ಶಾರುಖ್ ಖಾನ್ ನಾಲಿಗೆ ಕತ್ತರಿಸಿದವರಿಗೆ ಬಹುಮಾನ; ಹಿಂದೂ ನಾಯಕಿಯಿಂದ ಬಹುದೊಡ್ಡ ವಿವಾದ
ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ವಿವಾದಾತ್ಮಕ ಶಾಸಕ ಸಂಗೀತ್ ಸೋಮ್ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು 'ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಕ್ಕಾಗಿ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿದ ದೇಶದ್ರೋಹಿ' ಎಂದು ಕರೆದ ಬಳಿಕ ಹಿಂದೂ ನಾಯಕಿ ಶಾರುಖ್ ಖಾನ್ ನಾಲಿಗೆ ಕತ್ತರಿಸಬೇಕು ಎಂದು ಹೇಳಿದ್ದಾರೆ.
ನಟ ಶಾರುಖ್ ಖಾನ್ -
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ವಿವಾದಾತ್ಮಕ ಶಾಸಕ ಸಂಗೀತ್ ಸೋಮ್ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರನ್ನು 'ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಂಡಕ್ಕಾಗಿ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿದ ದೇಶದ್ರೋಹಿ' ಎಂದು ಕರೆದ ಕೆಲವು ದಿನಗಳ ನಂತರ , ಕೇಸರಿ ನಾಯಕರೊಬ್ಬರು ಅವರ ನಾಲಿಗೆ ಕತ್ತರಿಸಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿದ್ದ ಮೀರಾ ಠಾಕೂರ್ ಗುರುವಾರ ಮಥುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ. ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ಫ್ರಾಂಚೈಸಿಗೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ರಾಥೋಡ್, ಶಾರುಖ್ ಖಾನ್ ಅವರ ಪೋಸ್ಟರ್‌ಗಳಿಗೆ ಕಪ್ಪು ಬಣ್ಣ ಬಳಿದು, ಚಪ್ಪಲಿಯಿಂದ ಹೊಡೆದರು. ನಮ್ಮ ಹಿಂದೂ ಸಹೋದರರನ್ನು ಬಾಂಗ್ಲಾದೇಶದಲ್ಲಿ ಜೀವಂತವಾಗಿ ಸುಡಲಾಗುತ್ತಿದೆ. ಆದರೆ ಇಲ್ಲಿ ಇವರು ಅಲ್ಲಿಂದ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಸಂತ ದಿನೇಶ್ ಫಲಹರಿ ಮಹಾರಾಜ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಖಾನ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಮತ್ತು ಅವರನ್ನು (ಶಾರುಖ್ ಖಾನ್) ಬಾಂಗ್ಲಾದೇಶಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ. ಶಾರುಖ್ ಖಾನ್ ದೇಶ ಬಿಟ್ಟು ಹೋಗಬೇಕು, ಏಕೆಂದರೆ ಅವರಿಗೆ ಇಲ್ಲಿ ವಾಸಿಸುವ 'ಹಕ್ಕು' ಇಲ್ಲ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ದೇಶದ್ರೋಹಿಗಳ ಕೊರತೆಯಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಅವರು ರಾಷ್ಟ್ರದ ಮಾನಹಾನಿ ಮತ್ತು ಅವಮಾನವನ್ನು ಮುಂದುವರಿಸುತ್ತಾರೆ ಎಂದು ಒತ್ತಾಯಿಸಿದ್ದಾರೆ.
ಏನಿದು ವಿವಾದ?
ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗಳಿಗೆ ಖರೀದಿಸಿದೆ. ಡಿಸೆಂಬರ್ 18, 2025 ರಂದು ಬಾಂಗ್ಲಾದೇಶದಲ್ಲಿ ಹಿಂದೂ ಗಾರ್ಮೆಂಟ್ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಿ ಬೆಂಕಿ ಹಚ್ಚಿದ ಬಳಿಕ ಬಾಂಗ್ಲಾದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ವಿವಾದದ ಬಳಿಕ ಕೊಲ್ಕತ್ತಾ ತಂಡವಾಗಲಿ, ಶಾರುಖ್ ಖಾನ್ ಆಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.