ʼʼಪ್ರಧಾನಿಯಾಗುವ ಕನಸು ಕಾಣುವುದು ಅಪರಾಧವೆ?ʼʼ ಸೋನಿಯಾ ಗಾಂಧಿಗೆ ಪ್ರಣವ್ ಮುಖರ್ಜಿ ಪುತ್ರಿಯ ತಿರುಗೇಟು
Sharmistha Mukherjee: ಪ್ರಧಾನಿಯಾಗುವ ಕನಸು ಅಪರಾಧವೇ? ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರ ಶರ್ಮಿಷ್ಠಾ ಮುಖರ್ಜಿ ಪ್ರಶ್ನಿಸುವ ಮೂಲಕ ಸೋನಿಯಾ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಆತ್ಮಕಥೆಯಲ್ಲಿ ಪ್ರಧಾನಿಯಾಗುವ ತಮ್ಮ ಬಹುದಿನಗಳ ಕನಸನ್ನು ಪ್ರಣವ್ ಮುಖರ್ಜಿ ಪ್ರಸ್ತಾವಿಸಿದ್ದು ಆಘಾತ ತಂದಿತ್ತು ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.
ಸೋನಿಯಾ ಗಾಂಧಿ ಮತ್ತು ಪ್ರಣವ್ ಮುಖರ್ಜಿ (ಸಂಗ್ರಹ ಚಿತ್ರ) -
ದೆಹಲಿ, ನ. 10: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ತಮ್ಮ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನಲ್ಲಿ (Belonging: A Journey Of Love) ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಸದ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿಯಾಗುವ ಆಸೆ ಇತ್ತು ಎಂದು ಅವರು ಪುಸ್ತಕದಲ್ಲಿ ಉಲ್ಲೇಖಿಸಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಈ ವಿಚಾರವನ್ನು ಪ್ರಸ್ತಾವಿಸಿ ಸೋನಿಯಾ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿಯಾಗುವ ಕನಸು ಅಪರಾಧವೇ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ತಂದೆಯ ನಿರ್ಧಾರವನ್ನು ಬೆಂಬಲಿಸಿದ ಶರ್ಮಿಷ್ಠಾ, ಅವರ ಈ ಕನಸು ದಶಕಗಳ ಅನುಭವ ಮತ್ತು ಚಾಣಾಕ್ಷತನದ ಹಿನ್ನೆಲೆಯಲ್ಲಿ ಮೂಡಿತ್ತು ಎಂದು ತಿಳಿಸಿದ್ದಾರೆ. 2010ರ ರಾಜಕೀಯ ಬೆಳವಣಿಗೆಯನ್ನು ಉಲ್ಲೇಖಿಸಿ ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಬರೆದ ಈ ವಿಚಾರ ಸದ್ಯ ಸದ್ದು ಮಾಡುತ್ತಿದೆ.
ಶರ್ಮಿಷ್ಠಾ ಮುಖರ್ಜಿ ಅವರ ಎಕ್ಸ್ ಪೋಸ್ಟ್:
What’s there to get ‘shocked’ about? https://t.co/G176imSSfy
— Sharmistha Mukherjee (@Sharmistha_GK) November 10, 2026
ಸೋನಿಯಾ ಗಾಂಧಿ ಹೇಳಿದ್ದೇನು?
2010ರಲ್ಲಿ ಪ್ರಣವ್ ಮುಖರ್ಜಿ ಜತೆಗಿನ ಸಂಭಾಷಣೆಯ ಬಗ್ಗೆ ತಿಳಿಸಿದ ಸೋನಿಯಾ ಗಾಂಧಿ, ʼʼಪ್ರಮುಖ ನಾಯಕತ್ವ ಬದಲಾಗುವ ಸಮಯ ಬಂದಿದೆ ಎಂದು ಹೇಳಿ ಅವರು ನನಗೆ ಆಘಾತ ತಂದರು. ಆ ಮೂಲಕ ಪ್ರಧಾನಿಯಾಗುವ ತಮ್ಮ ಬಹುದಿನಗಳ ಕನಸನ್ನು ನನ್ನ ಬಳಿ ಹಂಚಿಕೊಂಡಿದ್ದರುʼʼ ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.
ಪ್ರಣಬ್ ಮುಖರ್ಜಿಗೆ ಪ್ರಧಾನಿಯಾಗುವ ಆಸೆಯಿತ್ತು; ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಬಹಿರಂಗಗೊಂಡಿದ್ದ ಸತ್ಯಗಳೇನು?
ಶರ್ಮಿಷ್ಠಾ ತಿರುಗೇಟು
ಈ ವಿಚಾರವನ್ನು ಪ್ರಸ್ತಾವಿಸಿದ ಶರ್ಮಿಷ್ಠಾ, ʼʼಅದರಲ್ಲಿ ಆಘಾತಗೊಳ್ಳುವಂತಹದ್ದೇನಿದೆ? ಪ್ರಧಾನಿಯಾಗುವ ಕನಸು ಅಪರಾಧವೇ? ವಿಶೇಷವಾಗಿ ರಾಜಕೀಯ ಮತ್ತು ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿರುವ, ಚಾಣಾಕ್ಷತನ ಹೊಂದಿರುವ ಅವರು ಈ ರೀತಿಯ ಕನಸು ಕಂಡಿದ್ದರಲ್ಲಿ ತಪ್ಪೇನಿದೆ?ʼʼ ಎಂದು ಪ್ರಶ್ನಿಸಿದ್ದಾರೆ.
