ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಂತರ್‌ ಮಂತರ್‌ ಪ್ರತಿಭಟನೆ ವೇಳೆ ಪೊಲೀಸರಿಂದ ಪತ್ರಕರ್ತೆಯರ ಮೇಲೆ ಹಲ್ಲೆ; ರಾಹುಲ್‌ ಗಾಂಧಿ ಆರೋಪ

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಮೂವರು ಮಹಿಳಾ ಪತ್ರಕರ್ತರು ಆರೋಪಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಘಟನೆ ಕುರಿತು ಉತ್ತರವನ್ನು ಕೋರಿದ್ದಾರೆ.

ಜಂತರ್‌ ಮಂತರ್‌ ಪ್ರತಿಭಟನೆ ವೇಳೆ ಪೊಲೀಸರಿಂದ ಪತ್ರಕರ್ತೆಯರ ಮೇಲೆ ಹಲ್ಲೆ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 4, 2026 11:52 AM

ನವದೆಹಲಿ: ಜಂತರ್ ಮಂತರ್‌ನಲ್ಲಿ (Jantar Mantar Protest) ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಮೂವರು ಮಹಿಳಾ ಪತ್ರಕರ್ತರು ಆರೋಪಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಘಟನೆ ಕುರಿತು ಉತ್ತರವನ್ನು ಕೋರಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಸ್ವತಂತ್ರ ಮಹಿಳಾ ಪತ್ರಕರ್ತೆಯೊಬ್ಬರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿ, ತಳ್ಳಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ರಾಹುಲ್‌ ಗಾಂಧಿ "ಜಂತರ್ ಮಂತರ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಿಸಬೇಕು ಎಂಬ ಒಂದೇ ಒಂದು ಬೇಡಿಕೆಯಿಟ್ಟು ನೂರಾರು ಪತ್ರಕರ್ತರು ಗಂಟೆಗಟ್ಟಲೆ ಧರಣಿ ಕುಳಿತಿದ್ದಾರೆ. ದೂರು ದಾಖಲಿಸಿಕೊಳ್ಳುವುದು ಪೊಲೀಸರ ಕನಿಷ್ಠ ಕರ್ತವ್ಯವಲ್ಲವೇ? ಅದನ್ನು ಮಾಡಲು ಅವರು ಹಿಂದೇಟು ಹಾಕುತ್ತಿದ್ದಾರೆ" ಎಂದು ಕಿಡಿಕಾರಿದರು. ಅಷ್ಟೇ ಅಲ್ಲದೆ, ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಹಿಳಾ ಹೋರಾಟಗಾರರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಮತ್ತು ಪತ್ರಕರ್ತರ ಕ್ಯಾಮೆರಾಗಳನ್ನು ಕಸಿದುಕೊಂಡು ಅವರನ್ನು ಎಳೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಸೌರವ್ ದಾಸ್ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಸಂಘಟನೆಗಳು ಸಹ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತು ಆರೋಪಿತ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿವೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಕೂಡ ಇದೇ ರೀತಿಯ ದೂರು ನೀಡಿದ್ದು, ಮಹಿಳಾ ಪ್ರತಿಭಟನಾಕಾರರು, ಪತ್ರಕರ್ತರು ಮತ್ತು ವಕೀಲರ ಮೇಲೆ ಪುರುಷ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ.

ದೂರುಗಳು ಕೇಳಿ ಬಂದ ಬಳಿಕ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ಮತ್ತು ಕೂಲಂಕಷ ತನಿಖೆ ನಡೆಸಲು ನವದೆಹಲಿ ಜಿಲ್ಲಾ ಪೊಲೀಸರು ಸ್ವೀಕರಿಸಿದ ದೂರುಗಳನ್ನು ಕಮಲಾ ಮಾರ್ಕೆಟ್‌ನಲ್ಲಿರುವ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರ ಮೇಲಿರುವ ಆರೋಪಗಳ ಸತ್ಯಾಸತ್ಯತೆಯನ್ನು ತನಿಖಾ ತಂಡವು ಪರಿಶೀಲಿಸುತ್ತಿದೆ.