ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

Onam 2026: ಸಮೃದ್ಧಿ ಮತ್ತು ಸಡಗರದ ಸಂಕೇತವಾದ ‘ಓಣಂ ಸದ್ಯ’ವನ್ನು (ಓಣಂ ಭೋಜನ) ಮನುಷ್ಯರು ಸವಿಯುವುದನ್ನು ನಾವು ನೋಡಿದ್ದೇವೆ. ಆದರೆ ಕೇರಳಂನ ಪ್ರಸಿದ್ಧ ದೇವಾಲಯವೊಂದರಲ್ಲಿ ಮಂಗಗಳು ಮನುಷ್ಯರಂತೆಯೇ ಸಾಲಾಗಿ ಕುಳಿತು ಬಾಳೆ ಎಲೆಗೆ ಪ್ರೀತಿಯಿಂದ ಬಡಿಸಿದ ಊಟ ಹಾಗೂ ಪಾಯಸ ಸವಿಯುವ ಅಪರೂಪದ ಆಚರಣೆ ಬಗ್ಗೆ ಗೊತ್ತೆ? ಇಲ್ಲಿದೆ ವಿವರ

ಓಣಂ ಹಬ್ಬದಂದು ಇಲ್ಲಿ ಮಂಗಗಳಿಗೆ ರಾಜಾತಿಥ್ಯ, ವಿಶೇಷ ಭೋಜನ

ಕೇರಳಂನ ಕೊಲ್ಲಂನಲ್ಲಿ ನಡೆದ ವಾನರ ಸದ್ಯ -

Ramesh Ballamoole
Ramesh Ballamoole Aug 26, 2026 8:51 PM

ತಿರುವನಂತಪುರಂ, ಆ. 26: ದೇವರ ಸ್ವಂತ ನಾಡು ಕೇರಳಂನ ಅತ್ಯಂತ ದೊಡ್ಡ ಹಬ್ಬವಾದ ಓಣಂ (Onam 2026) ಎಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು ಸಮೃದ್ಧ ಸಾಂಪ್ರದಾಯಿಕ ಊಟವಾದ ಓಣಂ ಸದ್ಯ (Onam Sadya). ಸಾಮಾನ್ಯವಾಗಿ ಮನುಷ್ಯರು ಆನಂದಿಸುವ ಈ ಭೋಜನವನ್ನು ಕೇರಳಂನ ಪ್ರಸಿದ್ಧ ದೇವಾಲಯವೊಂದರಲ್ಲಿ ವಾನರ ಪಡೆ ಅತ್ಯಂತ ಶಿಸ್ತಿನಿಂದ ಸವಿಯುತ್ತದೆ. ಕೊಲ್ಲಂ ಜಿಲ್ಲೆಯ ಶಾಸ್ತಂಕೋಟ್ಟ ಶ್ರೀ ಧರ್ಮಶಾಸ್ತಾ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಓಣಂ ಹಬ್ಬದ ಸಂದರ್ಭದ ಈ ಐತಿಹಾಸಿಕ ವಾನರ ಸದ್ಯ (Vanara Sadya) ನೆರವೇರುತ್ತದೆ.

ಓಣಂ ಹಬ್ಬದ ಮುಖ್ಯ ದಿನಗಳಾದ ಉತ್ತರಾಡಂ ಮತ್ತು ತಿರು ಓಣಂ ದಿನಗಳಂದು ಈ ದೇವಾಲಯದಲ್ಲಿ ಕಪಿಗಳಿಗಾಗಿಯೇ ವಿಶೇಷ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದೇವಾಲಯದ ಹೊರಾಂಗಣದಲ್ಲಿ ನೆಲದ ಮೇಲೆ ಸಾಲಾಗಿ ಬಾಳೆಎಲೆಗಳನ್ನು ಹಾಸಲಾಗುತ್ತದೆ. ಮನುಷ್ಯರ ಊಟದಂತೆಯೇ ಕಪಿಗಳಿಗೂ ಬಿಸಿಬಿಸಿ ಅನ್ನ, ಬೆಳೆ ಸಾಂಬಾರ್, ಅವಿಲ್, ಪಚಡಿ, ಉಪ್ಪಿನಕಾಯಿ, ಸಕ್ಕರೆಪೆರಟ್ಟಿ (ಬಾಳೆಹಣ್ಣಿನ ಚಿಪ್ಸ್), ಹಪ್ಪಳ ಮತ್ತು ಪಾಯಸವನ್ನು ಬಡಿಸಲಾಗುತ್ತದೆ. ಎಲ್ಲ ಊಟವನ್ನು ಬಡಿಸಿದ ನಂತರ ಮೊದಲು ಒಂದು ಗುಂಪಿನ ಕಪಿ ಬಂದು ಊಟ ಮಾಡಿದ ಬಳಿಕವೇ ಉಳಿದ ಎಲ್ಲ ಕಪಿಗಳು ಸಾಲಾಗಿ ಬಂದು ಯಾವುದೇ ಗಲಾಟೆ ಮಾಡದೆ ಸರದಿಯಂತೆ ಊಟ ಸವಿಯುವುದು ಇಲ್ಲಿನ ವಿಶೇಷ.

