Pahalgam Terrorist Attack: ಪಹಲ್ಗಾಮ್ ದಾಳಿ ಹಿನ್ನೆಲೆ ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಣಿ ಸಭೆ
PM Modi Meeting: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ದೇಶದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾಳೆ ಸರಣಿ ಸಭೆಗಳು ನಡೆಯಲಿವೆ. ರಾಷ್ಟ್ರದ ಉನ್ನತ ಭದ್ರತಾ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (ಸಿಸಿಎಸ್) ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಭೆ ನಡೆಸಲಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam) ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ದೇಶದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ನೇತೃತ್ವದಲ್ಲಿ ನಾಳೆ ಸರಣಿ ಸಭೆಗಳು ನಡೆಯಲಿವೆ. ರಾಷ್ಟ್ರದ ಉನ್ನತ ಭದ್ರತಾ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (ಸಿಸಿಎಸ್) ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಭೆ ನಡೆಸಲಿದೆ. ಪಹಲ್ಗಾಮ್ ದಾಳಿಯ ನಂತರ ಇದು ಉನ್ನತ ಮಟ್ಟದ ಎರಡನೇ ಸುತ್ತಿನ ಚರ್ಚೆಯಾಗಿದೆ. ಈ ಸಭೆಯಲ್ಲಿ ಭದ್ರತಾ ಸಿದ್ಧತೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ಸಿಸಿಎಸ್ ಸಭೆಯ ನಂತರ, ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಕಮಿಟಿ ಆನ್ ಪೊಲಿಟಿಕಲ್ ಅಫೇರ್ಸ್ (ಸಿಸಿಪಿಎ) ಸಭೆಯೂ ನಡೆಯಲಿದೆ. ಪ್ರಧಾನಮಂತ್ರಿಗಳ ಜೊತೆಗೆ, ಸಿಸಿಪಿಎ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಆರೋಗ್ಯ ಸಚಿವ ಜೆಪಿ ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಹಿರಿಯ ಸಚಿವರು ಭಾಗವಹಿಸಲಿದ್ದಾರೆ.
ಇದಾದ ಬಳಿಕ ಕ್ಯಾಬಿನೆಟ್‌ನ ಆರ್ಥಿಕ ವ್ಯವಹಾರಗಳ ಸಮಿತಿಯ ಸಭೆ ನಡೆಯಲಿದ್ದು, ನಂತರ ಕೇಂದ್ರ ಸಂಪುಟ ಸಭೆ ಜರುಗಲಿದೆ. ಪಹಲ್ಗಾಮ್ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತ ಆಗುತ್ತಿದ್ದು, ಅಮಾಯಕ ಪ್ರವಾಸಿಗರ ಜೀವ ತೆಗೆದ ಉಗ್ರರನ್ನು ಮಟ್ಟಹಾಕುವಂತೆ ಒತ್ತಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ಸಮಿತಿ ಸಭೆಯಲ್ಲೂ, ಪ್ರತೀಕಾರದ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿದ್ದು, ಈಗಾಗಲೇ ಸೇನೆ ಶಂಕಿತ ಉಗ್ರರ ಮನೆಗಳನ್ನು ಉಡೀಸ್ ಮಾಡಿದೆ.
ಈಗಾಗಲೇ ಪಹಲ್ಗಾಮ್‌ನಲ್ಲಿ ಭದ್ರತಾ ತಪಾಸಣೆಯನ್ನು ಬಿಗಿಗೊಳಿಸಲಾಗಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಶೋಧಕಾರ್ಯ ಆರಂಭಿಸಲಾಗಿದೆ. ಇನ್ನು ಈಗಾಗಲೇ 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಅಟ್ಟಾರಿ ಭೂ-ಸಾರಿಗೆ ಪೋಸ್ಟ್ ಅನ್ನು ತಕ್ಷಣವೇ ಮುಚ್ಚುವುದು ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದೆ. ಅಲ್ಲದೇ ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದ್ದು, ಮತ್ತೊಂದೆಡೆ, ಪಾಕಿಸ್ತಾನದ ರಾಯಭಾರ ಕಚೇರಿಯನ್ನು ಮುಚ್ಚಿದೆ. ಪಾಕಿಸ್ತಾನಿಗಳು ಭಾರತವನ್ನು ತೊರೆಯುವಂತೆ ಮಾಡಿದ್ದು, ಹಂತ ಹಂತವಾಗಿ ಆ ಪಾಪಿಗಳಿಗೆ ಬುದ್ಧಿಯನ್ನು ಕಲಿಸುತ್ತಿದೆ.
ಇದೀಗ ಮತ್ತೆ ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿ(Terror Attack)ಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪ್ರಧಾನಿ ಮೋದಿ ನೇತೃತ್ವದ ನಾಳೆ ಸರಣಿ ಸಭೆಗಳ ನಡೆಯಲಿದ್ದು, ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳು, ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಈ ಸಭೆಯಲ್ಲಿ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ.