ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NCW: ಮುರ್ಷಿದಾಬಾದ್ ಗಲಭೆ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ; ಭದ್ರತೆ ಒದಗಿಸಿ ಎಂದ ಸಂತ್ರಸ್ತರು

Vijaya Rahatkar: ಬಹು ಚರ್ಚಿತ ವಕ್ಫ್‌ ತಿದ್ದುಪಡಿ ಕಾಯ್ದೆ ದೇಶದಲ್ಲಿ ಜಾರಿಯಾದ ಬಳಿಕ ಹಿಂಸಾಚಾರ ಭುಗಿಲೆದ್ದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ನೇತೃತ್ವದ ನಿಯೋಗವು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿತು.

ಮುರ್ಷಿದಾಬಾದ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ

ಸಂತ್ರಸ್ತರ ಅಹವಾಲು ಸ್ವೀಕರಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್.

Profile Ramesh B Apr 19, 2025 9:22 PM

ಕೋಲ್ಕತಾ: ಬಹು ಚರ್ಚಿತ ವಕ್ಫ್‌ ತಿದ್ದುಪಡಿ ಕಾಯ್ದೆ ದೇಶದಲ್ಲಿ ಜಾರಿಯಾದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಕಾಯ್ದೆ ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸಿದರು. ಈ ವೇಳೆ ಮುರ್ಷಿದಾಬಾದ್‌ನಲ್ಲಿ ನಡೆದ ಗಲಭೆಯಲ್ಲಿ ಮೂವರು ಪ್ರಾಣ ಕಳೆದುಕೊಂಡರು. ಹಲವರು ಗಾಯಗೊಂಡಿದ್ದಲ್ಲದೆ, ಕೆಲವರ ಮನೆ-ಮಠ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ (ಏ. 19) ರಾಷ್ಟ್ರೀಯ ಮಹಿಳಾ ಆಯೋಗದ (National Commission for Women-NCW) ಅಧ್ಯಕ್ಷೆ ವಿಜಯಾ ರಹತ್ಕರ್ (Vijaya Rahatkar) ನೇತೃತ್ವದ ನಿಯೋಗವು ಮುರ್ಷಿದಾಬಾದ್ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿತು. ಸಂತ್ರಸ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿತು.

ಆದಾಗ್ಯೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಎನ್‌ಸಿಡಬ್ಲ್ಯು ನಡೆಯನ್ನು ಟೀಕಿಸಿದ್ದು, ಇದು ಬಿಜೆಪಿಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಅವರ ಎಕ್ಸ್‌ ಪೋಸ್ಟ್‌:



ದುಃಖ ತೋಡಿಕೊಂಡ ಸಂತ್ರಸ್ತರು

ಎನ್‌ಸಿಡಬ್ಲ್ಯು ಸದಸ್ಯರೊಂದಿಗೆ ದುಃಖ ತೋಡಿಕೊಂಡ ಮಹಿಳೆಯರು ಇತ್ತೀಚೆಗೆ ನಡೆದ ಕೋಮು ಗಲಭೆಯಿಂದ ತಾವು ಎದುರಿಸಿದ ಭಯಾನಕ ಅನುಭವವನ್ನು ತೆರೆದಿಟ್ಟರು. ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಶಾಶ್ವತ ಬಿಎಸ್‌ಎಫ್‌ ಕ್ಯಾಂಪ್‌ ಸ್ಥಾಪಿಸುವಂತೆಯೂ ಬೇಡಿಕೆ ಮುಂದಿಟ್ಟರು. ಜತೆಗೆ ಗಲಭೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (NIA) ತನಿಖೆ ನಡೆಸುವಂತೆಯೂ ಮನವಿ ಮಾಡಿದರು.

