Rolls-Royce: ಪೇಟದ ಬಣ್ಣಕ್ಕೆ ತಕ್ಕಂತ ರೋಲ್ಸ್-ರಾಯ್ಸ್ ಕಾರುಗಳು; ಭಾರತೀಯ ಮೂಲದ ‘ಬ್ರಿಟಿಷ್ ಬಿಲ್ ಗೇಟ್ಸ್’ ಇವರು
ಕಾರು ಪ್ರಿಯರಿಗೆ ರೋಲ್ಸ್-ರಾಯ್ಸ್ ಕನಸಾಗಿದ್ದರೆ, ಭಾರತೀಯ ಮೂಲದ ಇಂಗ್ಲೆಂಡ್ ಉದ್ಯಮಿ ರೂಬೆನ್ ಸಿಂಗ್ ಈ ಕನಸನ್ನು ಅತ್ಯಂತ ಐಷಾರಾಮಿ ರೀತಿಯಲ್ಲಿ ನನಸಾಗಿಸಿದ್ದಾರೆ. 15 ರೋಲ್ಸ್-ರಾಯ್ಸ್‌ಗಳು ಮತ್ತು ಇತರ ಅಪರೂಪದ ಸೂಪರ್ ಕಾರುಗಳನ್ನು ಹೊಂದಿರುವ ರೂಬೆನ್ ಸಿಂಗ್ ಅವರ ಗ್ಯಾರೇಜ್ ವಿಶ್ವದ ಅತ್ಯಂತ ಚರ್ಚಿತ ಕಲೆಕ್ಷನ್‌ಗಳಲ್ಲಿ ಒಂದಾಗಿದೆ.

ರೂಬೆನ್ ಸಿಂಗ್

ಲಂಡನ್: ಕಾರು ಪ್ರಿಯರಿಗೆ ರೋಲ್ಸ್-ರಾಯ್ಸ್ (Rolls-Royce) ಕನಸಾಗಿದ್ದರೆ, ಭಾರತೀಯ ಮೂಲದ ಯುಕೆ ಉದ್ಯಮಿ ರೂಬೆನ್ ಸಿಂಗ್ (Reuben Singh) ಈ ಕನಸನ್ನು ಅತ್ಯಂತ ಐಷಾರಾಮಿ ರೀತಿಯಲ್ಲಿ ನನಸಾಗಿಸಿದ್ದಾರೆ. 15 ರೋಲ್ಸ್-ರಾಯ್ಸ್‌ಗಳು ಮತ್ತು ಇತರ ಅಪರೂಪದ ಸೂಪರ್ ಕಾರುಗಳನ್ನು (Super Cars) ಹೊಂದಿರುವ, ರೂಬೆನ್ ಸಿಂಗ್ ಅವರ ಗ್ಯಾರೇಜ್ ವಿಶ್ವದ ಅತ್ಯಂತ ಚರ್ಚಿತ ಕಲೆಕ್ಷನ್‌ಗಳಲ್ಲಿ ಒಂದಾಗಿದೆ.
ರೂಬೆನ್ ಸಿಂಗ್ ಹಿನ್ನೆಲೆ
1970ರ ದಶಕದಲ್ಲಿ ಭಾರತದಿಂದ ಇಂಗ್ಲೆಂಡ್‌ಗೆ ವಲಸೆ ಬಂದ ಕುಟುಂಬದ ಸದಸ್ಯ ರೂಬೆನ್ ಸಿಂಗ್, ಇಶರ್ ಕ್ಯಾಪಿಟಲ್ (ಖಾಸಗಿ ಈಕ್ವಿಟಿ ಸಂಸ್ಥೆ) ಮತ್ತು ಆಲ್‌ಡೇಪಿಎ (ಗ್ರಾಹಕ ಸೇವೆ ಔಟ್‌ಸೋರ್ಸಿಂಗ್ ಕಂಪನಿ) ಸಂಸ್ಥಾಪಕರಾಗಿದ್ದಾರೆ. ʼಬ್ರಿಟಿಷ್ ಬಿಲ್ ಗೇಟ್ಸ್' ಎಂದು ಕರೆಯಲ್ಪಡುವ ರೂಬೆನ್ ಸಿಂಗ್, ವಿದೇಶದಲ್ಲಿ ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ಜತೆಗೆ ಅವರು ತಮ್ಮನ್ನು ಹೆಮ್ಮೆಯ ಬ್ರಿಟಿಷ್ ಸಿಖ್ ಎಂದು ಕರೆದುಕೊಂಡು, ತಮ್ಮ ಧರ್ಮವು ಜೀವನ ಮತ್ತು ಕೆಲಸದಲ್ಲಿ ಶಕ್ತಿ ನೀಡುತ್ತದೆ ಎಂದು ನಂಬುತ್ತಾರೆ.
