‌ಚಾರ್ಜ್‌ ಮಾಡಲಾಯಿತು. ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆʼʼ ಎಂದು ಮಾಹಿತಿ ನೀಡಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಹಾರಿದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಲಖನೌ ಅಗ್ನಿ ದುರಂತ: 2016ರಲ್ಲಿ ದ್ವಂಸ ಆದೇಶ ಪಡೆದಿದ್ದ ಕಟ್ಟಡದಲ್ಲಿ ಅವಘಡ

ಕಟ್ಟಡದಿಂದ ಜಿಗಿದ ಹುಡುಗನ ವಿಡಿಯೊ ವೈರಲ್‌

ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಹುಡುಗನ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬೀಳುವಾಗ ಕೆಳಗಡೆ ಇದ್ದ ಲೋಹದ ರಾಡ್ ಅವನ ಬೆನ್ನಿನಲ್ಲಿ ತೂರಿ ಬೆನ್ನುಹುರಿಗೆ ಹಾನಿಯಾಗಿದೆ. ಆತನ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ಲಖನೌ ಅಗ್ನಿ ದುರಂತ: ಮತ್ತೆ ಮುನ್ನಲೆಗೆ ಬಂದ ಕಟ್ಟಡ ಮಾಲಕರ ಹಳೆಯ ವಂಚನೆ ಪ್ರಕರಣ

ಯಾರಿಗೂ ಗಂಭೀರ ಸುಟ್ಟ ಗಾಯಗಳಾಗಿಲ್ಲ

ಅಚ್ಚರಿ ಎಂದರೆ ಯಾರೊಬ್ಬರಿಗೂ ಮಾರಣಾಂತಿಕ ಸುಟ್ಟ ಗಾಯಗಳಾಗಿಲ್ಲ. ಬದಲಾಗಿ ಬೆಂಕಿ ಕಾಣಿಸಿಕೊಂಡ ಬಳಿಕ ತರಗತಿ ಕೋಣೆಯೊಳಗೆ ಹೊಗೆ ಆವರಿಸಿದ್ದು, ಮಕ್ಕಳೆಲ್ಲ ಸಿಕ್ಕಿಹಾಕಿಕೊಂಡರು. ಹೊಗೆ ಆವರಿಸಿದ ಕಾರಣ ಆಮ್ಲಜನಕದ ಮಟ್ಟ ಕಡಿಮೆಯಾಗಿ ಒಳಗಿನವರಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ʼʼಕಟ್ಟಡದಲ್ಲಿ ಕಿಟಕಿ ಇರಲಿಲ್ಲ. ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು. ಒಂದುವೇಳೆ ಕಿಟಿಕಿ ಇದ್ದಿದ್ದರೆ ಒಂದಷ್ಟು ಹೊಗೆ ಹೊರ ಹೋಗಿ ಅನಾಹುತ ತಪ್ಪುವ ಸಾಧ್ಯತೆ ಇತ್ತುʼʼ ಎಂದು ಅದಿಕಾರಿಗಳು ಹೇಳಿದ್ದಾರೆ. ಹೊಗೆ ಆವರಿಸುತ್ತಿದ್ದಂತೆ ಮಕ್ಕಳು ಗೋಡೆಗೆ ಅಳವಡಿಸಿದ್ದ ಗಾಜನ್ನು ಒಡೆಯಲು ಯತ್ನಿಸಿದ್ದಾರೆ. ಆದರೆ ಇದೂ ಸಾಧ್ಯವಾಗಲಿಲ್ಲ. ತಪಾಸಣೆ ವೇಳೆ ಕಟ್ಟಡ ನಿಯಮಗಳನ್ನೆಲ್ಲ ಗಾಳಿಗೆ ತೀರಿರುವುದು ಕಂಡು ಬಂದಿದ್ದು, ತನಿಖೆ ನಡೆಯುತ್ತಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.