ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಯೋಧರಿಗೆ ಚಹಾ–ಲಸ್ಸಿ ವಿತರಿಸಿದ ಬಾಲಕನಿಗೆ ರಾಷ್ಟ್ರೀಯ ಬಾಲ ಪುರಸ್ಕಾರ
ಆಪರೇಷನ್ ಸಿಂದೂರ್ ವೇಳೆ ತನಗೆ ಎದುರಾಗಬಹುದಾದ ಅಪಾಯವನ್ನು ಲೆಕ್ಕಿಸದೇ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ತನ್ನ ಗ್ರಾಮದ ಸಮೀಪದ ಗಡಿ ನಿಯೋಜಿತರಾಗಿದ್ದ ಭಾರತೀಯ ಯೋಧರಿಗೆ ಪ್ರತಿದಿನ ನೀರು, ಹಾಲು ಮತ್ತು ಲಸ್ಸಿ ವಿತರಿಸುತ್ತಿದ್ದ ಶ್ರವಣ್ ಸಿಂಗ್ ಎಂಬ ಪುಟ್ಟ ಸಾಹಸವಂತನ ಕಥೆ ಇದು. ಆತನಿಗೆ ಇದೀಗ ಕೇಂದ್ರ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿದೆ.
ಶ್ರವಣ್ ಸಿಂಗ್ ಅವರಿಗೆ ಪುರಸ್ಕಾರ ವಿತರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು -
ನವದೆಹಲಿ, ಡಿ. 26: ಆತನಿಗೆ ಇನ್ನೂ ಕೇವಲ 10 ವರ್ಷ ವಯಸ್ಸು. ಆದರೆ ಅವನ ದೈರ್ಯ ಸಾಹಸ ದೊಡ್ಡದು. ಹೌದು, ನಾವೀಗ ಹೇಳ ಹೊರಟಿರುವುದು ಆಪರೇಷನ್ ಸಿಂದೂರ್ (Operation Sindoor) ವೇಳೆ ತನಗೆ ಎದುರಾಗಬಹುದಾದ ಅಪಾಯವನ್ನು ಲೆಕ್ಕಿಸದೇ ಪಂಜಾಬ್‌ನ ಫಿರೋಜ್‌ಪುರ (Punjab's Ferozepur) ಜಿಲ್ಲೆಯ ತನ್ನ ಗ್ರಾಮದ ಸಮೀಪದ ಗಡಿ ನಿಯೋಜಿತರಾಗಿದ್ದ ಭಾರತೀಯ ಯೋಧರಿಗೆ ಯುದ್ಧದ ಅಪಾಯದ ನಡುವೆಯೂ ಪ್ರತಿದಿನ ನೀರು, ಹಾಲು ಮತ್ತು ಲಸ್ಸಿ ವಿತರಿಸುತ್ತಿದ್ದ ಶ್ರವಣ್ ಸಿಂಗ್ (Shravan Singh) ಎಂಬ ಪುಟ್ಟ ಸಾಹಸವಂತನ ಬಗ್ಗೆ.
ಶ್ರವಣ್ ಸಿಂಗ್‌ನ ಈ ಶೌರ್ಯವನ್ನು ಗುರುತಿಸಿ ಡಿಸೆಂಬರ್ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಯಲ್ಲಿ ಮಕ್ಕಳಿಗೆ ನೀಡುವ ಅತ್ಯುನ್ನತ ಗೌರವ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಆತನನ್ನು ಗೌರವಿಸಿದ್ದಾರೆ. ಈ ಪುಟ್ಟ ಬಾಲಕನ ಸಾಹಸಗಾಥೆ ಇಲ್ಲಿದೆ.
“ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂದೂರ್ ಆರಂಭವಾದಾಗ ಸೈನಿಕರು ನಮ್ಮ ಗ್ರಾಮಕ್ಕೆ ಬಂದಿದ್ದರು. ಅವರಿಗೆ ಸೇವೆ ಮಾಡಬೇಕು ಎಂದು ನನಗೆ ಅನಿಸಿತು. ನಾನು ಪ್ರತಿದಿನ ಅವರಿಗೆ ಹಾಲು, ಚಹಾ, ಮಜ್ಜಿಗೆ ಮತ್ತು ಐಸ್ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ” ಎಂದು ಶ್ರವಣ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. “ಈ ಪ್ರಶಸ್ತಿ ಸಿಕ್ಕಿದ್ದು ನನಗೆ ತುಂಬಾ ಸಂತೋಷ ತಂದಿದೆ. ಈ ಪುರಸ್ಕಾರ ದೊರೆಯುತ್ತದೆ ಎಂದು ಕನಸಲ್ಲೂ ನಾನು ಊಹಿಸಿರಲಿಲ್ಲ” ಎಂದು ಅವನು ಹೇಳಿದ್ದಾನೆ.