ರೋಲ್ಸ್-ರಾಯ್ಸ್ ಒಡನಾಟ
ರೂಬೆನ್ ಸಿಂಗ್ ತಮ್ಮ ರೋಲ್ಸ್-ರಾಯ್ಸ್ ಕಾರುಗಳೊಂದಿಗೆ, ಅವುಗಳ ಬಣ್ಣಕ್ಕೆ ತಕ್ಕಂತೆ ಪೇಟವನ್ನು ಧರಿಸಿ ಪೋಸ್ ನೀಡಿದ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆದಾಗ ಭಾರಿ ಗಮನ ಸೆಳೆದರು. ಈ ವಿಶಿಷ್ಟ ಶೈಲಿಯು ಅವರನ್ನು ಐಷಾರಾಮಿ, ಆತ್ಮವಿಶ್ವಾಸ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತವನ್ನಾಗಿಸಿತು. ದೀಪಾವಳಿಯಂದು ಐದು ರೋಲ್ಸ್-ರಾಯ್ಸ್ ಕಾರುಗಳನ್ನು ತಮಗೆ ತಾವೇ ಉಡುಗೊರೆಯಾಗಿ ಖರೀದಿಸಿದ ರೂಬೆನ್ ಸಿಂಗ್ ಒಟ್ಟು 15 ಕಾರುಗಳ ಕಲೆಕ್ಷನ್ ಹೊಂದಿದ್ದಾರೆ.
ಸೂಪರ್ ಕಾರ್‌ಗಳ ಸಂಗ್ರಹ
ರೋಲ್ಸ್-ರಾಯ್ಸ್ ಜತೆಗೆ, ರೂಬೆನ್ ಗ್ಯಾರೇಜ್‌ನಲ್ಲಿ 3.22 ಕೋಟಿ ರೂ. ಬೆಲೆಯ ಲಂಬೋರ್ಗಿನಿ ಹುರಾಕಾನ್, 12.95 ಕೋಟಿ ರೂ.ಯಿಂದ ಆರಂಭವಾಗುವ ಅಪರೂಪದ ಬುಗಾಟಿ ವೆಯ್ರಾನ್, ಫೆರಾರಿ F12 ಬರ್ಲಿನೆಟ್ಟಾ, ಪೋರ್ಷೆ 918 ಸ್ಪೈಡರ್ ಮತ್ತು ಪಗಾನಿ ಹುವಾಯಿರಾ ಕೂಡ ಸೇರಿವೆ. ಈ ಬಹು-ಬಿಲಿಯನ್ ಡಾಲರ್ ಸಂಗ್ರಹವು ಕಾರು ಪ್ರಿಯರಿಗೆ ಮಾತ್ರವಲ್ಲ, ಜನಪ್ರಿಯ ಸಂಸ್ಕೃತಿಯಲ್ಲೂ ಆಕರ್ಷಣೆಯ ಕೇಂದ್ರವಾಗಿದೆ.
ಕಾರುಗಳ ಜತೆಗೆ, ರೂಬೆನ್ ಸಿಂಗ್ ತಮ್ಮ ಸಿಖ್ ಗುರುತನ್ನು ತಮ್ಮ ಜೀವನಶೈಲಿಯೊಂದಿಗೆ ಜೋಡಿಸಿದ ರೀತಿಯೂ ಗಮನಾರ್ಹವಾಗಿದೆ. ಕಾರುಗಳ ಬಣ್ಣಕ್ಕೆ ತಕ್ಕಂತೆ ಪೇಟ ಧರಿಸುವುದು ಅವರ ಸಿಖ್ ಪರಂಪರೆಯ ಹೆಮ್ಮೆಯ ಸಂಕೇತವಾಗಿದೆ. ಪೇಟವು ಕೇವಲ ಸಂಪ್ರದಾಯವಲ್ಲ, ಶಕ್ತಿ, ಹೆಮ್ಮೆ ಮತ್ತು ವೈಯಕ್ತಿಕತೆಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.