ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವ ಪರೇಡ್‌ ವೀಕ್ಷಣೆಗೆ ತೆರಳುತ್ತಿದ್ದೀರಾ? ಹಾಗಾದರೆ ಈ ವಸ್ತುಗಳನ್ನು ಒಯ್ಯಬೇಡಿ

Republic Day 2026: 2026ರ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿ ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್‌ ವೀಕ್ಷಿಸಲು ಆಗಮಿಸುವ ಪ್ರೇಕ್ಷಕರು ಕೆಲವು ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಭದ್ರತೆಗಾಗಿ ಈ ನಿಯಮ ಜಾರಿಗೆ ತಂದಿದ್ದು, ಮೆರವಣಿಗೆ ವೀಕ್ಷಿಸಲು ಬರುವ ಪ್ರೇಕ್ಷಕರು ಈ ಕುರಿತು ತಿಳಿದುಕೊಳ್ಳಬೇಕು. ತಮ್ಮ ಟಿಕೆಟ್‌ಗಳ ಹಿಂಭಾಗದಲ್ಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಕರ್ತವ್ಯ ಪಥ ಮೆರವಣಿಗೆಗೆ ಪ್ರೇಕ್ಷಕರು ಈ ವಸ್ತುಗಳನ್ನು ತರುವಂತಿಲ್ಲ

ಸಂಗ್ರಹ ಚಿತ್ರ -

Priyanka P
Priyanka P Jan 23, 2026 10:16 PM

ನವದೆಹಲಿ, ಜ. 23: ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26ರಂದು (Republic Day 2026) ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಭಾರತೀಯರು 2026ರ ಗಣರಾಜ್ಯೋತ್ಸವ ಮೆರವಣಿಗೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ವರ್ಷ ಗರಿಷ್ಠ ವೀಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇಶದ ನಾಗರಿಕರಲ್ಲಿ ಬಹುತೇಕರು ದೂರದರ್ಶನದಲ್ಲಿ ಮೆರವಣಿಗೆಯನ್ನು ವೀಕ್ಷಿಸಿದರೆ, ಇನ್ನು ಕೆಲವರು ಅಧಿಕೃತವಾಗಿ ಕರ್ತವ್ಯ ಪಥ ಎಂದು ಕರೆಯಲ್ಪಡುವ ರಾಜಪಥಕ್ಕೆ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಾರೆ.

ಕರ್ತವ್ಯ ಪಥದಲ್ಲಿ 2026ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲು, ಇಲ್ಲಿ ಯಾವ ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಕರ್ತವ್ಯ ಪಥ ಮೆರವಣಿಗೆಯಲ್ಲಿ ನಿರ್ಬಂಧಿಸಲಾದ ವಸ್ತುಗಳ ಪಟ್ಟಿ ಇಲ್ಲಿದೆ

  • ಪ್ರೇಕ್ಷಕರು ಚಾಕುಗಳು, ಕತ್ತರಿಗಳು, ನೈಲ್ ಕಟರ್ ಅಥವಾ ಬ್ಲೇಡ್‌ಗಳಂತಹ ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ತರುವಂತಿಲ್ಲ.
  • ಸಿಗರೇಟ್, ಬೀಡಿ, ಗುಟ್ಕಾ, ತಂಬಾಕು ಮತ್ತು ಮದ್ಯದ ಬಾಟಲಿಗಳನ್ನು ಸಹ ನಿಷೇಧಿಸಲಾಗಿದೆ.
  • ಲೈಟರ್‌ಗಳು, ಬೆಂಕಿಕಡ್ಡಿಗಳು ಮತ್ತು ಇತರ ಸುಡುವ ವಸ್ತುಗಳನ್ನು ಬ್ಯಾನ್‌ ಮಾಡಲಾಗಿದೆ.
  • ದೊಡ್ಡ ಬ್ಯಾಗ್‌ಗಳು ಅಥವಾ ಬ್ಯಾಕ್‌ಪ್ಯಾಕ್‌ಗಳು ನಿಷಿದ್ಧ. ಆಹಾರ ಮತ್ತು ಪಾನೀಯಗಳನ್ನೂ ಸಾಮಾನ್ಯವಾಗಿ ನಿಷೇಧಿಸಲಾಗುತ್ತದೆ.
  • ಮೆರವಣಿಗೆ ಪ್ರದೇಶದಲ್ಲಿ ಡ್ರೋನ್‌ಗಳು, ಕ್ಯಾಮರಾಗಳು ಅಥವಾ ರೆಕಾರ್ಡಿಂಗ್ ಉಪಕರಣಗಳನ್ನು ಸಹ ನಿಷೇಧಿಸಲಾಗಿದೆ.

ಪ್ಯಾರಾ ಅಥ್ಲೀಟ್‌ಗಳಿಂದ ರೈತರವರೆಗೆ: 2026ರ ಗಣರಾಜ್ಯೋತ್ಸವ ಮೆರವಣಿಗೆಗೆ 10,000ಕ್ಕೂ ಹೆಚ್ಚು ವಿಶೇಷ ಅತಿಥಿಗಳಿಗೆ ಆಹ್ವಾನ

ಅನುಸರಿಸಬೇಕಾದ ಸೂಚನೆಗಳು

ನಿಷೇಧಿತ ವಸ್ತುಗಳ ಬಗ್ಗೆ ತಿಳಿದುಕೊಂಡ ನಂತರ, ಪ್ರೇಕ್ಷಕರು ಯಾವ ಅಗತ್ಯ ವಸ್ತುಗಳನ್ನು ತರಬೇಕು ಎಂಬುದನ್ನೂ ತಿಳಿದುಕೊಳ್ಳಬೇಕು. ಈಗಾಗಲೇ ಟಿಕೆಟ್‌ಗಳನ್ನು ಖರೀದಿಸಿದವರು ತಮ್ಮ ಟಿಕೆಟ್‌ಗಳ ಹಿಂಭಾಗದಲ್ಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು. ಭದ್ರತಾ ಕಾರಣಗಳಿಂದ ನಿಯಮಗಳು ಪ್ರತಿ ವರ್ಷ ಸ್ವಲ್ಪ ಬದಲಾಗುತ್ತವೆ. ಹೀಗಾಗಿ ಕಾರ್ಯಕ್ರಮಕ್ಕೆ ಹಾಜರಾಗುವ ಮೊದಲು ನವೀಕರಿಸಿರುವ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಗಣರಾಜ್ಯೋತ್ಸವದ ಆಚರಣೆಯಲ್ಲಿ ಜನವರಿ 26ರಂದು ದೆಹಲಿಯ ಕರ್ತವ್ಯ ಪಥದಲ್ಲಿ ಮೆರವಣಿಗೆ, ಜನವರಿ 28ರಂದು ಬೀಟಿಂಗ್ ರಿಟ್ರೀಟ್ ಸಮಾರಂಭದ ಪೂರ್ಣ ಉಡುಗೆ ಪೂರ್ವಾಭ್ಯಾಸ, ಜನವರಿ 29ರಂದು ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭ, ಆಚರಣೆಗಳ ಔಪಚಾರಿಕ ಮುಕ್ತಾಯ ಕಾರ್ಯಕ್ರಮಗಳು ನಡೆಯಲಿವೆ.