ಮೆಡಿಕಲ್ ಸೀಟ್‌ಗಾಗಿ ಕಾಲನ್ನೇ ಕತ್ತರಿಸಿಕೊಂಡ ಭೂಪ; ಅಂಗವೈಕಲ್ಯ ಸರ್ಟಿಫಿಕೇಟ್ ಪಡೆಯಲು ಇದೆಂಥಾ ಹುಚ್ಚಾಟ!?
Shocking incident in UP: ಉತ್ತರ ಪ್ರದೇಶದ ಜೌನ್‍ಪುರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಯುವಕನೊಬ್ಬ ಮೆಡಿಕಲ್ ಸೀಟ್‌ಗಾಗಿ ಅಂಗವೈಕಲ್ಯ ಪ್ರಮಾಣಪತ್ರ ಪಡೆಯುವ ಉದ್ದೇಶದಿಂದ ತನ್ನದೇ ಕಾಲು ಕತ್ತರಿಸಿಕೊಂಡಿದ್ದಾನೆ. ಜನವರಿ 18ರಂದು ಈ ಘಟನೆ ನಡೆದಿದ್ದು, ಜನವರಿ 23ರಂದು ಪ್ರಕರಣ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಜ. 23: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅಡಿಯಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ ಅಂಗವೈಕಲ್ಯಕ್ಕೆ ಸಂಬಂಧಿಸಿದ ರಿಯಾಯಿತಿಗಳನ್ನು ಪಡೆಯಲು 24 ವರ್ಷದ ಯುವಕನೊಬ್ಬ ತನ್ನ ಕಾಲಿನ ಒಂದು ಭಾಗವನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ (Shocking incident) ಉತ್ತರ ಪ್ರದೇಶದ (Uttar Pradesh) ಜೌನ್‌ಪುರದಲ್ಲಿ ನಡೆದಿದೆ. ಈ ರೀತಿ ಹುಚ್ಚಾಟ ಮೆರೆದ ವ್ಯಕ್ತಿಯನ್ನು ಸೂರಜ್ ಭಾಸ್ಕರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಈತ ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿಪುರ ನಿವಾಸಿ. ಈ ಘಟನೆ ಜನವರಿ 18ರಂದು ನಡೆದಿದ್ದರೂ, ಆರಂಭದಲ್ಲಿ ಹಲ್ಲೆ ಪ್ರಕರಣ ಎಂದು ಬಿಂಬಿತವಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವಾಗ ಜನವರಿ 23ರಂದು ಸತ್ಯ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ ಸೂರಜ್ ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ತನ್ನ ಪಾದದ ಒಂದು ಭಾಗವನ್ನು ಕತ್ತರಿಸಿಕೊಂಡಿದ್ದಾನೆ. ಅಂಗವೈಕಲ್ಯ ಪ್ರಮಾಣ ಪತ್ರವು ಇದ್ದರೆ ಮೆಡಿಕಲ್ ಸೀಟ್ ಸಿಗಲು ನೀಟ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದರೆ ಸಾಕಾಗುತ್ತದೆ. ಸೂರಜ್ ಡಿಪ್ಲೊಮಾ ಇನ್ ಫಾರ್ಮಸಿ (ಡಿ.ಫಾರ್ಮ್) ಪೂರ್ಣಗೊಳಿಸಿದ್ದು, ಎಂಬಿಬಿಎಸ್ ಪದವಿ ಪಡೆಯಲು ನೀಟ್‌ಗೆ ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಬಿಬಿಎಸ್ ಸೀಟ್‌ಗಾಗಿ ಕಾಲನ್ನೇ ಕತ್ತರಿಸಿಕೊಂಡ ಭೂಪ:
दिव्यांग कोटे से MBBS करने के लिए युवक ने खुद ही काट लिया पैर का पंजा, मगर गर्लफ्रेंड ने खोल दी पोल
— Arjun Chaudharyy (@Arjun5chaudhary) January 23, 2026
