ಗಣರಾಜ್ಯೋತ್ಸವಕ್ಕೆ ಬೆದರಿಕೆ ಹಾಕಿದ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಗೆ ಬೆದರಿಕೆ ಹಾಕಿದ ಆರೋಪದಲ್ಲಿ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೊ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ -
ನವದೆಹಲಿ: ಈ ಹಿಂದೆ ಹಲವು ಬಾರಿ ಭಾರತಕ್ಕೆ ಬೆದರಿಕೆ ಒಡ್ಡಿದ್ದ ಖಲಿಸ್ತಾನಿ (Khalistani) ಹಾಗೂ ಸಿಖ್ ಫಾರ್ ಜಸ್ಟೀಸ್ (Sikh for Justice) ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಜನವರಿ 26ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (delhi) ನಡೆಯಲಿರುವ ಗಣರಾಜ್ಯೋತ್ಸವದ (Republic Day celbration) ಮುನ್ನ ದಿನ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ದೆಹಲಿ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೊ ಮಾಹಿತಿಯನ್ನು ಆಧರಿಸಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕ್ರಿಮಿನಲ್ ಪಿತೂರಿ, ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುವ ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196, 197, 152 ಮತ್ತು 61 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮೆಡಿಕಲ್ ಸೀಟ್‌ಗಾಗಿ ಕಾಲನ್ನೇ ಕತ್ತರಿಸಿಕೊಂಡ ಭೂಪ; ಅಂಗವೈಕಲ್ಯ ಸರ್ಟಿಫಿಕೇಟ್ ಪಡೆಯಲು ಇದೆಂಥಾ ಹುಚ್ಚಾಟ!?
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಪನ್ನುನ್ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ರೋಹಿಣಿ ಮತ್ತು ದಾಬ್ರಿಯಂತಹ ಪ್ರದೇಶಗಳಲ್ಲಿ ಸ್ಲೀಪರ್ ಸೆಲ್‌ಗಳ ಮೂಲಕ ಖಲಿಸ್ತಾನ್ ಪರ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಆತ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.
ಈ ಕುರಿತು ತನಿಖೆ ನಡೆಸಿರುವ ಪೊಲೀಸರ ವಿಶೇಷ ಘಟಕವು ಖಲಿಸ್ತಾನಿ ನಾಯಕ ಪನ್ನುನ್ ಹೇಳಿರುವ ಪ್ರದೇಶಗಳಲ್ಲಿ ಖಲಿಸ್ತಾನಿ ಪರವಾದ ಯಾವುದೇ ಪೋಸ್ಟರ್‌ಗಳು ಕಂಡುಬಂದಿಲ್ಲ ಎಂದು ಹೇಳಿದೆ. ಅಲ್ಲದೇ ಈ ವಿಡಿಯೊದ ಮೂಲ ಮತ್ತು ಸಿಖ್ ಫಾರ್ ಜಸ್ಟೀಸ್ ನಾಯಕ ಮಾಡಿರುವ ಹೇಳಿಕೆಗಳ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಕ್ರೊಯೇಷಿಯಾದಲ್ಲಿರುವ ಗುರುವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಭಾರತೀಯ ರಾಯಭಾರ ಕಚೇರಿಯ ಅತಿಕ್ರಮಣ ಮತ್ತು ಖಲಿಸ್ತಾನಿ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಧ್ವಂಸಗೊಳಿಸಿರುವುದನ್ನು ಭಾರತ ಖಂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೊಳಪಡಿಸುವಂತೆ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆ ನಡುವೆ ಬ್ರೆಜಿಲ್ ಅಧ್ಯಕ್ಷರನ್ನು ದೇಶಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ
ಈ ಹಿಂದೆಯೂ ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇಂತಹ ಘಟನೆಗಳು ನಡೆದಿದ್ದರೂ ಕ್ರೊಯೇಷಿಯಾದಲ್ಲಿನ ಘಟನೆಯು ಹೆಚ್ಚಿನ ಕಳವಳ ಉಂಟು ಮಾಡಿದೆ. ಯಾಕೆಂದರೆ ಜನವರಿ 27ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತ- ಯುರೋಪಿಯನ್ ಯೂನಿಯನ್ ಶೃಂಗಸಭೆಯ ಕೆಲವೇ ದಿನಗಳ ಮೊದಲು ಕ್ರೊಯೇಷಿಯಾದ ಜಾಗ್ರೆಬ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಪನ್ನುನ್ ಹಂಚಿಕೊಂಡಿರುವ ವಿಡಿಯೊದಲ್ಲಿ ಖಲಿಸ್ತಾನಿ ಕಾರ್ಯಕರ್ತನೊಬ್ಬ ಜಾಗ್ರೆಬ್‌ನಲ್ಲಿರುವ ರಾಯಭಾರ ಕಚೇರಿ ಆವರಣಕ್ಕೆ ನಡೆಸಿರುವ ವಿಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ರಾಯಭಾರ ಕಚೇರಿ ಮೇಲಿರುವ ಭಾರತೀಯ ರಾಷ್ಟ್ರೀಯ ಧ್ವಜವನ್ನು ತೆಗೆದುಹಾಕಿ ಅದನ್ನು ಖಲಿಸ್ತಾನ್ ಧ್ವಜದೊಂದಿಗೆ ಬದಲಾಯಿಸುತ್ತಿರುವುದನ್ನು ತೋರಿಸಲಾಗಿದೆ. ಈ ಘಟನೆ ಜನವರಿ 22ರಂದು ನಡೆದಿದೆ ಎನ್ನಲಾಗಿದೆ.