ಬಾಲಕ ಶ್ರವಣ್ ಸಿಂಗ್‌ನ ಸೇವೆಯನ್ನು ಶ್ಲಾಘಿಸಿದ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ, “ದೇಶಭಕ್ತಿ ವಯಸ್ಸಿನಿಂದ ನಿರ್ಧಾರವಾಗುವುದಿಲ್ಲ. ಅದು ಅವರ ಮಾಡುವ ಕಾರ್ಯದಿಂದ ತಿಳಿಯುತ್ತದೆ” ಎಂದು ಹೇಳಿದ್ದಾರೆ.
30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ
“ಫಿರೋಜ್‌ಪುರದ ಚಕ್ ತರನ್ ವಾಲಿ ಗ್ರಾಮದ 10 ವರ್ಷದ ಶ್ರವಣ್ ಸಿಂಗ್ ಅಪೂರ್ವ ಧೈರ್ಯ ಮತ್ತು ಮಾನವೀಯತೆಯನ್ನು ಪ್ರದರ್ಶಿಸಿದ್ದಾನೆ. ಆಪರೇಷನ್ ಸಿಂದೂರ್ ವೇಳೆ ಅಪಾಯಕಾರಿ ಗಡಿಭಾಗಗಳಲ್ಲಿ ನಿಯೋಜಿತರಾಗಿದ್ದ ಭಾರತೀಯ ಸೇನಾ ಸಿಬ್ಬಂದಿಗೆ ಆತ ನಿಸ್ವಾರ್ಥವಾಗಿ ನೀರು, ಹಾಲು ಮತ್ತು ಚಹಾ ವಿತರಿಸಿದ. ದೊಡ್ಡವರೇ ಭಯ ಪಡುವವ ಸಂದರ್ಭದಲ್ಲೂ ಧೈರ್ಯ ಪ್ರದರ್ಶಿಸಿದ್ದಾನೆ. ಆತನ ಧೈರ್ಯ ಮತ್ತು ಸೇವಾಭಾವವು ದೇಶಭಕ್ತಿಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದನ್ನು ತಿಳಿಸುತ್ತದೆ” ಎಂದು ರಾಘವ್ ಚಡ್ಡಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇಯಲ್ಲಿ ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕೈಗೊಂಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.
ರಾಷ್ಟ್ರೀಯ ಬಾಲ ಪುರಸ್ಕಾರವು ಧೈರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ಸಾಮಾಜಿಕ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪರೂಪದ ಸಾಧನೆ ಮಾಡಿದ ಮಕ್ಕಳಿಗೆ ಭಾರತ ಸರ್ಕಾರ ಪ್ರತಿವರ್ಷ ನೀಡುವ ಗೌರವಾನ್ವಿತ ರಾಷ್ಟ್ರೀಯ ಪ್ರಶಸ್ತಿ.
ಡಿಸೆಂಬರ್ 26ರಂದು ಆಚರಿಸಲಾಗುವ ವೀರ ಬಾಲ ದಿವಸ್ ಮಹತ್ವದ ಕುರಿತು ಮಾತನಾಡಿದ ರಾಷ್ಟ್ರಪತಿ, ʼʼಸುಮಾರು 320 ವರ್ಷಗಳ ಹಿಂದೆ ದಶಮ ಸಿಖ್ ಗುರುಗಳಾದ ಗುರು ಗೋಬಿಂದ್ ಸಿಂಗ್ ಜೀ ಹಾಗೂ ಅವರ ನಾಲ್ವರು ಪುತ್ರರು ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಾ “ಸರ್ವೋಚ್ಛ ತ್ಯಾಗ” ಮಾಡಿದರು. ಅವರು ಎಲ್ಲ ಭಾರತೀಯರಿಗೂ ಪೂಜ್ಯನೀಯರುʼʼ ಎಂದು ಹೇಳಿದರು.