ಭಾರತಕ್ಕೆ ಮಾದಕ ವಸ್ತು, ಶಸ್ತ್ರಾಸ್ತ್ರ ಸಾಗಿಸಲು ತಂತ್ರಜ್ಞಾನದ ಮೊರೆ ಹೋದ ಪಾಕಿಸ್ತಾನ; ಡ್ರೋನ್ ವ್ಯಾಪಕ ಬಳಕೆ: ಕಾರ್ಯಾಚರಣೆ ಹೇಗೆ?
ಪಾಪಿ ಪಾಕಿಸ್ತಾನ ಮಾದಕ ವಸ್ತು, ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಿಸಲು ತಂತ್ರಜ್ಞಾನ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಸಾಂಪ್ರದಾಯಿಕ ಮಾರ್ಗ ಬಿಟ್ಟು ಈಗ ಡ್ರೋನ್‌ನ ಮೊರೆ ಹೋಗಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ಕಳ್ಳ ಸಾಗಾಣಿಕೆಗೆ ಹೊಸ ಮಾದರಿಯನ್ನು ಬಳಸಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ. -
ದೆಹಲಿ, ಜ. 24: ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನ ಭಯೋತ್ಪಾದಕರಿಂದ ಹಿಡಿದು, ಮಾದಕ ವಸ್ತು, ಶಸ್ತ್ರಾಸ್ತ್ರಗಳನ್ನು ಕಳ್ಳ ದಾರಿಗಳ ಮೂಲಕ ಗಡಿ ದಾಟಿಸುತ್ತಲೇ ಬರುತ್ತಿದೆ. ಭಾರತ ಸಾಕಷ್ಟು ಬಾರಿ ತಿರುಗೇಟು ನೀಡಿದರೂ, ಎಚ್ಚರಿಸಿದರೂ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾನ ಹರಾಜು ಹಾಕಿದರೂ ಪಾಕಿಸ್ತಾನ ಬುದ್ಧಿ ಕಲಿತಿಲ್ಲ. ಈಗಲೂ ತನ್ನ ಚಾಳಿ ಮುಂದುವರಿಸುತ್ತಲೇ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನವು ಮಾದಕ ವಸ್ತುಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸಲಿರುವ ಉಡಾವಣಾ ಕಾರಿಡಾರ್ ಆಗಿ ಹೊರ ಹೊಮ್ಮಿದೆ. ಪಂಜಾಬ್ ಗಡಿಯ ಮೂಲಕ ಪ್ರಮುಖ ಮಾದಕ ವಸ್ತುವಾದ ಹೆರಾಯಿನ್ ಸಾಗಿಸಲಾಗುತ್ತಿದೆ. ಇದೀಗ ಪಾಪಿ ಪಾಕಿಸ್ತಾನ ಈ ಕುಕೃತ್ಯಕ್ಕೆ ತಂತ್ರಜ್ಞಾನ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಸಾಂಪ್ರದಾಯಿಕ ಮಾರ್ಗ ಬಿಟ್ಟು ಡ್ರೋನ್‌ನ ಮೊರೆ ಹೋಗಿದೆ.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ಕಳ್ಳ ಸಾಗಾಣಿಕೆಗೆ ಹೊಸ ಮಾದರಿಯನ್ನು ಬಳಸಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಇಂಡಿಯಾ ಟುಡೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಹಿಂದೆಲ್ಲ ಹ್ಯಾಂಡ್ಲರ್‌ಗಳು ಮಾದಕ ವಸ್ತುಗಳನ್ನು ಭಾರತಕ್ಕೆ ಕಳುಹಿಸಲು ಭೌತಿಕ ಮಾದರಿಯನ್ನು ಬಳಸುತ್ತಿದ್ದರು. ಅಂದರೆ ಗಡಿಯಲ್ಲಿನ ಬೇಲಿಗಳ (ಫೆನ್ಸಿಂಗ್) ಸಂದಿ, ಪೈಪ್, ಭೂಗತ ಸುರಂಗ ಮಾರ್ಗ ಮತ್ತು ಮಾನವರ ಮೂಲಕ ಸಾಗಿಸಲಾಗುತ್ತಿತ್ತು. ಇದಕ್ಕೆ ನಿರಂತರ ಮಾನವ ಚಟುವಟಿಕೆ ಅಗತ್ಯವಾಗಿದ್ದು, ಗಡಿಗಳಲ್ಲಿ ಓಡಾಡಬೇಕಾಗುತ್ತದೆ. ಇದರಿಂದ ಭಾರತೀಯ ಯೋಧರ ಕಣ್ಣಿಗೆ ಬೇಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ಪಾಕ್ ತನ್ನ ಮಾರ್ಗವನ್ನು ಬದಲಾಯಿಸಿದೆ ಎಂದು ಮೂಲಗಳು ಹೇಳಿವೆ.
