ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿದ ಅಪ್ರಾಪ್ತ; ತಂದೆಯಿಂದ 5 ಲಕ್ಷ ರೂಪಾಯಿ ಪಡೆಯಲು ತನ್ನದೇ ಅಪಹರಣದ ನಾಟಕವಾಡಿದ!
Online Gaming: ಆನ್ಲೈನ್ ಗೇಮ್ನಿಂದಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ 17 ವರ್ಷದ ಅಪ್ರಾಪ್ತನೊಬ್ಬ ತಂದೆಯಿಂದ 5 ಲಕ್ಷ ರೂಪಾಯಿ ಪಡೆಯಲು ತನ್ನದೇ ಅಪಹರಣದ ನಾಟಕವಾಡಿದ್ದಾನೆ. ಅಲ್ಲದೆ ತಾನು ಕೊಲೆಯಾಗಿದ್ದಾಗಿ ಬಿಂಬಿಸಲು ಯತ್ನಿಸಿದ್ದಾನೆ. ಆತನ ಕಳ್ಳಾಟ ಇದೀಗ ಬಯಲಾಗಿದೆ.
ಚಾಟ್ಜಿಪಿಟಿ ರಚಿತ ಚಿತ್ರ -
ಲಖನೌ, ಅ. 26: ಯುವ ತಲೆಮಾರು ಸದ್ಯ ಆನ್ಲೈನ್ ಗೇಮ್ (Online Gaming) ಗೀಳಿಗೆ ಬಲಿಯಾಗುತ್ತಿದ್ದು, ಇದರಿಂದ ಅಲ್ಲಲ್ಲಿ ಅನಾಹುತ ಸಂಭವಿಸುತ್ತಲೇ ಇದೆ. ಅದರಲ್ಲೂ ಆನ್ಲೈನ್ ಗೇಮ್ ಚಟಕ್ಕೆ ಬಿದ್ದ ಅಪ್ರಾಪ್ತರು ಯಾವ ಅಪರಾಧ ಎಸಗಲೂ ಹೇಸುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಮತ್ತೊಂದು ಉತ್ತಮ ಉದಾಹರಣೆ ಇಲ್ಲಿದೆ. ಆನ್ಲೈನ್ ಗೇಮ್ನಿಂದಾಗಿ ಸಾವಿರಾರು ರೂಪಾಯಿ ಸಾಲ ಮಾಡಿದ್ದ 17 ವರ್ಷದ ಅಪ್ರಾಪ್ತನೊಬ್ಬ ತಂದೆಯಿಂದ 5 ಲಕ್ಷ ರೂಪಾಯಿ ಪಡೆಯಲು ತನ್ನದೇ ಅಪಹರಣದ ನಾಟಕವಾಡಿದ್ದಾನೆ. ಅಲ್ಲದೆ ತಾನು ಕೊಲೆಯಾಗಿದ್ದಾಗಿ ಬಿಂಬಿಸಲು ಯತ್ನಿಸಿದ್ದಾನೆ. ಇದೀಗ ಆತನ ಕಳ್ಳಾಟ ಬಯಲಾಗಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ.
ಉತ್ತರ ಪ್ರದೇಶದ ಲಖನೌನಲ್ಲಿ ಈ ಘಟನೆ ನಡೆದಿದ್ದು, ಆನ್ಲೈನ್ ಗೇಮ್ನಿಂದಾಗಿ ಉಂಟಾಗುವ ಅನಾಹುತಗಳ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.
ಅಪಹರಣದ ನಾಟಕ
ನೀಟ್ಗಾಗಿ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ಆನ್ಲೈನ್ ಗೇಮ್ ಚಟ ಬೆಳೆಸಿಕೊಂಡಿದ್ದ. ಅಲ್ಲದೆ ಇದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಹಣ ಕೇಳಿದರೆ ಮನೆಯಲ್ಲಿ ರಾದ್ಧಾಂತವಾಗುತ್ತದೆ ಎಂದು ಗೊತ್ತಾಗಿ ಆತ ಅಪಹರಣದ ನಾಟಕವಾಡಿದ್ದಾನೆ. ಗೆಳತಿಯೊಂದಿಗೆ ಅಜ್ಞಾತ ಸ್ಥಳದಲ್ಲಿದ್ದ ಆತ ತನ್ನನ್ನು ಅಪಹರಣಕಾರನೆಂದು ಪರಿಚಯಿಸಿ ಮನೆಯವರಿಗೆ ಕರೆ ಮಾಡಿ, ಬಿಡುಗಡೆಗಾಗಿ 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ. ಮಗನ ಸುರಕ್ಷತೆಯ ಬಗ್ಗೆ ಆತಂಕಗೊಂಡ ತಂದೆ ಹೇಗೋ 3 ಲಕ್ಷ ರೂಪಾಯಿ ಹೊಂದಿಸಿಕೊಟ್ಟಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆನ್ಲೈನ್ ಗೇಮಿಂಗ್ನಲ್ಲಿ 3 ಲಕ್ಷ ರೂ. ಕಳೆದುಕೊಂಡ ಬಾಲಕ
ಪೊಲೀಸ್ ತನಿಖೆಯಿಂದ ಬಾಲಕನ ಸಂಚು ಬಯಲಾಯಿತು. ಅಪಹರಣಕ್ಕೊಳಗಾಗಿದ್ದಾನೆ ಅಥವಾ ಮೃತಪಟ್ಟಿರಬಹುದು ಎಂದು ಮನೆಯವರು ಭಾವಿಸಿದ್ದರೆ, ಆತ ಮಾತ್ರ ತನ್ನ ಗೆಳತಿಯೊಂದಿಗೆ ಹಾಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದರು.
ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆಯ ವಿವರ
ಅಕ್ಟೋಬರ್ 20ರ ರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿದ ಅಪ್ರಾಪ್ತ ತನ್ನ ಅಪಹರಣದ ನಾಟಕ ಶುರುವಿಟ್ಟುಕೊಂಡಿದ್ದ. ಮಗ ಮನೆಗೆ ಬಾರದೆ ಕಂಗಾಲಾಗಿ ತಾಯಿ ಪಾರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ದೆಹಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಬಾಲಕನ ತಂದೆಗೂ ನಾಪತ್ತೆಯ ಮಾಹಿತಿ ನೀಡಲಾಯಿತು.
ಪೊಲೀಸರ ಪ್ರಕಾರ ಬಾಲಕ ಮನೆಯಿಂದ ಹೊರ ಬರುತ್ತಲೇ ಮೊಬೈಲ್ನಿಂದ ಸಿಮ್ ತೆಗೆದಿದ್ದ. ಬಳಿಕ ವೈಫೈ ಬಳಸಿ ವಾಟ್ಸ್ಆ್ಯಪ್ನಿಂದ ತಂದೆ, ತಾಯಿ ಮತ್ತು ಮಾವನಿಗೆ ಅಪಹರಣದ ಸಂದೇಶ ರವಾನಿಸಿದ್ದ. ನಂತರ ಧ್ವನಿ ಬದಲಾಯಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಕುಟುಂಬದ ಮೇಲೆ ಮತ್ತಷ್ಟು ಒತ್ತಡ ಹೇರಲು ಸತ್ತು ಹೋಗಿರುವುದಾಗಿ ಹೇಳಿದ್ದ.
ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಹಲವು ಅನುಮಾನಗಳು ಮೂಡಿದವು. ಬಾಲಕನೇ ಅಪಹರಣದ ನಾಟಕ ಮಾಡುತ್ತಿರುವುದಾಗಿ ಗೊತ್ತಾಯಿತು. ಬಳಿಕ ಆತನನ್ನು ಗೆಳತಿಯ ಬಳಿಯಿಂದ ಪತ್ತೆ ಹಚ್ಚಿದರು.
ಆನ್ಲೈನ್ ಗೇಮ್ ಚಟ; 9 ನೇ ಮಹಡಿಯಿಂದ ಜಿಗಿದು ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ
ಡಿಸಿಪಿ ಜಿತೇಂದ್ರ ಕುಮಾರ್ ಶ್ರೀವಾಸ್ತವ ಅವರ ಪ್ರಕಾರ, ಈ ಹದಿಹರೆಯದ ಹುಡುಗ ಆನ್ಲೈನ್ ಗೇಮಿಂಗ್ಗೆ ದಾಸನಾಗಿ ಹಿಂದೆ ಸುಮಾರು 70,000 ರೂಪಾಯಿ ಕಳೆದುಕೊಂಡಿದ್ದ. ಅದನ್ನು ಅವನ ಮನೆಯವರು ಭರಿಸಿದ್ದರು. ಆದರೂ ಆತ ಆಟವನ್ನು ಮುಂದುವರಿಸಿ ಮತ್ತೆ ಸುಮಾರು 50,000 ರೂಪಾಯಿ ಕಳೆದುಕೊಂಡಿದ್ದ. ಹಲವು ಬಾರಿ ಕೇಳಿದರೂ ಕುಟುಂಬದವರು ಹಣ ನೀಡಲು ನಿರಾಕರಿಸಿದಾಗ, ಸಾಲ ತೀರಿಸಲು ತಾನೇ ಅಪಹರಣಕ್ಕೊಳಗಾದಂತೆ ನಾಟಕವಾಡಿದ್ದ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.