30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ
Sabarimala Pilgrim: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಾಹಿತಿಯ ಪ್ರಕಾರ, ಈ ಋತುವಿನಲ್ಲಿ ಒಟ್ಟು 30,01,532 ಭಕ್ತರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಕಳೆದ ವರ್ಷ ದೇವಾಸ್ಥಾನಕ್ಕೆ ಇದೇ ವೇಳೆ ಭೇಟಿ ನೀಡಿದ ಭಕ್ತರಿಗೆ ಹೋಲಿಸಿದರೆ ಈ ಬಾರಿ ಎರಡು ಲಕ್ಷ ಕಡಿಮೆಯಾಗಿದೆ ಎಂದು ಶುಕ್ರವಾರ ಅಂಕಿಅಂಶಗಳು ತಿಳಿಸಿವೆ.
ಶಬರಿಮಲೆ (ಎಐ ಚಿತ್ರ) -
ತಿರುವನಂತಪುರಂ: ಹಿಂದೂಗಳ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ(Sabarimala Temple) ಈ ವರ್ಷ ಇದುವರೆಗೆ ಭೇಟಿ ನೀಡಿದ ಭಕ್ತರ ಸಂಖ್ಯೆ 30 ಲಕ್ಷ ದಾಟಿದೆ. ಡಿಸೆಂಬರ್ 25ರವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 30,01,532 ಭಕ್ತರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಆದರೆ ಇದು ಕಳೆದ ವರ್ಷದ ದೇವಾಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಹೋಲಿಸಿದರೆ ಎರಡು ಲಕ್ಷ ಕಡಿಮೆಯಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಕಳೆದ ಋತುವಿನಲ್ಲಿ ಡಿಸೆಂಬರ್ 23ರಲ್ಲೇ ಭಕ್ತರ 30 ಲಕ್ಷ ಗಡಿ ದಾಟಿದ್ದು, 30,78,044 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.
ಕಳೆದ ವರ್ಷ ಡಿಸೆಂಬರ್ 25ರ ವೇಳೆಗೆ ಶಬರಿಮಲೆ ದರ್ಶನ ಪಡೆದ ಭಕ್ತರ ಒಟ್ಟು ಸಂಖ್ಯೆ 32,49,756 ಆಗಿತ್ತು. 2023ರಲ್ಲಿ ಇದೇ ದಿನಾಂಕದವರೆಗೆ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಸುಮಾರು 28.42 ಲಕ್ಷವಾಗಿತ್ತು.
ಈ ಋತುವಿನ ಆರಂಭದಿಂದಲೇ ಭಾರೀ ಜನಸಂದಣಿ ಕಂಡುಬಂದಿತ್ತು. ಆದರೆ ಹೈಕೋರ್ಟ್ ನಿರ್ದೇಶನದ ಅನುಸಾರ ಜನಸಂದಣಿ ನಿಯಂತ್ರಣಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿಯು ವರ್ಚುವಲ್ ಕ್ಯೂ ಮತ್ತು ಸ್ಥಳೀಯ (ಸ್ಪಾಟ್) ಬುಕ್ಕಿಂಗ್‌ಗಳ ಮೇಲೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಿದ್ದರಿಂದ ಭಕ್ತರ ಸಂಖ್ಯೆ ಸ್ವಲ್ಪ ಪ್ರಮಾಣ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.
ಈ ಋತುವಿನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಭಕ್ತರು ದರ್ಶನ ಪಡೆದಿದ್ದು ನವೆಂಬರ್ 19ರಂದು. ದೇವಾಲಯ ತೆರೆದ ನಾಲ್ಕನೇ ದಿನವಾದ ಅಂದು 1,02,299 ಭಕ್ತರು ಭೇಟಿ ನೀಡಿದ್ದರು. ಡಿಸೆಂಬರ್ 12ರಂದು ಅತೀ ಕಡಿಮೆ ಜನಸಂದಣಿ ಕಂಡುಬಂದಿದ್ದು, ಆ ದಿನ 49,738 ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಶಬರಿಮಲೆ ಭಕ್ತರ ಗಮನಕ್ಕೆ; ಪ್ರತಿದಿನ 5 ಸಾವಿರ ಜನರಿಗಷ್ಟೇ ಸ್ಟಾಟ್ ಬುಕ್ಕಿಂಗ್
ಭಾನುವಾರ ರಜಾದಿನಗಳಾಗಿದ್ದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಜನಸಂದಣಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 21ರಂದು (ಭಾನುವಾರ) ಒಟ್ಟು 61,576 ಭಕ್ತರು ದರ್ಶನ ಪಡೆದಿದ್ದರು. ಇತರ ದಿನಗಳಲ್ಲಿ ದಿನದ ಸರಾಸರಿ ಸಂಖ್ಯೆ 80,000ಕ್ಕಿಂತ ಹೆಚ್ಚಾಗಿಯೇ ಇತ್ತು.
ಮಂಡಲ ಪೂಜೆಯ ಹಿನ್ನೆಲೆಯಲ್ಲಿ, ಶುಕ್ರವಾರ (ಡಿಸೆಂಬರ್ 26) ವರ್ಚುವಲ್ ಕ್ಯೂ ಮೂಲಕ ದರ್ಶನಕ್ಕೆ ಅವಕಾಶ ನೀಡುವ ಭಕ್ತರ ಸಂಖ್ಯೆಯನ್ನು 30,000ಕ್ಕೆ ಮತ್ತು ಶನಿವಾರ 35,000ಕ್ಕೆ ಇಳಿಕೆ ಮಾಡಲಾಗಿದೆ ಹಾಗೂ ಸ್ಥಳೀಯ ಬುಕ್ಕಿಂಗ್‌ಗಳನ್ನು 2,000ಕ್ಕೆ ಮಿತಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಥಂಗ ಅಂಕಿ’ ಮೆರವಣಿಗೆ ಹಿನ್ನೆಲೆ ಶುಕ್ರವಾರ ಬೆಳಗ್ಗೆಯಿಂದ ಪಂಪಾದಿಂದ ಭಕ್ತರ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಬೆಳಗ್ಗೆ 9 ಗಂಟೆಯ ವೇಳೆಗೆ 22,039 ಭಕ್ತರು ದರ್ಶನ ಪಡೆದಿದ್ದರು ಎಂದು ತಿಳಿದುಬಂದಿದೆ.
ಮಂಡಲ ಪೂಜೆ ಶನಿವಾರ ನಡೆಯಲಿದ್ದು, ಈ ಸಂದರ್ಭ ದೇವರಿಗೆ ಸ್ವರ್ಣಾಭರಣ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗೆ 10.10ರಿಂದ 11.30ರವರೆಗೆ ಈ ಅಲಂಕಾರ ಪೂಜಾ ವಿಧಿವಿಧಾನಗಳು ನೆರವೇರಲಿವೆ. ‘ಹರಿವರಾಸನಂ’ ನಂತರ ಶನಿವಾರ ರಾತ್ರಿ 11 ಗಂಟೆಗೆ ಶಬರಿಮಲೆ ದೇವಾಲಯ ಮುಚ್ಚಲಾಗುತ್ತದೆ. ಬಳಿಕ ಮಕರವಿಳಕ್ಕು ಹಬ್ಬದ ನಿಮಿತ್ತ ಡಿಸೆಂಬರ್ 30ರಂದು ದೇವಾಲಯವನ್ನು ಪುನಃ ತೆರೆಯಲಾಗುತ್ತದೆ.