ವಿಜಯಾ ರಹತ್ಕರ್ ಮಾತನಾಡಿ, "ಈ ಮಹಿಳೆಯರು ಅನುಭವಿಸುತ್ತಿರುವ ಯಾತನೆಯನ್ನು ಕೇಳಿ ಆಘಾತವಾಯ್ತು. ಹಿಂಸಾಚಾರದ ವೇಳೆ ಅವರು ಅನುಭವಿಸಿದ ಹಿಂಸೆ ಕಲ್ಪನೆಗೂ ಮೀರಿದ ಸಂಗತಿ. ಕೇಂದ್ರವು ನಿಮ್ಮೊಂದಿಗೆ ಇರುವುದರಿಂದ ಚಿಂತಿಸಬೇಡಿ. ಎಲ್ಲ ರೀತಿಯ ನೆರವನ್ನು ಕೇಂದ್ರ ನೀಡಲಿದೆʼʼ ಎಂದು ಅವರು ಸಂತ್ರಸ್ತರಿಗೆ ಭರವಸೆ ನೀಡಿದರು.

"ನಿಮ್ಮ ದುಃಸ್ಥಿತಿಯನ್ನು ನೋಡಲು ಬಂದಿದ್ದೇವೆ. ಇನ್ನುಮುಂದೆ ಚಿಂತಿಸಬೇಡಿ. ದೇಶ ಮತ್ತು ಆಯೋಗ ನಿಮ್ಮೊಂದಿಗಿದೆ. ನೀವು ಒಬ್ಬಂಟಿಯಾಗಿದ್ದೀರಿ ಎಂದು ಭಾವಿಸಬೇಡಿ" ಎಂದು ರಹತ್ಕರ್ ಬೆಟ್ಬೋನಾ ಗ್ರಾಮದಲ್ಲಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಎನ್‌ಸಿಡಬ್ಲ್ಯು ತಂಡದೊಂದಿಗಿನ ಸಂವಾದದ ಸಮಯದಲ್ಲಿ ಗಲಭೆ ಪೀಡಿತ ಪ್ರದೇಶದ ಅನೇಕ ಮಹಿಳೆಯರು ಕಣ್ಣೀರು ಸುರಿಸಿದ್ದು, ಭಾವುಕ ಸನ್ನಿವೇಶ್‌ ನಿರ್ಮಾಣವಾಯಿತು. ಈ ವೇಳೆ ಹಲವರು 'ನಮಗೆ ಲಕ್ಷ್ಮಿರ್ ಭಂಡಾರ್ ಬೇಡ, ನಮಗೆ ಬಿಎಸ್ಎಫ್ ಶಿಬಿರ ಬೇಕು. ನಮಗೆ ಭದ್ರತೆ ಬೇಕು' ಎಂದು ಬರೆದಿರುವ ಫಲಕಗಳನ್ನು ಪ್ರದರ್ಶಿಸಿದರು.

ಎನ್‌ಸಿಡಬ್ಲ್ಯು ಸದಸ್ಯೆ ಅರ್ಚನಾ ಮಜುಂದಾರ್ ಸುದ್ದಿಗಾರರೊಂದಿಗೆ ಮಾತನಾಡಿ, ʼʼಆಯೋಗವು ಸಂತ್ರಸ್ತರ ಬೇಡಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವರದಿ ಮಾಡಲಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಬಿಎಸ್ಎಫ್ ಶಿಬಿರಗಳನನು ನಿಯೋಜಿಸುವ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದುʼʼ ಎಂದು ತಿಳಿಸಿದರು.

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಏ. 11 ಮತ್ತು 12 ರಂದು ಭಾರಿ ಪ್ರಮಾಣದಲ್ಲಿ ಹಿಂಸಾಚಾರಕ್ಕೆ ಸಾಕ್ಷಿಯಾದ ಮುರ್ಷಿದಾಬಾದ್ ಜಿಲ್ಲೆಯ ಧುಲಿಯನ್ ಪ್ರದೇಶಕ್ಕೂ ಎನ್‌ಸಿಡಬ್ಲ್ಯು ತಂಡ ಭೇಟಿ ನೀಡಿತು.