ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಎಚ್.ಕೆ. ದುವಾ ನಿಧನ

ಹಿರಿಯ ಪತ್ರಕರ್ತ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ದುವಾ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಚ್.ಡಿ. ದೇವೇಗೌಡರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಅವರು ಹಲವು ಪ್ರಮುಖ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿದ್ದರು.

ಹಿರಿಯ ಪತ್ರಕರ್ತ ಎಚ್.ಕೆ. ದುವಾ ವಿಧಿವಶ

ಎಚ್.ಕೆ. ದುವಾ (ಸಂಗ್ರಹ ಚಿತ್ರ) -

Profile
Sushmitha Jain Mar 4, 2026 10:30 PM

ನವದೆಹಲಿ, ಮಾ. 4: ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ದುವಾ (HK Dua) (88) ಬುಧವಾರ (ಮಾರ್ಚ್‌ 4) ಇಹಲೋಕ ತ್ಯಜಿಸಿದ್ದಾರೆ (Passed Away). ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

1937ರ ಜುಲೈ 1ರಂದು ಜನಿಸಿದ ಎಚ್.ಕೆ. ದುವಾ ದೇಶದ ಇಬ್ಬರು ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಚ್.ಡಿ. ದೇವೇಗೌಡ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕೀಯ ವಿಚಾರಗಳಲ್ಲಿ ತೀಕ್ಷ್ಣ ವಿಶ್ಲೇಷಣೆ ಮತ್ತು ಸಂಪಾದಕೀಯ ನೈತಿಕತೆಗೆ ಅವರು ಪ್ರಸಿದ್ಧರಾಗಿದ್ದರು. ಜತೆಗೆ ಡೆನ್ಮಾರ್ಕ್‌ಗೆ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಶಶಿ ತರೂರ್‌ ಎಕ್ಸ್‌ ಪೋಸ್ಟ್‌:



ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ

ಎಚ್.ಕೆ. ದುವಾ ಭಾರತೀಯ ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಮಹತ್ವದ ಪಾತ್ರವಹಿಸಿದ್ದರು. ʼಹಿಂದೂಸ್ತಾನ್ ಟೈಮ್ಸ್ʼ (1987-94), ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ (1994-96) ಮತ್ತು ʼದಿ ಟ್ರಿಬ್ಯೂನ್ʼ (2003-09) ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ನಂತರ ʼಟೈಮ್ಸ್ ಆಫ್ ಇಂಡಿಯಾʼ ಪತ್ರಿಕೆಯಲ್ಲಿ ಸಂಪಾದಕೀಯ ಸಲಹೆಗಾರರಾಗಿ ಕೂಡ ಕೆಲಸ ಮಾಡಿದ್ದರು.

ಅವರು ವೃತ್ತಪತ್ರಿಕೆ ಅಂಕಣಗಳ ಮೂಲಕ ಹಾಗೂ ದೂರದರ್ಶನ ಚರ್ಚೆಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್‌; ಭಟ್ಕಳದಲ್ಲಿ ಪೆಂಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದ ಜನ, ʼನೋ ಸ್ಟಾಕ್‌ʼ!

ರಾಜಕೀಯ ಮತ್ತು ಸಾರ್ವಜನಿಕ ಸೇವೆ

2009ರಿಂದ 2015ರವರೆಗೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದ ಅವರು ವಿದೇಶಾಂಗ ವ್ಯವಹಾರಗಳು ಮತ್ತು ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಅವರಿಗೆ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಂದ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಪಂಜಾಬ್ ವಿಶ್ವವಿದ್ಯಾಲಯ ಹಾಗೂ ಕುರುಕ್ಷೇತ್ರ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ಜತೆಗೆ ಪಂಜಾಬ್ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನ್ಯಾಯಾಲಯದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಎಚ್.ಕೆ. ದುವಾ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಶಶಿ ತರೂರ್ ಮತ್ತು ಮನೀಶ್ ತಿವಾರಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. ಭಾರತೀಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರ ಅಗಲಿಕೆ ದೊಡ್ಡ ನಷ್ಟವೆಂದು ಗಣ್ಯರು ತಿಳಿಸಿದ್ದಾರೆ.