ಭಾರತದಲ್ಲಿ ಪತ್ತೆಯಾದ ಡ್ರೋನ್:
A Pakistani drone carrying drugs to smuggle in India shot by alert BSF Troopers along the IB in Punjab. Debris of drone fall Pakistan side of border in Manawan area of Lahore. pic.twitter.com/GzXHqOsmNM
— Baba Banaras™ (@RealBababanaras) August 8, 2025
ಡ್ರೋನ್ ಬಳಕೆ
ಸದ್ಯ ಪಾಕಿಸ್ತಾನ ಡ್ರೋನ್ ಆಧಾರಿತ ಡೆಲಿವರಿ ಮಾದರಿಯನ್ನು ಅನುಸರಿಸುತ್ತಿದೆ. ಸ್ಮಗ್ಲಿಂಗ್ ಚಟುವಟಿಕೆ ಈಗ ಮಾನವರಹಿತವಾಗಿದ್ದು, ಬಹುತೇಕ ಡ್ರೋನ್ ಮೂಲಕವೇ ನಡೆಯುತ್ತಿದೆ. ಆಯುಧ, ಸ್ಫೋಟಕ ವಸ್ತು ಮತ್ತು ಮಾದಕ ವಸ್ತುಗಳನ್ನು ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಸಾಗಿಸಲು ಶತ್ರು ರಾಷ್ಟ್ರ ವೈಮಾನಿಕ ಮಾರ್ಗದ ಮೊರೆ ಹೋಗಿದೆ. ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೃಷಿ ಭೂಮಿಯಲ್ಲಿ, ಹೊಲದಲ್ಲಿ ಡ್ರೋನ್ ಹೊತ್ತುತಂದ ವಸ್ತುಗಳನ್ನು ಬೀಳಿಸಲಾಗುತ್ತದೆ. ಇಲ್ಲಿಂದ ಭಾರತದಲ್ಲಿರುವ ಏಜೆಂಟ್ ಸಂಗ್ರಹಿಸಿ ಗುಪ್ತ ಸ್ಥಳಕ್ಕೆ ಕೊಂಡೊಯ್ಯುತ್ತಾನೆ.
ಪಾಕಿಸ್ತಾನದ ಮದುವೆ ಸಮಾರಂಭದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ; ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ ಸಾವಿನ ಸಂಖ್ಯೆ
ಪುರಾವೆ ಲಭ್ಯ
3 ವರ್ಷಗಳ ಅವಧಿಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಳ್ಳ ಸಾಗಣೆಗಾಗಿ ಬಳಸಲಾದ ಡ್ರೋನ್ ಒಳಗೊಂಡ 28 ಉಪಕರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಮಾದರಿಯಲ್ಲಿ ಸಾಗಿಸಲಾದ 125.174 ಕೆಜಿ ಹೆರಾಯಿನ್, 0.100 ಕೆಜಿ ಅಫೀಮು, ಒಂದು 9 ಎಂಎಂ ಪಿಸ್ತೂಲ್, 7 ರಿವಾಲ್ವರ್‌ಗಳು, 14 ಮ್ಯಾಗಜೀನ್‌ಗಳು, 132 ಸುತ್ತು ಮದ್ದುಗುಂಡುಗಳು, 6 ಡಿಟೋನೇಟರ್‌ಗಳು ಮತ್ತು 4.750 ಕೆಜಿ ಸ್ಫೋಟಕಗಳನ್ನು ವಶ ಪಡಿಸಿಕೊಳ್ಳಲಾಗಿದೆ.
2024ರಲ್ಲಿ ಗಡಿ ಭದ್ರತಾ ಪಡೆ ಪಂಜಾಬ್ ಗಡಿಯಲ್ಲಿ 294 ಡ್ರೋನ್‌ಗಳನ್ನು ವಶಪಡಿಸಿಕೊಂಡಿತು. ಇವೆಲ್ಲವನ್ನೂ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಬಳಸಲಾಗಿತ್ತು. ಆ ವರ್ಷ ಅಧಿಕಾರಿಗಳು ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಮಾದಕ ವಸ್ತು ಕಳ್ಳಸಾಗಣೆಯ 179 ಪ್ರಕರಣಗಳನ್ನು ದಾಖಲಿಸಿದ್ದರು. ಇವುಗಳಲ್ಲಿ ಪಂಜಾಬ್‌ನಲ್ಲಿ 163, ರಾಜಸ್ಥಾನದಲ್ಲಿ 15 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 1 ಪ್ರಕರಣ ಸೇರಿದೆ. ಈ ಡ್ರೋನ್ ಚಟುವಟಿಕೆಯಿಂದ ಒಟ್ಟು 236 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಹೆರಾಯಿನ್ ಹೆಚ್ಚಿನ ಪ್ರಮಾಣದಲ್ಲಿತ್ತು.
