Pakistani Intruder: ಗಡಿ ದಾಟಿ ಒಳ ಬರುತ್ತಿದ್ದ ಪಾಕ್ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್
ಶುಕ್ರವಾರ (ಮೇ 23) ರಾತ್ರಿ ಗಡಿ ಭದ್ರತಾ ಪಡೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಪ್ರಜೆಯನ್ನ ಹೊಡೆದುರುಳಿಸಿದೆ. ಆಪರೇಷನ್ ಸಿಂದೂರ್ ಬಳಿಕ ಪಾಕಿಸ್ತಾನ ದಾಳಿ ನಡೆಸಿದ್ದು, ಭಾರತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

ಸಾಂದರ್ಭಿಕ ಚಿತ್ರ.

ಗಾಂಧಿನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ಪಾಕ್ ಮೂಲದ ಉಗ್ರರು ದಾಳಿ ನಡೆಸಿದ ಬಳಿಕ ಎರಡು ದೇಶಗಳ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಭಾರತ ಅಂತಾರಾಷ್ಟ್ರೀಯ ಗಡಿಯಲ್ಲಿ ಕಣ್ಗಾವಲು ಬಿಗಿಗೊಳಿಸಿದೆ. ಅದರಂತೆ ಶುಕ್ರವಾರ (ಮೇ 23) ರಾತ್ರಿ ಗಡಿ ಭದ್ರತಾ ಪಡೆ (BSF) ಗುಜರಾತ್‌ನ ಬನಸ್ಕಾಂತ (Banaskantha) ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಪ್ರಜೆಯನ್ನ ಹೊಡೆದುರುಳಿಸಿದೆ.
ʼʼಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಅನುಮಾನಾಸ್ಪದ ವ್ಯಕ್ತಿ ಒಳ ಬರುತ್ತಿರುವುದನ್ನು ಬಿಎಸ್‌ಎಫ್ ಸಿಬ್ಬಂದಿ ಗಮನಿಸಿ ಕೂಡಲೇ ಕ್ರಮ ಕೈಗೊಂಡವುʼʼ ಎಂದು ಮೂಲಗಳು ತಿಳಿಸಿವೆ. ʼʼಒಳನುಸುಳುಕೋರನಿಗೆ ಆರಂಭದಲ್ಲಿ ಎಚ್ಚರಿಕೆ ನೀಡಲಾಯಿತು. ಆದರೆ ಆತ ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಮುಂದೆ ಮುಂದೆ ಬರತೊಡಗಿದ. ಕೊನೆಗೆ ಗತ್ಯಂತರವಿಲ್ಲದೆ ಗುಂಡಿನ ದಾಳಿ ನಡೆಸಬೇಕಾಯ್ತುʼʼ ಎಂದು ಬಿಎಸ್‌ಎಫ್ ಸಿಬ್ಬಂದಿ ವಿವರಿಸಿದರು.
ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡ ಭಾರತ ಆಪರೇಷನ್ ಸಿಂದೂರ್ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ, ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಇದಾದ ಬಳಿಕ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಶೆಲ್ಲಿಂಗ್, ಡ್ರೋನ್ ದಾಳಿ ನಡೆಸಿದ್ದು, ಅದನ್ನು ಹಿಮ್ಮೆಟ್ಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral News: ಸಿಕ್ಕಾಪಟ್ಟೆ ವೈರಲ್ ಆಯ್ತು ಈ ಸೈನಿಕನ ಮದುವೆ ಆಮಂತ್ರಣ ಪತ್ರಿಕೆ; ಏನಿದೆ ಇದರಲ್ಲಿ?
ರಾಜಸ್ಥಾನದಲ್ಲಿಯೂ ಭದ್ರತೆ ಹೆಚ್ಚಿಸಿರುವ ಬಿಎಸ್‌ಎಫ್ ಜೈಸಲ್ಮೇರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಡಿಯಾಚೆಯಿಂದ ಎದುರಾಗುವ ಯಾವುದೇ ಸಂಭಾವ್ಯ ದಾಳಿಯನ್ನು ತಡೆಗಟ್ಟಲು ಬಿಎಸ್‌ಎಫ್ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಜೈಸಲ್ಮೇರ್ ಬಿಎಸ್‌ಎಫ್‌ನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (DIG) ಯೋಗೇಂದ್ರ ಸಿಂಗ್ ರಾಥೋಡ್, ರಾಷ್ಟ್ರೀಯ ಭದ್ರತೆಗೆ ಪಡೆಗಳು ನಿರ್ವಹಿಸುತ್ತಿರುವ ಕಾರ್ಯವನ್ನು ಒತ್ತಿ ಹೇಳಿದರು.
"ಬಿಎಸ್‌ಎಫ್ ದೇಶ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ವೇಳೆಯೂ ಬಿಎಸ್‌ಎಫ್ ಪ್ರಮುಖ ಪಾತ್ರ ವಹಿಸಿತ್ತು. ಕಾರ್ಗಿಲ್ ಯುದ್ಧದ ಗೆಲ್ಲುವಲ್ಲೂ ಗಮನಾರ್ಹ ಕೊಡುಗೆ ನೀಡಿತ್ತು. ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಯಾವುದೇ ಆಕ್ರಮಣವನ್ನು ತಡೆಯಲು ನಾವು ಸಂಪೂರ್ಣ ಸಜ್ಜಾಗಿದ್ದೇವೆ" ಎಂದು ಡಿಐಜಿ ರಾಥೋಡ್ ತಿಳಿಸಿದರು.
ಬಿಎಸ್‌ಎಫ್ ಅಧಿಕಾರಿ ಜೈಪಾಲ್ ಸಿಂಗ್, ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ತಮ್ಮ ಪಡೆಯ ಬದ್ಧತೆಯನ್ನು ಒತ್ತಿ ಹೇಳಿದರು.
"ಆಪರೇಷನ್ ಸಿಂದೂರ್ ಸಮಯದಲ್ಲಿ, ಅದಕ್ಕಿಂತ ಮೊದಲು ಮತ್ತು ನಂತರವೂ ಬಿಎಸ್ಎಫ್ ದೇಶದ ಭದ್ರತೆಗಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ಸದಾ ಸನ್ನದ್ಧವಾಗಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಡ್ರೋನ್ ಚಟುವಟಿಕೆಗಳು ಬಹಳಷ್ಟು ಹೆಚ್ಚಾದವು. ಪಾಕಿಸ್ತಾನ ಕಳುಹಿಸಿದ ಡ್ರೋನ್ ಮತ್ತು ಶೆಲ್‌ಗಳನ್ನು ಆಕಾಶದಲ್ಲೇ ಧ್ವಂಸ ಮಾಡಲು ಸಾಧ್ಯವಾಯಿತು. ಅಲ್ಲದೆ ಪಾಕಿಸ್ತಾನದ ಅನೇಕ ವಾಯುನೆಲೆಗಳು ಹಾನಿಗೊಳಗಾದವುʼʼ ಎಂದು ಅವರು ವಿವರಿಸಿದರು.
ʼʼಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಶತ್ರು ಪಡೆಯ ಮೂಲಸೌಕರ್ಯವನ್ನು ನಾಶಪಡಿಸಿದ ಭಾರತೀಯ ವಾಯು ಪಡೆಯೊಂದಿಗೆ ಬಿಎಸ್‌ಎಫ್ ನಿಕಟವಾಗಿ ಕೆಲಸ ಮಾಡಿದೆʼʼ ಎಂದರು.