Motivational Story: SBI ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೇರಿದ 65 ರೂಪಾಯಿ ಸಂಬಳಕ್ಕೆ ಶೌಚಾಲಯ ಶುಚಿಗೊಳಿಸುತ್ತಿದ್ದ ಮಹಿಳೆ; ಪ್ರತೀಕ್ಷಾ ಯಶೋಗಾಥೆ ಇದು
Pratiksha Tondwalkar: ಕೇವಲ 20ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು, 2 ವರ್ಷದ ಮಗನ ಹೊಟ್ಟೆ ತುಂಬಿಸಲು ತಿಂಗಳಿಗೆ 65 ರೂಪಾಯಿ ಸಂಬಳಕ್ಕೆ ಬ್ಯಾಂಕ್ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ಮಹಿಳೆಯೊಬ್ಬರು ಇಂದು ಅದೇ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) ಹುದ್ದೆಗೆೇರಿ ಇಡೀ ದೇಶಕ್ಕೇ ಮಾದರಿಯಾಗಿದ್ದಾರೆ. ಮಹಾರಾಷ್ಟ್ರದ ಮುಂಬೈಯ ಪ್ರತೀಕ್ಷಾ ತೊಂಡವಲ್ಕರ್ ಅವರ ಯಶಸ್ಸಿನ ಕಥೆ ಇಲ್ಲಿದೆ.
ಪ್ರತೀಕ್ಷಾ ತೊಂಡವಲ್ಕರ್ (ಸಂಗ್ರಹ ಚಿತ್ರ) -
ಮುಂಬೈ, ಸೆ. 9: ಕನಸು ಕಾಣಲು ಬಡತನ ಅಡ್ಡಿಯಾಗುವುದಿಲ್ಲ, ಸಾಧನೆ ಮಾಡಲು ವಯಸ್ಸು ತಡೆಯಾಗುವುದಿಲ್ಲ. ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವಿದ್ದರೆ ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಶೂನ್ಯದಿಂದ ಎಂತಹ ಸಾಮ್ರಾಜ್ಯವನ್ನಾದರೂ ಕಟ್ಟಬಲ್ಲ, ಎಂತಹ ಎತ್ತರಕ್ಕಾದರೂ ಬೆಳೆಯಬಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಮುಂಬೈಯ ಪ್ರತೀಕ್ಷಾ ತೊಂಡವಲ್ಕರ್ (Pratiksha Tondwalkar) ಅವರ ಜೀವನವೇ ಮಹಾ ಉದಾಹರಣೆ. ಕೇವಲ 20ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು, 2 ವರ್ಷದ ಮಗನ ಹೊಟ್ಟೆ ತುಂಬಿಸಲು ತಿಂಗಳಿಗೆ 65 ರೂಪಾಯಿ ಸಂಬಳಕ್ಕೆ ಬ್ಯಾಂಕ್ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿದ ಅವರು ಇಂದು ಅದೇ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) ಹುದ್ದೆಗೇರಿ ದೇಶವೇ ಹೆಮ್ಮೆಪಡುವಂತೆ ಬೆಳೆದು ನಿಂತಿದ್ದಾರೆ (Motivational Story). ಪ್ರತೀಕ್ಷಾ ಅವರ ಜೀವನ ನಿಜಕ್ಕೂ ಸ್ಪೂರ್ತಿದಾಯಕ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಗಂಡನನ್ನು ಕಳೆದುಕೊಂಡು ಸಣ್ಣ ಮಗನನ್ನು ಕಂಕುಳಲ್ಲಿ ಕಟ್ಟಿಕೊಂಡು, ಕೈಯಲ್ಲಿ ಯಾವುದೇ ಕೆಲಸವಿಲ್ಲದೆ, ಬಿಡಿಗಾಸು ಇಲ್ಲದೆ ಅವರು ಪಟ್ಟ ಕಷ್ಟ ಎಂತರ ಕಣ್ಣಲ್ಲೂ ನೀರು ತರಿಸುತ್ತದೆ.