जौनपुर में नीट अभ्यर्थी सूरज भास्कर ने 2026 में एमबीबीएस में प्रवेश पाने के लिए अपना पैर खुद काट लिया . उसने दिव्यांग कोटा हासिल करने के लिए पैर खुद काट लिया... pic.twitter.com/ZyucT5Jd21
ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸೂರಜ್ ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದ್ದ. ಕೊಲೆ ಯತ್ನದ ಆರೋಪದ ಮೇಲೆ ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಜನವರಿ 18ರ ಮಧ್ಯಾಹ್ನ ಸೂರಜ್ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು ಎಂದು ನಗರ ವೃತ್ತ ಅಧಿಕಾರಿ ಗೋಲ್ಡಿ ಗುಪ್ತಾ ತಿಳಿಸಿದ್ದಾರೆ. ಅಧಿಕಾರಿಗಳಿಗೆ ಆರಂಭದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮರುದಿನ ಬೆಳಗ್ಗೆ ಪ್ರಜ್ಞೆ ಬಂದಾಗ, ತನ್ನ ಎಡಗಾಲು ಕತ್ತರಿಸಲ್ಪಟ್ಟಿತ್ತು, ಹಿಮ್ಮಡಿ ಮಾತ್ರ ಉಳಿದಿತ್ತು ಎಂದು ಸೂರಜ್ ಹೇಳಿಕೊಂಡಿದ್ದ.
ಸೂರಜ್ ಹೇಳಿಕೆ ಮತ್ತು ಲಿಖಿತ ದೂರಿನ ಮೇರೆಗೆ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಹಲ್ಲೆ ಆರೋಪದ ತನಿಖೆ ಆರಂಭಿಸಿದರು ಎಂದು ಗುಪ್ತಾ ಹೇಳಿದರು. ಆದರೆ ತನಿಖೆಯ ಸಮಯದಲ್ಲಿ, ಸೂರಜ್ ಹೇಳಿಕೆಯಲ್ಲಿ ಗೊಂದಲ ಇರುವುದನ್ನು ತನಿಖಾಧಿಕಾರಿಗಳು ಗಮನಿಸಿದರು.
ಮದುವೆ ಬಳಿಕ ಗಂಡನೊಂದಿಗೆ ಹಳ್ಳಿಯಲ್ಲಿ ನೆಲೆಸಲು ಇಷ್ಟವಿಲ್ಲದೆ ನವವಿವಾಹಿತೆ ಆತ್ಮಹತ್ಯೆ
ಸೂರಜ್ ಪದೇ ಪದೆ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದ ಮತ್ತು ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದ ಎಂದು ಗುಪ್ತಾ ಹೇಳಿದರು. ಈ ನಡವಳಿಕೆಯು ತನಿಖಾ ತಂಡದಲ್ಲಿ ಅನುಮಾನವನ್ನು ಹೆಚ್ಚಿಸಿತು ಎಂದರು. ಹೀಗಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು.
ತನಿಖೆಯ ಭಾಗವಾಗಿ, ಪೊಲೀಸರು ಸೂರಜ್‌ನ ಕರೆ ವಿವರಗಳ ದಾಖಲೆಗಳನ್ನು ಪಡೆದುಕೊಂಡರು. ತನಿಖೆಯ ಭಾಗವಾಗಿ ಅವನು ಮದುವೆಯಾಗಲು ಉದ್ದೇಶಿಸಿದ್ದ ಯುವತಿಯನ್ನು ಪೊಲೀಸರು ಪ್ರಶ್ನಿಸಿದರು. ವಿಚಾರಣೆ ವೇಳೆ ಆಕೆ ಸೂರಜ್ 2026ರಲ್ಲಿ ಯಾವುದೇ ಬೆಲೆ ತೆತ್ತಾದರೂ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯಲು ದೃಢ ನಿಶ್ಚಯ ಹೊಂದಿರುವುದಾಗಿ ತಿಳಿಸಿದ್ದ ಎಂದು ಹೇಳಿದ್ದಾಳೆ. ಸದ್ಯ ಸೂರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.