ಆರ್ಎಸ್ಎಸ್ ಅಧಿಕಾರಕ್ಕಾಗಿ ಶ್ರಮಿಸುತ್ತಿಲ್ಲ, ಹಿಂದೂ ಸಮಾಜವನ್ನು ಒಗ್ಗೂಡಿಸುತ್ತಿದೆ: ಮೋಹನ್ ಭಾಗವತ್
Mohan Bhagwat: ಆರ್ಎಸ್ಎಸ್ ಯಾವುದೇ ನಿರ್ದಿಷ್ಟ ಗುಂಪಿಗೆ ವಿರುದ್ಧವಾಗಿ ಅಥವಾ ಪೈಪೋಟಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಉತ್ತರ ಪ್ರದೇಶದ ಮಾಧವ್ ಕುಂಜ್‌ನಲ್ಲಿ ಮಾತನಾಡಿದ ಅವರು, ಸಾಮಾಜಿಕ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (ಸಂಗ್ರಹ ಚಿತ್ರ) -
ಲಖನೌ, ಫೆ. 21: ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಯಾವುದೇ ರಾಜಕೀಯ ಅಧಿಕಾರದ ಆಸೆಯಿಂದ ನಡೆಸಲ್ಪಡುವುದಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸಲು ಮತ್ತು ಜನರಲ್ಲಿ ವ್ಯಕ್ತಿತ್ವ ನಬೆಳೆಸಲು ಬದ್ಧವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಹೇಳಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನ ಶತಾಬ್ದಿ ನಗರದ ಮಾಧವ್ ಕುಂಜ್‌ನಲ್ಲಿ ಸುಮಾರು 950 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಭಾಗವತ್, ಸಾಮಾಜಿಕ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು. ಸಂಘವು ಯಾವುದೇ ನಿರ್ದಿಷ್ಟ ಗುಂಪಿಗೆ ವಿರುದ್ಧವಾಗಿ ಅಥವಾ ಪೈಪೋಟಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದರು.
ಸುಮಾರು 50 ನಿಮಿಷಗಳ ಕಾಲ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಆರಂಭವಾದಾಗಿನಿಂದ ಸುಮಾರು 100 ವರ್ಷಗಳ ಪ್ರಯಾಣವನ್ನು ಎತ್ತಿ ತೋರಿಸಿದರು. ದೇಶ ನಿರ್ಮಾಣದಲ್ಲಿ ಯುವಕರು ಸಕ್ರಿಯ ಪಾತ್ರ ವಹಿಸುವಂತೆ ಅವರು ಕರೆ ನೀಡಿದರು.
ಹಿಂದೂ ಕುಟುಂಬ ಮೂರು ಮಕ್ಕಳನ್ನು ಹೊಂದಲೇಬೇಕು ಎಂದ ಭಾಗವತ್
ಆರ್ಎಸ್ಎಸ್ ಯಾವುದೇ ರಾಜಕೀಯ ಅಧಿಕಾರದ ಆಸೆಯಿಂದ ನಡೆಸಲ್ಪಡುವುದಿಲ್ಲ. ಅದರ ಏಕೈಕ ಉದ್ದೇಶವೆಂದರೆ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ವ್ಯಕ್ತಿತ್ವ ನಿರ್ಮಾಣ ಮಾಡುವುದು ಎಂದು ಭಾಗವತ್ ಹೇಳಿದ್ದಾರೆ.
ಭಾರತದ ಕಲ್ಪನೆಯನ್ನು ವಿವರಿಸಿದ ಭಾಗವತ್, ದೇಶವು ಕೇವಲ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಲ್ಲ. ಬದಲಿಗೆ ರಾಮ, ಕೃಷ್ಣ, ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಮತ್ತು ಮಹಾತ್ಮ ಗಾಂಧಿ ಅವರಿಂದ ಪ್ರೇರಣೆ ಪಡೆದಿದೆ ಎಂದು ಹೇಳಿದರು.
ಹಿಂದೂ ಎಂಬ ಪದವು ಜಾತಿಯನ್ನು ಸೂಚಿಸುವುದಲ್ಲ. ವೈವಿಧ್ಯದಲ್ಲಿರುವ ಏಕತೆಯನ್ನು ಸೂಚಿಸುತ್ತದೆ ಎಂದು ಹೇಳಿದರು. ಪೂಜಾ ವಿಧಾನಗಳು ಮತ್ತು ದೇವತೆಗಳು ವಿಭಿನ್ನವಾಗಿರಬಹುದು. ಆದರೆ ಸಾಂಸ್ಕೃತಿಕ ಅಡಿಪಾಯವು ಸೌಹಾರ್ದತೆ ಮತ್ತು ಏಕತೆಯಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ಏಕತೆ ದುರ್ಬಲಗೊಂಡಾಗಲೆಲ್ಲ ರಾಷ್ಟ್ರವು ಬಿಕ್ಕಟ್ಟುಗಳನ್ನು ಎದುರಿಸಿತು ಎಂದು ಅವರು ಉಲ್ಲೇಖಿಸಿದ್ದಾರೆ.
ಮೋಹನ್ ಭಾಗವತ್ ಸಮಾಜದ ನಾಲ್ಕು ಸ್ತಂಭಗಳಾದ ಮೌಲ್ಯವರ್ಧನೆ, ಸನಾತನ ಸಂಸ್ಕೃತಿ, ಧರ್ಮದ ಮನೋಭಾವ ಮತ್ತು ಸತ್ಯದ ಸಾಕಾರವನ್ನು ವಿವರಿಸಿದರು. ಸಂಘದ ಉದ್ದೇಶವು ವ್ಯಕ್ತಿಗತ ಅಭಿವೃದ್ಧಿಯ ಮೂಲಕ ಸಂಪೂರ್ಣ ಹಿಂದೂ ಸಮಾಜವನ್ನು ಸಂಘಟಿಸುವುದಾಗಿದೆ ಎಂದು ಅವರು ಪುನರುಚ್ಚರಿಸಿದರು.
ಭಾರತ ಈಗಾಗಲೇ ಹಿಂದೂ ರಾಷ್ಟ್ರ, ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ: ಮೋಹನ್ ಭಾಗವತ್
1857ರ ಪ್ರಥಮ ಸ್ವಾತಂತ್ರ್ಯ ಸಮರದಲ್ಲಿ ಮೀರತ್‌ನ ಪಾತ್ರವನ್ನು ಅವರು ಸ್ಮರಿಸಿದರು. ಆ ಐತಿಹಾಸಿಕ ಸಂಗ್ರಾಮದ ಬಳಿಕ ಕೇಶವ್ ಬಲಿರಾಮ್ ಹೆಗ್ಡೇವಾರ್ ಅವರಿಗೆ 1925ರಲ್ಲಿ ಆರ್‌ಎಸ್ಎಸ್ ಸಂಘ ಸ್ಥಾಪಿಸಲು ಪ್ರೇರಣೆಯಾಯಿತು ಎಂದು ಹೇಳಿದರು.
ಅರ್ಜುನ ಪ್ರಶಸ್ತಿ ವಿಜೇತೆ ಕುಸ್ತಿಪಟು ಅಲ್ಕಾ ತೋಮರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದ ಅವರು, ಆರ್‌ಎಸ್‌ಎಸ್ ಸ್ವಯಂಸೇವಕರು ಮಾಡಿದ ವ್ಯವಸ್ಥೆಗಳನ್ನು ಶ್ಲಾಘಿಸಿದರು.
ದೇಶ ನಿರ್ಮಾಣ ಪ್ರತಿಯೊಬ್ಬ ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ರಾಷ್ಟ್ರಕ್ಕಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಮಯದಿಂದ ಭಾಗವತ್ ಅವರನ್ನು ಅನುಸರಿಸುತ್ತಿದ್ದೇನೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕೆಲಸ ಮಾಡುವ ಅವರ ಮಹತ್ವವನ್ನು ಶ್ಲಾಘಿಸುತ್ತೇನೆ ಎಂದು ಅವರು ಹೇಳಿದರು.