ತಂದೆಗೆ ಪ್ರಧಾನಿಯಾಗುವ ಆಸೆ ಇದೆಯೇ ಎಂದು ತಾವೇ ಕೇಳಿದ್ದನ್ನು ನೆನಪಿಸಿಕೊಳ್ಳುತ್ತ ಶರ್ಮಿಷ್ಠಾ, "ಯೋಗ್ಯವಾದ ಯಾವುದೇ ರಾಜಕಾರಣಿಗೂ ಇಂತಹ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ ಎಂದು ಅವರು ಮುಕ್ತವಾಗಿ ಉತ್ತರಿಸಿದ್ದರುʼʼ ಎಂಬುದಾಗಿ ನೆನಪಿಸಿಕೊಂಡಿದ್ದಾರೆ.
ಪ್ರಣವ್ ಮುಖರ್ಜಿ ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದು, ಕೇವಲ ತಮ್ಮ ಸ್ವಂತ ಅರ್ಹತೆ ಮತ್ತು ಕಠಿಣ ಪರಿಶ್ರಮದ ಮೂಲಕವೇ ಎಲ್ಲವನ್ನೂ ಸಾಧಿಸಿದರು ಎಂಬುದನ್ನು ಒತ್ತಿ ಹೇಳಿದ್ದಾರೆ.
"ವಂಶ ಪಾರಂಪರ್ಯ ಹಕ್ಕಿನ ಕಾರಣದಿಂದಾಗಿ ಪ್ರಧಾನಿ ಹುದ್ದೆ ಸೇರಿ ಯಾವುದೇ ಹುದ್ದೆಗಳನ್ನು ಅವರಿಗೆ ನೀಡಲಿಲ್ಲ. ಅರ್ಹ ರಾಜಕಾರಣಿ ಪ್ರಧಾನಿಯಾಗಬೇಕೆಂದು ಆಕಾಂಕ್ಷೆ ಹೊಂದಿದ್ದರೆ ಅದರಲ್ಲಿ ತಪ್ಪೇನಿದೆ? ಬಹುಶಃ ಗಾಂಧಿ-ನೆಹರೂ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಇಂತಹ ಆಕಾಂಕ್ಷೆಯನ್ನು ಹೊಂದುವ ಧೈರ್ಯ ಮಾಡಿದ್ದಲ್ಲದೆ, ಆ ಬಗ್ಗೆ ಸುಳಿವು ನೀಡುವ ಸಾಹಸ ಮಾಡಿದ್ದನ್ನು ಕಂಡು ಅವರು ಆಘಾತಗೊಂಡಿರಬಹುದೇ?" ಎಂದು ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಪ್ರಣಬ್ ಮುಖರ್ಜಿ ಉನ್ನತ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಸ್ತಾಪಿಸಿದಾಗ ತಾವು ಜಾಣತನದಿಂದ ಚರ್ಚೆಯ ವಿಷಯವನ್ನು ಬದಲಾಯಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ ಅವರು ʼʼಇದಕ್ಕಾಗಿ ನನ್ನ ಮೇಲೆ ಎಂದಿಗೂ ಅಸಮಾಧಾನ ಹೊಂದಿರಲಿಲ್ಲʼʼ ಎಂದೂ ಅವರು ಹೇಳಿದ್ದಾರೆ.
ʼʼಅವರು ನನ್ನ ಮೇಲೆ ಯಾವುದೇ ಮುನಿಸು ಇಟ್ಟುಕೊಂಡಿರಲಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಇದು ನಿಜ. ಈ ವಿಚಾರದಲ್ಲಿ ತಂದೆಗೆ ಸೋನಿಯಾ ಗಾಂಧಿ ಮೇಲೆ ಯಾವುದೇ ಮುನಿಸಿರಲಿಲ್ಲ ಎನ್ನುವುದು ಮಾತುಕತೆ ಮೂಲಕ ನನ್ನ ಅರಿವಿಗೆ ಬಂದಿದೆ. ಅವರು ಆಳವಾದ ತಿಳುವಳಿಕೆ ಹೊಂದಿದ್ದ, ಪ್ರಾಯೋಗಿಕ ದೃಷ್ಟಿಕೋನದ ವ್ಯಕ್ತಿಯಾಗಿದ್ದರು. ಮನುಷ್ಯ ಸಹಜವಾದ ಅನಿಶ್ಚಿತತೆಗಳು ಮತ್ತು ಸೋನಿಯಾ ಗಾಂಧಿ ಹೊಂದಿದ್ದ ಕಾರಣಗಳನ್ನು ಅರ್ಥ ಮಾಡಿಕೊಂಡಿದ್ದರು" ಎಂದು ಅವರು ಹೇಳಿದ್ದಾರೆ.
ಆತ್ಮಚರಿತ್ರೆ ಬರೆಯುವ ಮೊದಲೇ ವೈಯಕ್ತಿಕ ಅನುಭವ ಹಂಚಿಕೊಂಡಿದ್ದ ಸೋನಿಯಾ ಗಾಂಧಿ
2012ರಲ್ಲಿ ಕಾಂಗ್ರೆಸ್ ಪ್ರಣವ್ ಮುಖರ್ಜಿ ಅವರನ್ನು ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿತ್ತು. ಪ್ರಣವ್ ಮುಖರ್ಜಿ 2020ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಮೃತಪಟ್ಟರು.