ವಾನರ ಸದ್ಯದ ಎನ್‌ಡಿಟಿವಿಯ ಎಕ್ಸ್‌ ಪೋಸ್ಟ್‌ ಇಲ್ಲಿದೆ:



ಯಾರು ಈ ಅಂಬಲಕ್ಕುರಂಗುಗಳ್‌?

ಈ ದೇವಾಲಯದ ಸುತ್ತಮುತ್ತ ಸಣ್ಣ ಅರಣ್ಯ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕಪಿಗಳು ವಾಸಿಸುತ್ತವೆ. ಸ್ಥಳೀಯರು ಇವುಗಳನ್ನು ಪ್ರೀತಿಯಿಂದ ಅಂಬಲಕ್ಕುರಂಗುಗಳ್‌ (ದೇವಾಲಯದ ಕಪಿಗಳು) ಎಂದು ಕರೆಯುತ್ತಾರೆ. ಆಡಳಿತ ಮಂಡಳಿ ಹಾಗೂ ಭಕ್ತರು ಈ ಕಪಿಗಳನ್ನುದೇವಾಲಯದ ಸದಸ್ಯರೆಂದೇ ಭಾವಿಸುತ್ತಾರೆ. ಓಣಂ ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ, ವರ್ಷದ ಪ್ರತಿದಿನವೂ ಇವುಗಳಿಗೆ ದೇವಾಲಯದಿಂದ ಆಹಾರವನ್ನು ನೀಡಲಾಗುತ್ತದೆ.

ಲೋಕಸಭೆಯಲ್ಲಿ ಗದ್ದಲದ ನಡುವೆಯೇ 2 ಮಸೂದೆಗೆ ಅಂಗೀಕಾರ: ಕೇರಳ ಇನ್ಮುಂದೆ ಕೇರಳಂ

ಹಿನ್ನಲೆ ಮತ್ತು ನಂಬಿಕೆ

ಸಾಸ್ಥಾಂಕೊಟ್ಟಾ ಶ್ರೀ ಧರ್ಮಶಾಸ್ತಾ ದೇವಾಲಯವು ಕೇರಳದ ಅತ್ಯಂತ ಪುರಾತನ 5 ಧರ್ಮಶಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಈ ವಾನರ ಸದ್ಯದ ಹಿಂದೆ ಒಂದು ಪೌರಾಣಿಕ ಕಥೆಯಿದೆ. ತ್ರೇತಾಯುಗದಲ್ಲಿ ಶ್ರೀರಾಮನು ಸೀತಾದೇವಿಯನ್ನು ಹುಡುಕುತ್ತಾ ದಕ್ಷಿಣ ಭಾರತಕ್ಕೆ ಬಂದಾಗ, ಈ ಜಾಗದಲ್ಲಿ ಕೆಲಕಾಲ ತಂಗಿದ್ದನೆಂಬ ನಂಬಿಕೆಯಿದೆ. ಶ್ರೀ ರಾಮನು ಇಲ್ಲಿಂದ ನಿರ್ಗಮಿಸುವಾಗ ತನ್ನೊಂದಿಗಿದ್ದ ವಾನರ ಪಡೆಗೆ ಇಲ್ಲೇ ನೆಲೆಸಿ, ಧರ್ಮಶಾಸ್ತಾ ಅಯ್ಯಪ್ಪ ಸ್ವಾಮಿ ಸೇವೆ ಮಾಡುವಂತೆ ಸೂಚಿಸಿ ಆಶೀರ್ವದಿಸಿದನೆಂದು ಪುರಾಣ ಹೇಳುತ್ತದೆ. ಆದ್ದರಿಂದ ಇಲ್ಲಿನ ಪ್ರತಿಯೊಂದು ಕಪಿಯನ್ನು ಶ್ರೀ ರಾಮನ ಹಾಗೂ ಅಯ್ಯಪ್ಪನ ಪ್ರಿಯ ಭಕ್ತರೆಂದು ಪರಿಗಣಿಸಿ, ದಶಕಗಳಿಂದ ಈ ಊಟದ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗಿದೆ.

