ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಗರೇಟ್ ಮೇಲೆ ಹೆಚ್ಚಿದ ಅಬಕಾರಿ ಸುಂಕ; ಐಟಿಸಿ ಮಾರುಕಟ್ಟೆ ಮೌಲ್ಯ 63,000 ಕೋಟಿ ಕುಸಿತ

ಕೇಂದ್ರ ಸರ್ಕಾರ ಸಿಗರೇಟ್‌ಗಳ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆ ಪರಿಣಾಮವಾಗಿ, ದೇಶದ ಅತಿದೊಡ್ಡ ಸಿಗರೇಟ್ ಉತ್ಪಾದಕ ಸಂಸ್ಥೆಯಾದ ಐಟಿಸಿ ಲಿಮಿಟೆಡ್ (ITC Ltd.)ಗೆ ಭಾರಿ ಹೊಡೆತ ತಗುಲಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 63,000 ಕೋಟಿ ರೂಪಾಯಿ (ಸುಮಾರು $7 ಬಿಲಿಯನ್) ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಧೂಮಪಾನಿಗಳಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ

ಐಟಿಸಿ ಲಿಮಿಟೆಡ್ -

Profile
Sushmitha Jain Jan 2, 2026 6:09 PM

ನವದೆಹಲಿ: ಕೇಂದ್ರ ಸರ್ಕಾರ ಸಿಗರೇಟ್ (cigarette) ಮೇಲಿ ಘೋಷಿಸಿರುವ ತೆರಿಗೆಯಿಂದಾಗಿ, ಭಾರತದ ಅತಿದೊಡ್ಡ ಸಿಗರೇಟ್ ತಯಾರಕ ಕಂಪನಿಯಾದ ಐಟಿಸಿ ಲಿಮಿಟೆಡ್ (ITC Ltd.) ನ ಮಾರುಕಟ್ಟೆ ಮೌಲ್ಯ ಸುಮಾರು $7 ಬಿಲಿಯನ್ (ಸುಮಾರು 63,000 ಕೋಟಿ ರೂ.) ಕುಸಿತ ಕಂಡಿದೆ ಎಂದು ವರದಿಗಳು ತಿಳಿಸಿವೆ. ಐಟಿಸಿಯ ಷೇರು ಬೆಲೆ 5.11% ಇಳಿದು 345.35ರೂ.ಕ್ಕೆ ತಲುಪಿದ್ದು, ಇದು ಫೆಬ್ರವರಿ 2023 ಬಳಿಕದ ಅತಿ ಕಡಿಮೆ ಮಟ್ಟವಾಗಿದೆ. ಈ ಹಿಂದೆಗಿಂತ ಸುಮಾರು 10% ಕುಸಿತ ಕಂಡಿದೆ.

ಸರ್ಕಾರ ಸಿಗರೇಟ್‌ಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ ಬಳಿಕ, ಗೋಲ್ಡ್‌ಮನ್ ಸ್ಯಾಕ್ಸ್(Goldman Sachs), ಜೆಪಿಎಂಆರ್ಗನ್ ಚೇಸ್ (JPMorgan Chase) ಮತ್ತು ಮಾರ್ಗನ್ ಸ್ಟ್ಯಾನ್ಲಿ (Morgan Stanley) ಸೇರಿದಂತೆ ಕನಿಷ್ಠ 11 ಬ್ರೋಕರೇಜ್ ಸಂಸ್ಥೆಗಳು ಐಟಿಸಿ ಷೇರನ್ನು ಡೌನ್‌ಗ್ರೇಡ್ ಮಾಡಿವೆ. ಜೆಫರೀಸ್ (Jefferies) ಸಂಸ್ಥೆಯು “ತೆರಿಗೆ ಶಾಕ್”ನಿಂದಾಗಿ ಷೇರುಗಳು ಕುಸಿತ ಕಾಣಬಹುದೆಂದು, ಷೇರನ್ನು ‘ಬೈ’ಯಿಂದ ‘ಹೋಲ್ಡ್’ಗೆ ಇಳಿಸಿದೆ.

ಭಾರತದಲ್ಲಿ ಸಿಗರೇಟ್ ತೆರಿಗೆ

ಕೇಂದ್ರವು ಬುಧವಾರ ತಡರಾತ್ರಿ ಪ್ರಕಟಿಸಿದ ಅಧಿಸೂಚನೆಯಯಂತೆ, 2026ರ ಫೆಬ್ರವರಿ 1ರಿಂದ ಸಿಗರೇಟ್‌ನ ಪ್ರತಿ 1,000 ಸ್ಟಿಕ್‌ಗಳಿಗೆ ₹2,050 ರಿಂದ ₹8,500ರವರೆಗೆ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಇದರೊಂದಿಗೆ, ತಂಬಾಕು ಉತ್ಪನ್ನಗಳು ಮತ್ತು ಸಿಗರೇಟ್‌ಗಳ ಮೇಲೆ 40% ಜಿಎಸ್‌ಟಿ ಕೂಡ ಫೆಬ್ರವರಿ 1ರಿಂದಲೇ ಜಾರಿಗೆ ಬರಲಿದೆ.

ಐಟಿಸಿ ಈ ತೆರಿಗೆ ಭಾರವನ್ನು ಇಳಿಸಿಕೊಳ್ಳಲು, ಸಿಗರೇಟ್‌ನ ಬೆಲೆ ಕನಿಷ್ಠ 15% ಅಥವಾ ಅದಕ್ಕಿಂತ ಹೆಚ್ಚು ಏರಿಕೆ ಮಾಡಬೇಕಾಗಬಹುದು ಎಂದು ಜೆಫರೀಸ್ ಹೇಳಿದೆ. ಹೆಚ್ಚಿದ ಈ ತೆರಿಗೆಯ ಹೊರೆಯನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲು ಸಿಗರೇಟ್‌ನ ಬೆಲೆಗಳು 40%ರವರೆಗೆ ಏರಬೇಕಾಗಬಹುದು ಎಂದು ಮಾರ್ಗನ್ ಸ್ಟ್ಯಾನ್ಲಿ ತಿಳಿಸಿದ್ದಾರೆ.

ವಿಶ್ಲೇಷಕರ ಪ್ರಕಾರ, ಈ ಬೆಲೆ ಏರಿಕೆಯು ಬೇಡಿಕೆ ಮತ್ತು ಲಾಭ ಎರಡರ ಮೇಲೂ ಪರಿಣಾಮ ಬೀರಬಹುದು. ಐಟಿಸಿಗೆ ತನ್ನ ಒಟ್ಟು ಆದಾಯದ 40%ಕ್ಕೂ ಹೆಚ್ಚು ಭಾಗ ಸಿಗರೇಟ್ ವ್ಯವಹಾರದಿಂದಲೇ ಬರುತ್ತದೆ. ಭಾರತದಲ್ಲಿ ಸುಮಾರು 25.3 ಕೋಟಿ ಜನ ತಂಬಾಕು ಬಳಕೆದಾರರು ಇದ್ದು, ಇದು ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯಾಗಿದೆ.

"ಬಾಂಗ್ಲಾದವರನ್ನು ಪತ್ತೆ ಮಾಡುವ ಯಂತ್ರ ನಮ್ಮಲ್ಲಿದೆ"; ಸ್ಲಂ ನಿವಾಸಿಗಳಿಗೆ ಬೆದರಿಸಿದ ಪೊಲೀಸ್!‌ ವಿಡಿಯೋ ನೋಡಿ

ಸಿಗರೇಟ್ ತೆರಿಗೆ ಲೆಕ್ಕಾಚಾರ

ಫೆಬ್ರವರಿ 1ರಿಂದ ಪಾನ್ ಮಸಾಲಾ ಮತ್ತು ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳಿಗೆ 40% ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಬೀಡಿಗಳಿಗೆ 18% ಜಿಎಸ್‌ಟಿ ಮಾತ್ರ ಅನ್ವಯಿಸುತ್ತದೆ. ಇದರೊಂದಿಗೆ, ಪಾನ್ ಮಸಾಲಾದ ಮೇಲೆ ಸೆಸ್ ವಿಧಿಸಲಾಗಿದ್ದು, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಹೆಚ್ಚುವರಿ ಎಕ್ಸೈಸ್ ಡ್ಯೂಟಿ ವಿಧಿಸಲಾಗುತ್ತಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ 2025ರ ಸೆಪ್ಟೆಂಬರ್ 22ರಂದು, ಸಾಬೂನುಗಳಿಂದ ಹಿಡಿದು ಸಣ್ಣ ಕಾರುಗಳವರೆಗೆ ಜಿಎಸ್‌ಟಿ ದರಗಳನ್ನು ಕಡಿತಗೊಳಿಸುವ ಮೂಲಕ ತೆರಿಗೆ ಸುಧಾರಣೆಯನ್ನು ಕೈಗೊಂಡಿತ್ತು. ಇದರಿಂದ ತಂಬಾಕು ಉತ್ಪನ್ನಗಳ ಮೇಲೆ ಪರಿಣಾಮಕಾರಿ ತೆರಿಗೆ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಇದೀಗ ಅದಕ್ಕಿಂತಲೂ ಹೆಚ್ಚಿನ ಎಕ್ಸೈಸ್ ಡ್ಯೂಟಿಯನ್ನು ವಿಧಿಸಲಾಗಿದೆ. ಇತರ ಉತ್ಪನ್ನ ವರ್ಗಗಳಿಂದ ಉಂಟಾಗುವ ಜಿಎಸ್‌ಟಿ ಆದಾಯದ ಕೊರತೆಯನ್ನು ಈ ತೆರಿಗೆ ಪೂರೈಸಲಿದೆ ಎಂದು ನಿರೀಕ್ಷಿಸಲಾಗಿದೆ.