ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಡಿಯೋ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ; ತಪ್ಪಿದ ಭಾರಿ ಅನಾಹುತ

IndiGo Flight: ದೆವ್ವ ಹಿಡಿದಿದೆ ಎಂದು ಹೇಳಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಇಂಡಿಯೋ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ಶನಿವಾರ ನಡೆದಿದೆ. ಅದೃಷ್ಟವಶಾತ್‌ ಬಾಗಿಲು ತೆರೆಯದ ಕಾರಣ ಬಹುದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಇಂಡಿಯೋ ವಿಮಾನದ ಎಕ್ಸಿಟ್‌ ಡೋರ್‌ ತೆರೆಯಲು ಯತ್ನಿಸಿದ ಪ್ರಯಾಣಿಕ

ಮೊಹಮ್ಮದ್‌ ಅದ್ನಾನ್‌ ಮತ್ತು ಇಂಡಿಗೋ ವಿಮಾನ -

Ramesh Ballamoole
Ramesh Ballamoole Mar 29, 2026 6:23 PM

ಲಖನೌ, ಮಾ. 28: ದೆವ್ವ ಕಂಡ ಅನುಭವವಾಗಿದೆ ಎಂದು ಹೇಳಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಇಂಡಿಯೋ ವಿಮಾನದ (IndiGo Flight) ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ಶನಿವಾರ (ಮಾರ್ಚ್‌ 28) ನಡೆದಿದೆ. ವಿಮಾನ ಲ್ಯಾಂಡ್‌ ಆಗಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇದೆ ಎನ್ನುವಾಗ ಪ್ರಯಾಣಿಕ ಈ ಹುಚ್ಚಾಟ ಮೆರೆದಿದ್ದಾನೆ. ಅದೃಷ್ಟವಶಾತ್‌ ಬಾಗಿಲು ತೆರೆಯದ ಕಾರಣ ಬಹುದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಬೆಂಗಳೂರಿನಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳುತ್ತಿದ್ದ 6E-185 ಇಂಡಿಗೋ ವಿಮಾನದಲ್ಲಿ ನಡೆದ ಈ ಘಟನೆ ಕೆಲ ಕ್ಷಣಗಳ ಕಾಲ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತು. ವಾರಣಾಸಿಯಲ್ಲಿ ವಿಮಾನ ಲ್ಯಾಂಡ್‌ ಆಗಲಿದೆ ಎನ್ನುವಾಗ ಮೊಹಮ್ಮದ್‌ ಅದ್ನಾನ್‌ ಎನ್ನುವ ಪ್ರಯಾಣಿಕ ಎಮೆರ್ಜೆನ್ಸಿ ಎಕ್ಸಿಟ್‌ ಡೋರ್‌ ತೆಗೆಯಲು ಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ

ಇಂಡಿಗೋ ವಿಮಾನ ಶನಿವಾರ ರಾತ್ರಿ 8:15ಕ್ಕೆ ಬೆಂಗಳೂರಿನಿಂದ ಟೇಕ್‌ಆಫ್‌ ಆಗಿ ವಾರಣಾಸಿಗೆ ಹೊರಟಿತು. ಈ ವಿಮಾನದಲ್ಲಿ ಉತ್ತರ ಪ್ರದೇಶದ ಮೌ ನಿವಾಸಿ ಮೊಹಮ್ಮದ್‌ ಅದ್ನಾನ್‌ ಕೂಡ ಇದ್ದ. ವಿಮಾನ ಹೊರಟ 15 ನಿಮಿಷದಲ್ಲಿ ಭಯಭೀತನಾದ ಮೊಹಮ್ಮದ್‌ ಎಮೆರ್ಜೆನ್ಸಿ ಡೋರ್‌ ತೆರೆಯಲು ಯತ್ನಿಸಿದ. ಕೂಡಲೇ ಧಾವಿಸಿದ ವಿಮಾನ ಸಿಬ್ಬಂದಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.