ಈ ಆಚರಣೆಯ ಹಿಂದೆ ಇನ್ನೊಂದು ಪ್ರಮುಖ ಇತಿಹಾಸವಿದೆ. 53 ವರ್ಷಗಳ ಹಿಂದೆ ದೇವಾಲಯದ ಸಲಹಾ ಸಮಿತಿಯ ಪ್ರಮುಖರಾದ ಎಂ.ವಿ. ಅರವಿಂದಾಕ್ಷನ್ ನಾಯರ್ ವಾನರಗಳ ಹಸಿವನ್ನು ಕಂಡು ಈ ಸುಂದರ ಪರಂಪರೆಗೆ ನಾಂದಿ ಹಾಡಿದರು ಎನ್ನಲಾಗಿದೆ. ‘'ಓಣಂ ಹಬ್ಬದ ಸಂದರ್ಭದಲ್ಲಿ ನಾವೆಲ್ಲರೂ ವೈಭವದ ಊಟವನ್ನು ಆನಂದಿಸುವಾಗ, ದಶಕಗಳಿಂದ ನಮ್ಮೊಂದಿಗೇ ವಾಸಿಸುತ್ತಿರುವ ಈ ಪ್ರಾಣಿಗಳು ಹಸಿವಿನಿಂದ ಕಷ್ಟಪಡುವುದನ್ನು ನೋಡಿ ಮನಸ್ಸಿಗೆ ತೀವ್ರ ನೋವಾಯಿತು'’ ಎಂದು ಸ್ಮರಿಸುವ ನಾಯರ್, ವಾನರಗಳ ಹಸಿವು ನೀಗಿಸಲು ಆರಂಭಿಸಿದ ಈ ಯತ್ನವು ಇಂದು ಸಾಸ್ಥಾಂಕೊಟ್ಟಾ ದೇವಾಲಯದ ಅತ್ಯಂತ ಪ್ರಸಿದ್ಧ ಓಣಂ ಪರಂಪರೆಯಾಗಿ ಬದಲಾಗಿದೆ. ಇಲ್ಲಿ ಭಕ್ತರೇ ಅಡುಗೆ ಮಾಡಿ, ಬಾಳೆಎಲೆಗೆ ಪ್ರೀತಿಯಿಂದ ಬಡಿಸಿ ಪ್ರಶಾಂತವಾಗಿ ಊಟ ಸವಿಯಲು ಜಾಗ ಬಿಟ್ಟು ದೂರ ಸರಿಯುತ್ತಾರೆ.

ಹೆಣ್ಣಾನೆ ದಾನ ಮಾಡುವಂತೆ ಕೇರಳಂ ಸಿಎಂಗೆ ಡಿ.ಕೆ.ಶಿವಕುಮಾರ್‌ ಪತ್ರ

ಸಮಾನತೆಯ ಪಾಠ

ಹಬ್ಬದ ಸಂತೋಷ ಮತ್ತು ಆಹಾರವು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿರಬಾರದು, ನಮ್ಮೊಂದಿಗೆ ಜೀವಿಸುವ ಸಕಲ ಪ್ರಾಣಿ-ಪಕ್ಷಿಗಳಿಗೂ ತಲುಪಬೇಕು ಎನ್ನುವ ಉದಾತ್ತ ತತ್ವಕ್ಕೆ ಈ ಆಚರಣೆ ಸಾಕ್ಷಿಯಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಹಾಗೂ ಪ್ರಕೃತಿ ಕಾಳಜಿಯನ್ನು ಎತ್ತಿಹಿಡಿಯುವ ಈ ವಿಶಿಷ್ಟ ‘ವಾನರ ಸದ್ಯ’ವನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ದೇವಾಲಯಕ್ಕೆ ಆಗಮಿಸುತ್ತಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.