"ಮಿಷನ್ ಕಾಶ್ಮಿರ್ ಮುಂದುವರಿಸುತ್ತೇವೆ" ಎಂದ ಲಷ್ಕರ್ ನಾಯಕ! ಇದು ಆಪರೇಷನ್ ಸಿಂದೂರ್ ಪರಿಣಾಮ
ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಉಗ್ರ ಸಂಘಟನೆಯೊಂದು ಕಾಶ್ಮೀರದಲ್ಲಿ ಹಿಂಸಾತ್ಮಕ ಜಿಹಾದ್ ಮುಂದುವರಿಸುವ ತನ್ನ ಉದ್ದೇಶವನ್ನು ಮತ್ತೆ ಬಹಿರಂಗವಾಗಿ ವ್ಯಕ್ತಪಡಿಸಿದೆ. ಲಾಹೋರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಂಘಟನೆಯ ಪ್ರಮುಖ ನಾಯಕರು ಭಾರತದ ವಿರುದ್ಧ ಹೊಸದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉನ್ನತ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಲಷ್ಕರ್-ಎ-ತೈಬಾದ ರಾಜಕೀಯ ಮುಖವೆಂದು ಗುರುತಿಸಲಾಗಿರುವ ಜಮಾತ್-ಉದ್-ದಾವಾ ಬ್ಯಾನರ್‌ನಡಿ ಈ ಸಮಾವೇಶ ಆಯೋಜಿಸಲಾಗಿತ್ತು.
ಸೈಫುಲ್ಲಾ ಕಸೂರಿ ಭಾಷಣ -
ಇಸ್ಲಾಮಾಬಾದ್, ಡಿ. 31: ಪಾಕಿಸ್ತಾನದ ಲಷ್ಕರ್-ಎ-ತೈಬಾ (Lashkar-e-Taiba)ಗೆ ಸಂಬಂಧಿಸಿದ ಉಗ್ರ ಸಂಘಟನೆಯೊಂದು ಕಾಶ್ಮೀರ (Kashmir)ದಲ್ಲಿ ಹಿಂಸಾತ್ಮಕ ಜಿಹಾದ್ ಮುಂದುವರಿಸುವ ತನ್ನ ನಿಲುವನ್ನು ಸಾರ್ವಜನಿಕವಾಗಿ ಪುನರುಚ್ಚರಿಸಿದೆ. ಲಾಹೋರ್ (Lahore)ನಲ್ಲಿ ನಡೆದ ಸಮಾವೇಶದಲ್ಲಿ ಸಂಘಟನೆಯ ಹಿರಿಯ ನಾಯಕರು ಭಾರತದ ವಿರುದ್ಧ ಹೊಸ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ ಎಂದು ವರದಿಗಳು ಹೇಳಿವೆ.
ಲಷ್ಕರ್-ಎ-ತೈಬಾದ ರಾಜಕೀಯ ಮುಖವೆಂದು ಪರಿಗಣಿಸಲ್ಪಡುವ ಜಮಾತ್-ಉದ್-ದಾವಾ (Jamaat-ud-Dawa) ಬ್ಯಾನರ್‌ನಡಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಲಷ್ಕರ್‌ನ ಉಪಮುಖ್ಯಸ್ಥ ಹಾಗೂ ಪಹಲ್ಗಾಂ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಸೈಫುಲ್ಲಾ ಕಸೂರಿ (Saifullah Kasuri) ಭಾಗಿಯಾಗಿದ್ದಾನೆ. ಈ ವೇಳೆ ಮಾತನಾಡಿದ ಕಸೂರಿ, “ಮಿಷನ್ ಕಾಶ್ಮೀರದಿಂದ ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ” ಎಂದು ಘೋಷಿಸಿ, ನಿರಂತರ ಹಿಂಸಾಚಾರವನ್ನು ಸಮರ್ಥಿಸಲು ಧಾರ್ಮಿಕ ವಾದಗಳನ್ನು ಮುಂದಿಟ್ಟಿದ್ದಾನೆ.
ಸೈಫುಲ್ಲಾ ಕಸೂರಿ ಭಾಷಣ:
In a recent gathering of #LashkareTaiba, Saifullah Kasuri (the alleged mastermind of #PahalgamTerrorAttack) vows to never let go off his "mission" for #Kashmir.
— Taha Siddiqui (@TahaSSiddiqui) December 31, 2025
This is the new normal in Pakistan under General #AsimMunir, with terror groups openly operating again pic.twitter.com/qVywMEmkFa
“ನಮ್ಮನ್ನು ಉಗ್ರರು ಎಂದು ಕರೆಯುವವರು ಕೇಳಲಿ...ನಾವು ನಮ್ಮ ದೃಷ್ಟಿಯಲ್ಲಿ ನ್ಯಾಯಯುತ ಕಾರಣಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಮತ್ತು ಎಂದಿಗೂ ನಮ್ಮ ಕಾಶ್ಮೀರದ ಸಹೋದರ–ಸಹೋದರಿಯರ ಕೈಬಿಡುವುದಿಲ್ಲ” ಎಂದು ಕಸೂರಿ ಹೇಳಿದ್ದಾನೆ ಎಂದು ವರದಿಗಳು ತಿಳಿಸಿವೆ. ಅಷ್ಟೇ ಅಲ್ಲದೆ, ದೆಹಲಿಯಿಂದ ಬರುವ ಭದ್ರತಾ ಎಚ್ಚರಿಕೆಗಳನ್ನು ಹಿಯಾಳಿಸಿದ ಆತ, "ಅವುಗಳಿಗೆ ಯಾವುದೇ ಮೌಲ್ಯವಿಲ್ಲ, ನಮ್ಮ ಶತ್ರುವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದ್ದಾನೆ.
ಆಪರೇಷನ್ ಸಿಂದೂರ್‌ನಲ್ಲಿ ನೂರ್ ಖಾಸ್ ಏರ್ ಬೇಸ್ ನಾಶ; ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್
ಅಂತಾರಾಷ್ಟ್ರೀಯ ನಿರ್ಬಂಧಗಳು ಮತ್ತು ಕಾನೂನು ಕ್ರಮಗಳ ನಡುವೆಯೂ ತನ್ನ ನಾಯಕತ್ವದ ಪ್ರಭಾವ ಮುಂದುವರಿದಿದೆ ಎಂಬ ಸಂದೇಶ ನೀಡುವ ಉದ್ದೇಶದಿಂದ ಕಸೂರಿ, ಲಷ್ಕರ್ ಸ್ಥಾಪಕ ಹಫೀಸ್ ಸಯೀದ್‌ನನ್ನು “ಅಮೀರ್-ಎ-ಮೊಹ್ತರಂ” ಎಂದು ಉಲ್ಲೇಖಿಸಿ ನೆರೆದಿದ್ದ ಕಾರ್ಯಕರ್ತರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾನೆ.
ಇತ್ತೀಚಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು, ಅದರಲ್ಲೂ ಆಪರೇಷನ್ ಸಿಂದೂರ್ ಸೇರಿದಂತೆ ಲಷ್ಕರ್‌ಗೆ ಸಂಬಂಧಿಸಿದ ಘಟಕಗಳಿಗೆ ಉಂಟಾದ ನಷ್ಟಗಳ ನಂತರ ಮನೋಬಲ ಹೆಚ್ಚಿಸುವ ಉದ್ದೇಶದಿಂದ ಈ ರೀತಿಯ ಆಕ್ರಮಣಕಾರಿ ಭಾಷಣ ಮಾಡಲಾಗಿದೆ ಎಂದು ಹಿರಿಯ ಗುಪ್ತಚರ ಮೂಲವೊಂದು ತಿಳಿಸಿದೆ.
ಅಲ್ಲದೇ ಲಾಹೋರ್ ಸಮಾವೇಶವು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಅನುಮೋದನೆಯೊಂದಿಗೆ ನಡೆದ ಮರುಸಂಘಟನಾ ಪ್ರಯತ್ನವಾಗಿತ್ತು ಎಂದು ಮೂಲಗಳು ತಿಳಿಸಿವೆ. ಭಾರತವನ್ನು ಗುರಿಯಾಗಿಸಿಕೊಂಡು ಉಗ್ರ ಪ್ರತಿನಿಧಿಗಳನ್ನು ಬಳಸುವ ಮೂಲಕ ಕಡಿಮೆ ತೀವ್ರತೆಯ ಸಂಘರ್ಷ ಮುಂದುವರಿಸುವುದೇ ISIಯ ಉದ್ದೇಶವಾಗಿದೆ ಮತ್ತು ನೇರ ಭಾಗವಹಿಸುವಿಕೆಯನ್ನು ನಿರಾಕರಿಸುವ ತಂತ್ರದಡಿ ಕಾಶ್ಮೀರವನ್ನು ಮುಖ್ಯ ಯುದ್ಧ ಭೂಮಿಯನ್ನಾಗಿಸಿದೆ ಎಂದು ಆರೋಪಿಸಲಾಗಿದೆ.
“ರಾಜಕೀಯ ಮುಖವಾಡದ ಧರಿಸಿ ಇಂತಹ ಬಹಿರಂಗ ಸಮಾವೇಶಗಳಿಗೆ ಅವಕಾಶ ನೀಡುತ್ತಿರುವುದು, ಪ್ರಾದೇಶಿಕ ಶಾಂತಿಗೆ ಬದ್ಧತೆಯ ಬದಲು ಜಿಹಾದ್‌ಅನ್ನು ರಾಜ್ಯ ನೀತಿಯಾಗಿ ಮುಂದುವರಿಸುತ್ತಿರುವುದನ್ನು ತೋರಿಸುತ್ತದೆ” ಎಂದು ಮೂಲವೊಂದು ಹೇಳಿದ್ದು, ಇದರಿಂದ ಮತ್ತೊಮ್ಮೆ ಪಾಕಿಸ್ತಾನದ ಭದ್ರತಾ ವ್ಯವಸ್ಥೆ ಭಯೋತ್ಪಾದಕತೆಗೆ ಆಶ್ರಯ ಮತ್ತು ನೆರವು ನೀಡುತ್ತಿರುವುದು ಬಹಿರಂಗವಾಗಿದೆ.