ಇಂಡಿಗೋ ವಿಮಾನಕ್ಕೆ ಬಾಂಬ್​ ಬೆದರಿಕೆ; ಅಹಮದಾಬಾದ್​ನಲ್ಲಿ ತುರ್ತು ಲ್ಯಾಂಡಿಂಗ್​

ಸಿಬ್ಬಂದಿಯ ಎಚ್ಚರಿಕೆ ಹೊರತಾಗಿಯೂ ಮೊಹಮ್ಮದ್‌ ಬುದ್ದಿ ಕಲಿಯಲಿಲ್ಲ. ರಾತ್ರಿ 10.20ರ ತನಕ ಸಾಮಾನ್ಯವಾಗಿಯೇ ಇದ್ದ ಆತ ಬಳಿಕ ಮತ್ತೊಮ್ಮೆ ವಿಚಿತ್ರವಾಗಿ ವರ್ತಿಸತೊಡಗಿದ. ವಿಮಾನ ವಾರಣಾಸಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಇನ್ನೇನು ಲ್ಯಾಂಡ್‌ ಆಗಬೇಕು ಎನ್ನುವಷ್ಟರಲ್ಲಿ ಆತ ಮತ್ತೊಮ್ಮೆ ಡೋರ್‌ ತೆರೆಯಲು ಮುಂದಾದ. ಆಗ ವಿಮಾನ ಸುಮಾರು 500 ಅಡಿ ಎತ್ತರದಲ್ಲಿತ್ತು. ಕೂಡಲೇ ಧಾವಿಸಿದ ವಿಮಾನ ಸಿಬ್ಬಂದಿ ಆತನ ಪ್ರಯತ್ನ ತಡೆದರು. ಕೊನೆಗೆ ರಾತ್ರಿ 10.35ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಯಿತು.

ಕ್ಷಣ ಕಾಲ ಭಯಭೀತರಾದ ಪ್ರಯಾಣಿಕರು ಬಳಿಕ ಸಿಬ್ಬಂದಿಯ ಸಮಯೋಚಿತ ಕಾರ್ಯಕ್ಕೆ ಧನ್ಯವಾದ ತಿಳಿಸಿದರು. ಕೊನೆಗೆ ಮೊಹಮ್ಮದ್‌ ಅದ್ನಾನ್‌ನನ್ನು ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು. ಆತನ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಲಖನೌನಲ್ಲಿ ತುರ್ತು ಭೂಸ್ಪರ್ಶ

ಮೊಹಮ್ಮದ್‌ ಅದ್ನಾನ್‌ ಹೇಳಿದ್ದೇನು?

ವಿಚಾರಣೆ ವೇಳೆ ಆರಂಭದಲ್ಲಿ ತಾನು ಯಾಕೆ ಈ ರೀತಿ ವರ್ತಿಸಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಮೊಹಮ್ಮದ್‌ ಅದ್ನಾನ್‌ ಹೇಳಿದ್ದಾನೆ. ಬಳಿಕ ದೆವ್ವ ಹಿಡಿದಂತಾಯಿತು. ಹೀಗಾಗಿ ಭಯದಿಂದ ಡೋರ್‌ ತೆರೆಯಲು ಮುಂದಾದೆ ಎಂದು ಬಾಯ್ಬಿಟ್ಟಿದ್ದಾನೆ. ʼʼನಾನು ಗೋವಾದಿಂದ ಹಿಂತಿರುಗುತ್ತಿದ್ದೇನೆ. ನಾನು ಎಳೆಯುತ್ತಿದ್ದ ಹ್ಯಾಂಡಲ್ ತುರ್ತು ನಿರ್ಗಮನದ ಬಾಗಿಲಿನದ್ದು ಎಂದು ತಿಳಿದಿರಲಿಲ್ಲʼʼ ಎಂದು ಹೇಳಿಕೊಂಡಿದ್ದಾನೆ.

"ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಇನ್ನೂ ಪ್ರಶ್ನಿಸಲಾಗುತ್ತಿದೆ. ಮೌನಲ್ಲಿ ವಾಸಿಸುವ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಮತ್ತು ಅವರು ವಾರಣಾಸಿಗೆ ಆಗಮಿಸುತ್ತಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