ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರ್ ಕುಟುಂಬಕ್ಕೆ 14 ಕೋಟಿ ರೂ. ಪರಿಹಾರ; ಪಾಕ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ರಾಜನಾಥ್ ಸಿಂಗ್
Rajnath Singh: ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಗುಂಪಿನ ಮುಖ್ಯಸ್ಥ, ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮಸೂದ್ ಅಜರ್ ಕುಟುಂಬಕ್ಕೆ 14 ಕೋಟಿ ರೂ.ಗಳನ್ನು ಪರಿಹಾರ ನೀಡಲು ಮುಂದಾದ ಪಾಕಿಸ್ತಾನಕ್ಕೆ ಸರ್ಕಾರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಟಿ ಬೀಸಿದ್ದಾರೆ.


ಗಾಂಧಿನಗರ: 2016ರ ಉರಿ ಮತ್ತು 2019ರ ಪುಲ್ವಾಮಾ ದಾಳಿಯ ಹಿಂದಿನ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಗುಂಪಿನ ಮುಖ್ಯಸ್ಥ, ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮಸೂದ್ ಅಜರ್ (Masood Azhar) ಕುಟುಂಬಕ್ಕೆ 14 ಕೋಟಿ ರೂ.ಗಳನ್ನು ಪರಿಹಾರ ನೀಡಲು ಮುಂದಾದ ಪಾಕಿಸ್ತಾನಕ್ಕೆ ಸರ್ಕಾರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಚಾಟಿ ಬೀಸಿದರು.
ಏ. 22ರಂದು ಪಾಕ್ ಮೂಲದ ಮತ್ತೊಂದು ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ನಡೆಸಿದ ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡ ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಉಗ್ರರ ನೆಲೆಯನ್ನು ನಾಶಗೊಳಿಸಿದೆ. ಉಗ್ರರ ಈ ಮೂಲ ಸೌಕರ್ಯವನ್ನು ಪಾಕ್ ಪುನರ್ನಿರ್ಮಿಸಲು ಮುಂದಾಗಿದೆ ಎಂದೂ ಅವರು ತಿಳಿಸಿದರು.
ರಾಜನಾಥ್ ಸಿಂಗ್ ಅವರ ಭಾಷಣ:
#WATCH | Bhuj, Gujarat | Defence Minister Rajnath Singh says, "#OperationSindoor is not over yet. Whatever happened was just a trailer. When the right time comes, we will show the full picture to the world." pic.twitter.com/13BHeIZgkS
— ANI (@ANI) May 16, 2025
ಈ ಪುನರ್ನಿರ್ಮಾಣಕ್ಕೆ ಪಾಕ್ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund)ಯಿಂದ ಪಡೆಯಲಿರುವ 2.1 ಬಿಲಿಯನ್ ಡಾಲರ್ ಹಣವನ್ನು ಬಳಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. "ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದರೂ ಪಾಕ್ ಸರ್ಕಾರ ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯಲ್ಲಿ 14 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲಿದೆ. ಆಪರೇಷನ್ ಸಿಂದೂರ್ ಮೂಲಕ ನಾಶವಾದ ಮುರಿಡ್ಕೆ ಮತ್ತು ಬಹವಾಲ್ಪುರದ ಲಷ್ಕರ್ ಮತ್ತು ಜೈಶ್‌ನ ಭಯೋತ್ಪಾದಕ ಮೂಲ ಸೌಕರ್ಯವನ್ನು ಪುನರ್ನಿರ್ಮಿಸಲು ಪಾಕ್ ಸರ್ಕಾರವು ಆರ್ಥಿಕ ನೆರವು ನೀಡುವುದಾಗಿ ಹೇಳಿದೆ" ಎಂದು ರಾಜನಾಥ್ ಸಿಂಗ್ ಶುಕ್ರವಾರ (ಮೇ 16) ಗುಜರಾತ್‌ನ ಭುಜ್‌ನಲ್ಲಿರುವ ಮಿಲಿಟರಿ ನೆಲೆಗೆ ಭೇಟಿ ನೀಡಿದ ವೇಳೆ ತಿಳಿಸಿದರು.
ಭಾರತವನ್ನು ಗುರಿಯಾಗಿಸಿಕೊಂಡು ಚಟುವಟಿಕೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ಪಾಕ್ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಭಾರತ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವು ಒದಗಿದಂತೆ ಆಗ್ರಹಿಸಿತ್ತು. ಹೀಗಾಗಿ ಭಾರತ ಮತ ಚಲಾವಣೆಯಿಂದ ಹಿಂದಕ್ಕೆ ಸರಿದಿತ್ತು. ಅದಾಗ್ಯೂ ಐಎಂಎಫ್ ಪಾಕ್‌ಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ. "ಪಾಕ್‌ಗೆ ಐಎಂಎಫ್ ನೆರವು ನೀಡುವುದು ಭಯೋತ್ಪಾದನೆಗೆ ಪರೋಕ್ಷವಾಗಿ ಹಣಕಾಸಿನ ಸಹಾಯ ಒದಗಿಸಿದಂತೆ" ಎಂದು ರಾಜನಾಥ್ ಸಿಂಗ್ ತಿಳಿಸಿದರು.
14 ಕೋಟಿ ರೂ. ಪರಿಹಾರ
ವರದಿಗಳ ಪ್ರಕಾರ, ಆಪರೇಷನ್ ಸಿಂದೂರ್‌ನಲ್ಲಿ ಸಾವನ್ನಪ್ಪಿದ ಉಗ್ರರ ಕುಟುಂಬಗಳಿಗೆ ಪಾಕಿಸ್ತಾನ ಸರ್ಕಾರ ತಲಾ 1 ಕೋಟಿ ರೂ.ಗಳ ಪರಿಹಾರವನ್ನು ಘೋಷಿಸಿದೆ ಮತ್ತು ಮಸೂದ್ ಅಜರ್ ಈ ಯೋಜನೆಯ ಅತಿದೊಡ್ಡ ಫಲಾನುಭವಿಯಾಗಿದ್ದಾನಂತೆ. ಏಕೆಂದರೆ ಆತನ ಸಹೋದರ ಅಬ್ದುಲ್ ರೌಫ್ ಅಜರ್ ಸೇರಿದಂತೆ ಕುಟುಂಬದ 10 ಸದಸ್ಯರು ಮತ್ತು ಅವರ ನಾಲ್ವರು ಆಪ್ತ ಸಹಾಯಕರು ಭಾರತೀಯ ವಾಯುದಾಳಿಯಲ್ಲಿ ಹತರಾಗಿದ್ದರು. ಹೀಗಾಗಿ ಮಸೂದ್ ಅಜರ್ ಪಾಕಿಸ್ತಾನ ಸರ್ಕಾರದಿಂದ 14 ಕೋಟಿ ರೂಪಾಯಿ ಪರಿಹಾರವನ್ನು ಪಡೆಯಲಿದ್ದಾನೆ ಎನ್ನಲಾಗಿದೆ.