1964ರಲ್ಲಿ ಪುಣೆಯ ಬಡ ಕುಟುಂಬದಲ್ಲಿ ಜನಿಸಿದ ಪ್ರತೀಕ್ಷಾ ಅವರಿಗೆ ಆರ್ಥಿಕ ಬಿಕ್ಕಟ್ಟಿನಿಂದಾಗಿ 7ನೇ ತರಗತಿಯಲ್ಲೇ ಶಿಕ್ಷಣವನ್ನು ಕೈಬಿಡಬೇಕಾದ ಪರಿಸ್ಥಿತಿ ಎದುರಾಯಿತು. 17ನೇ ವಯಸ್ಸಿನಲ್ಲಿ ಮದುವೆಯೂ ಆದರು. ಅವರು ಪತಿ ಸದಾಶಿವ ಕಾಡು ಮುಂಬೈಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಪುಸ್ತಕ ಜೋಡಿಸುವ ಕೆಲಸ ಮಾಡುತ್ತಿದ್ದರು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಮದುವೆಯಾದ ಮೂರೇ ವರ್ಷಕ್ಕೆ, ಅಂದರೆ ಪ್ರತೀಕ್ಷಾ ಅವರ 20ನೇ ವಯಸ್ಸಿನಲ್ಲಿ ಪತಿ ನಿಧನ ಹೊಂದಿದರು. ಗ್ರಾಮಕ್ಕೆ ತೆರಳುವಾಗ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಸದಾಶಿವ ಮೃತಪಡುವುದರೊಂದಿಗೆ ಪ್ರತೀಕ್ಷಾಗೆ ಸಿಡಿಲೆರಗಿದಂತಾಯ್ತು. ಗಂಡನನ್ನು ಕಳೆದುಕೊಂಡ ಅವರು 1 ವರ್ಷದ ಮಗುವಿನ ಹೊಟ್ಟೆ ತುಂಬಿಸಲು ಮುಂಬೈಗೆ ಬಂದರು.
ಪ್ರತೀಕ್ಷಾ ತೊಂಡವಲ್ಕರ್ ಅವರ ಸ್ಫೂರ್ತಿದಾಯಕ ಕಥೆ:
Her name is Pratiksha Tondwalkar.
— Sann (@san_x_m) May 6, 2026
She was born in 1964 in Pune into a Scheduled Caste family.
When she was in Class 7, her father decided to pull her out of school and get her married. Her teacher begged him to let her continue. She even offered to pay for Pratiksha’s education… pic.twitter.com/pM3APeszNS
ಎಸ್‌ಬಿಐಯಲ್ಲಿ ಕೆಲಸ
ಹೀಗೆ ಮುಂಬೈಗೆ ಬಂದ ತಮಗೆ ಹೇಗೆ ಕೆಲಸ ಸಿಕ್ಕಿತು ಎನ್ನುವುದರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. "ನಾನು ನನ್ನ ಮಗನೊಂದಿಗೆ ಮುಂಬೈಗೆ ಬಂದೆ. ನನ್ನ ಗಂಡನ ಬಾಕಿ ಸಂಬಳವನ್ನು ಬ್ಯಾಂಕಿನಿಂದ ಪಡೆಯಬೇಕಾಗಿದ್ದರಿಂದ ನಾನು ಶಾಖೆಗೆ ಭೇಟಿ ನೀಡಿದೆ. ಚೆಕ್ ಸ್ವೀಕರಿಸಿದ ನಂತರ, ನಾನು ಬ್ರಾಂಚ್ ಮ್ಯಾನೇಜರ್ ಅವರನ್ನು ಭೇಟಿಯಾಗಲು ವಿನಂತಿಸಿದೆ. ನೀವು ನೀಡಿದ ಹಣ ನನ್ನ ಬದುಕು ಕಟ್ಟಿಕೊಳ್ಳಲ ಹೆಚ್ಚು ದಿನ ಬರುವುದಿಲ್ಲ, ನನಗೆ ಯಾರ ಬೆಂಬಲವೂ ಇಲ್ಲ. ನಾನು ಸ್ವಂತ ಕಾಲಿನ ಮೇಲೆ ನಿಂತರೆ ಮಾತ್ರ ಬದುಕಲು ಸಾಧ್ಯ. ದಯವಿಟ್ಟು ನನಗೆ ಯಾವುದಾದರೂ ಸಣ್ಣ ಕೆಲಸವನ್ನು ಕೊಡಿ ಎಂದು ಕೇಳಿಕೊಂಡೆ, ಐದು ತಿಂಗಳ ನಂತರ, ನನಗೆ ಎಸ್‌ಬಿಐನಿಂದ ಕರೆ ಬಂದಿತು, ಬ್ಯಾಂಕ್‌ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕಿತುʼʼ ಎಂದು ನೆನಪಿಸಿಕೊಂಡರು.
ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡಿದ್ದರೂ ಛಲ ಬಿಡದೆ ಕಾಲಿನಲ್ಲೇ 10ನೇ ತರಗತಿ ಪರೀಕ್ಷೆ ಬರೆದ ದಿಟ್ಟೆ
65 ರೂಪಾಯಿ ಸಂಬಳಕ್ಕೆ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ
ʼʼನಾನು 1985ರಲ್ಲಿ ಸ್ವೀಪರ್ ಆಗಿ ಎಸ್‌ಬಿಐ ಸೇರಿದೆ. ನನ್ನ ದಿನ ಬೆಳಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತಿತ್ತು. ನಾನು ಸಿದ್ಧವಾಗಿ ಬೆಳಗ್ಗೆ 6 ಗಂಟೆಯಷ್ಟರಲ್ಲಿ ಬ್ಯಾಂಕ್ ಶಾಖೆಯನ್ನು ತಲುಪುತ್ತಿದ್ದೆ. ಬ್ಯಾಂಕ್ ತೆರೆಯುವ ಮೊದಲು, ಮೂರು ಅಂತಸ್ತಿನ ಇಡೀ ಕಟ್ಟಡವನ್ನು ನಾನು ಸ್ವಚ್ಛಗೊಳಿಸಬೇಕಾಗಿತ್ತು. ಪ್ರತಿಯೊಂದು ಮಹಡಿಯನ್ನು ಗುಡಿಸಿ, ನೆಲ ಒರೆಸುತ್ತಿದ್ದೆ, ಎಂಟರಿಂದ ಹತ್ತು ಶೌಚಾಲಯಗಳನ್ನು ತೊಳೆಯುತ್ತಿದ್ದೆ. ಬೆಳಗ್ಗೆ 8:30ಕ್ಕೆ ಶಾಖೆ ತೆರೆಯುವ ಮುನ್ನವೇ ಪ್ರತಿಯೊಂದು ಕೆಲಸವೂ ಮುಗಿಯಬೇಕಿತ್ತು” ಎಂದು ಹೇಳಿದರು.

ʼʼಅದರ ನಂತರ, ನಾನು ಸಣ್ಣ ಶೂ ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಚಿಕ್ಕ ಮಗನನ್ನು ನನ್ನೊಂದಿಗೇ ಕರೆದುಕೊಂಡು ಹೋಗುತ್ತಿದ್ದೆ. ಬಿಸಿ ಮಾಡುವ ಯಂತ್ರವನ್ನು ಬಳಸಿ ಮಕ್ಕಳ ಶೂಗಳಿಗೆ ಸೋಲ್ ಜೋಡಿಸುವುದು ನನ್ನ ಕೆಲಸವಾಗಿತ್ತು. ಆಮೇಲೆ ಮನೆಗೆ ಬಂದು, ಮಗನಿಗೆ ಊಟ ಮಾಡಿಸಿ ಅವನನ್ನು ಮಲಗಿಸಿ, ನಂತರ ನಾನು ಓದಿಕೊಳ್ಳುತ್ತಿದ್ದೆ” ಎಂದರು.
ʼʼಸಾಯಂಕಾಲ ಮನೆಗೆಲಸ ಹಾಗೂ ಮಗನ ಪಾಲನೆ ಮಾಡುತ್ತಿದ್ದೆ. ಹಣದ ಅಭಾವ ಎಷ್ಟು ತೀವ್ರವಾಗಿತ್ತೆಂದರೆ, ಒಂದೊಂದು ರೂಪಾಯಿಯೂ ಮುಖ್ಯವಾಗಿತ್ತು. ನನ್ನ ಮಗ ಪ್ರತಿ ದಿನ ಕೇವಲ ಒಂದು ಬಿಸ್ಕಟ್ ಪ್ಯಾಕೇಟ್ ಕೇಳುತ್ತಿದ್ದ. ಆ ಬಿಸ್ಕಟ್ ಖರೀದಿಸಲು ಹಣ ಉಳಿಸುವ ಸಲುವಾಗಿ ನಾನು ಬಸ್ ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ಮೊದಲೇ ಬಂದು ಕಾಯುತ್ತಿದ್ದೆʼʼ ಅವರು ತಿಳಿಸಿದರು.
ಶಿಕ್ಷಣದತ್ತ ಒಲವು, ಮಂದುವರಿದ ಓದು,
ಬ್ಯಾಂಕಿನ ಒಳಗೆ ಕೆಲಸ ಮಾಡುತ್ತಿದ್ದಾಗ ಪ್ರತೀಕ್ಷಾ ಅವರಿಗೆ ಸಂಪೂರ್ಣ ವಿಭಿನ್ನ ಪ್ರಪಂಚದ ಪರಿಚಯವಾಯಿತು. ಪ್ರತಿದಿನ ಅವರು ತಮ್ಮ ಸುತ್ತಲೂ ವಿದ್ಯಾವಂತ ಅಧಿಕಾರಿಗಳು, ಕ್ಲರ್ಕ್ ಮತ್ತು ಇತರ ಸಿಬ್ಬಂದಿ ವರ್ಗದವರು ಕೆಲಸ ಮಾಡುವುದನ್ನು ನೋಡುತ್ತಿದ್ದರು. ಶಿಕ್ಷಣದಿಂದ ಮಾತ್ರ ತಮ್ಮ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯ ಎಂಬ ಸತ್ಯ ಅವರಿಗೆ ನಿಧಾನವಾಗಿ ಅರಿವಾಯಿತು. ಬಡತನ ಮತ್ತು ಚಿಕ್ಕ ವಯಸ್ಸಿನಲ್ಲೇ ಆದ ಮದುವೆಯಿಂದಾಗಿ ಅವರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಕಲಿಯಲು ವಯಸ್ಸು ಮಿಂಚಿಹೋಗಿಲ್ಲ ಎಂಬುದು ಅವರ ