Sangeeta Bijlani: ನಟ ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ತೋಟದ ಮನೆಯಲ್ಲಿ ಕಳ್ಳತನ
ನಟ ಸಲ್ಮಾನ್ ಖಾನ್ ಮಾಜಿ ಗೆಳತಿ ಹಾಗೂ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರ ಪುಣೆಯ ಮಾವಲ್‌ನಲ್ಲಿರುವ ತೋಟದ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಮುಖ್ಯ ದ್ವಾರ ಹಾಗೂ ಕಿಟಕಿ ಎರಡೂ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.


ಮುಂಬೈ: ನಟ ಸಲ್ಮಾನ್ ಖಾನ್ (Salman Khan) ಮಾಜಿ ಗೆಳತಿ ಹಾಗೂ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ (Sangeeta Bijlani) ಅವರ ಪುಣೆಯ ಮಾವಲ್‌ನಲ್ಲಿರುವ ತೋಟದ ಮನೆಯಲ್ಲಿ ಕಳ್ಳತನ ನಡೆದಿದೆ. ದೀರ್ಘ ಸಮಯದ ನಂತರ ಜುಲೈ 18ರಂದು ಸಂಗೀತಾ ತಮ್ಮ ಫಾರ್ಮ್ ಹೌಸ್‌ಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಳ್ಳತನ ನಡೆದಿರುವುದು ತಿಳಿದ ಕೂಡಲೇ ಸಂಗೀತಾ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯ ಮುಖ್ಯ ದ್ವಾರ ಹಾಗೂ ಕಿಟಕಿ ಎರಡೂ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಕಳ್ಳರು ಒಳನುಗ್ಗಿದ್ದರಿಂದ ನಟಿ ಸಂಗೀತಾ ಅವರ ತೋಟದ ಮನೆ ಹಾನಿಗೊಳಗಾಗಿದೆ. ಇಬ್ಬರು ಕೆಲಸದವರೊಂದಿಗೆ ತೋಟದ ಮನೆಗೆ ಹೋದಾಗ, ಮನೆಯ ಮುಖ್ಯ ದ್ವಾರದ ಬಾಗಿಲು ಹಾನಿಗೊಳಗಾಗಿರುವುದನ್ನು ಅವರು ಗಮನಿಸಿದ್ದಾರೆ. ಒಳಗೆ ಹೋದಾಗ ಕಿಟಕಿಯ ಗ್ರಿಲ್ ಮುರಿದಿತ್ತು. ಒಂದು ಟಿವಿ ಸೆಟ್ ಕಳವಾಗಿದ್ದರೆ, ಇನ್ನೊಂದು ಜಖಂಗೊಂಡಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಟಿ ತಿಳಿಸಿದ್ದಾರೆ.
ಮನೆಯಲ್ಲಿದ್ದ ಹಲವು ವಸ್ತುಗಳು ಕಳವಾಗುವೆ, ಕೆಲವೊಂದು ಧ್ವಂಸಗೊಂಡಿವೆ. ಕಳುವಾದ ಟಿವಿ ಸೆಟ್ ಹೊರತುಪಡಿಸಿ ಸಿಸಿಟಿವಿ ಕ್ಯಾಮೆರಾ, ಹಾಸಿಗೆ ಮತ್ತು ಫ್ರಿಜ್‍ನಂತಹ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
Theft reported at actor Sangeeta Bijlani's farmhouse in Pawna Maval, Lonavala.
— Vani Mehrotra (@vani_mehrotra) July 19, 2025
The incident happened two nights ago. A case has been lodged. pic.twitter.com/6qeSrbxTRZ
ಇನ್ನು ಈ ಘಟನೆಯ ಕುರಿತು ನಟಿ ಸಂಗೀತಾ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲೂ ಈ ಬಗ್ಗೆ ಉಲ್ಲೇಖಿಸಿಲ್ಲ. ಸದ್ಯ, ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Monalisa: ಚಿತ್ರೀಕರಣದಲ್ಲಿ ಪಾಲ್ಗೊಂಡ ಮೊನಾಲಿಸಾ ನೋಡಲು ಮುಗಿಬಿದ್ದ ಜನ; ವಿಡಿಯೊ ವೈರಲ್
ಸಂಗೀತಾ ಬಿಜಲಾನಿ ಅವರ ಸಿನಿಮಾ ವೃತ್ತಿ ಜೀವನ
1960ರಲ್ಲಿ ಮುಂಬೈಯಲ್ಲಿ ಜನಿಸಿದ ಸಂಗೀತಾ ಮಾಡೆಲ್ ಆಗಿಯೂ ಗಮನ ಸೆಳೆದಿದ್ದಾರೆ. 1988ರಲ್ಲಿ ತೆರೆಕಂಡ ʼಕ್ವಾಟಿಲ್ʼ ಬಾಲಿವುಡ್ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಅವರು 1991ರಲ್ಲಿ ರಿಲೀಸ್ ಆದ ʼಪೊಲೀಸ್ ಮತ್ತು ದಾದಾʼ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಸಂಗೀತಾ ಬಿಜಲಾನಿ ಹಲವು ವರ್ಷಗಳಿಂದ ನಟನೆಯಿಂದ ದೂರವಿದ್ದಾರೆ. 1980ರ ದಶಕದ ಉತ್ತರಾರ್ಧ ಮತ್ತು 1990ರ ದಶಕದ ಆರಂಭದಲ್ಲಿ ಅವರು ʼಹತ್ಯಾರ್ʼ, ʼತ್ರಿದೇವ್ʼ, ʼಗುಣಹೋಂ ಕಾ ದೇವತʼ, ʼಹಾತಿಮ್ ತೈʼ ಮತ್ತು ʼಜುರ್ಮ್ʼ ಮುಂತಾದ ಜನಪ್ರಿಯ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಿಂದ ದೂರವಿದ್ದರೂ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಈಗಲೂ ಜನರ ಗಮನ ಸೆಳೆಯುತ್ತಿದ್ದಾರೆ.