2024ರಲ್ಲಿ ಪಂಜಾಬ್ ಒಂದರಲ್ಲೇ 163 ಆ ಮಾದರಿಯ ಪ್ರಕರಣ ದಾಖಲಾಗಿದ್ದು, ಒಟ್ಟು 187 ಕೆಜಿ ಹೆರಾಯಿನ್ ಸಿಕ್ಕಿದೆ. ಇದು ಗಡಿಗೆ ಹೊಂದಿಕೊಂಡು ಇರುವುದರಿಂದ ಡ್ರೋನ್ ಆಧಾರಿತ ಸ್ಮಗ್ಲಿಂಗ್‌ಗೆ ರಹದಾರಿ ಎನಿಸಿಕೊಂಡಿದೆ. ಇನ್ನು ರಾಜಸ್ಥಾನದಲ್ಲಿ ಪತ್ತೆಯಾದ 15 ಪ್ರಕರಣದ ಮೂಲಕ 39 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಗುಪ್ತಚರ ಇಲಾಖೆಯ ಅಂದಾಜಿನ ಪ್ರಕಾರ, ಕಳ್ಳ ಸಾಗಣೆ ಜಾಲಗಳು ವಾಣಿಜ್ಯಿಕವಾಗಿ ಲಭ್ಯವಿರುವ ಕ್ವಾಡ್‌ಕಾಪ್ಟರ್‌ಗಳನ್ನು ಅವಲಂಬಿಸಿವೆ. ಅವು ಅಗ್ಗದ, ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಸುಲಭವಾಗಿ ಬದಲಾಯಿಸಬಹುದಾದ ಉಪಕರಣಗಳನ್ನು ಹೊಂದಿವೆ. ಅಲ್ಲದೆ ಕಡಿಮೆ ಎತ್ತರದ ಹಾರಾಟ, ಅಲ್ಪಾವಧಿಯ ಕಾರ್ಯಾಚರಣೆ ಮತ್ತು ರಾತ್ರಿ ಚಟಿವಟಿಕೆಗೆ ಹೆಸರುವಾಸಿ.
ಮಾಹಿತಿಯ ಪ್ರಕಾರ, ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳು ಒಟ್ಟಿಗೆ ಸಾಗಿಸಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಪ್ರಕರಣವೊಂದರಲ್ಲಿ 2.02 ಕೆಜಿ ಹೆರಾಯಿನ್, ಒಂದು ಗ್ಲಾಕ್ ಪಿಸ್ತೂಲ್, ಮೂರು .30 ಬೋರ್ ಪಿಸ್ತೂಲ್ ಮತ್ತು 3.5 ಲಕ್ಷ ಹವಾಲಾ-ಸಂಬಂಧಿತ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ಭಾರತ-ಪಾಕಿಸ್ತಾನ ಗಡಿಯಲ್ಲಿ ಎಕೆ-47 ರೈಫಲ್‌ಗಳು, ಪಿಸ್ತೂಲ್‌ಗಳು, ಮದ್ದುಗುಂಡುಗಳು ಪತ್ತೆ
ಗಮ್ಯ ಸ್ಥಾನ ಬದಲು
ಮೂಲಗಳ ಪ್ರಕಾರ ಸ್ಮಗ್ಲರ್‌ಗಳು ತಮ್ಮ ಚಟುವಟಿಕೆಯನ್ನು, ಗಮ್ಯ ಸ್ಥಾನವನ್ನು ಪದೇ ಪದೆ ಬದಲಾಯಿಸುತ್ತಲೇ ಬಂದಿದ್ದಾರೆ. ಗಮ್ಯ ಸ್ಥಾನಕ್ಕೆ ತಲುಪಲು ವಿಫಲವಾದರೆ ಡ್ರೋನ್‌ಗಳು ಹಿಂತಿರುಗುವಂತೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.
ಭದ್ರತೆ ಹೆಚ್ಚಿಸಿದ ಭಾರತೀಯ ಸೇನೆ
ಡ್ರೋನ್ ಚಟುವಟಿಕೆ ತಡೆಯಲು ಇದೀಗ ಭಾರತೀಯ ಭದ್ರತಾ ಪಡೆ ಪಂಜಾಬ್ ಗಡಿಯುದ್ದಕ್ಕೂ ಪದರಗಳ ಡ್ರೋನ್ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಸೆನ್ಸರ್ ಡ್ರೋನ್ ಪತ್ತೆ ಹಚ್ಚಿದ ನಂತರ ತಕ್ಷಣವೇ ಹತ್ತಿರದ ಗಡಿ ಪೋಸ್ಟ್ ಮತ್ತು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತದೆ. ಸಂಘಟಿತ ಕಾರ್ಯಾಚರಣೆಯಿಂದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಹ್ಯಾಂಡ್ಲರ್-ರಿಸೀವರ್ ಮಾಡ್ಯೂಲ್‌ಗಳನ್ನು ಕಿತ್ತು ಹಾಕಲು ಸಾಧ್ಯವಾಗಿದೆ.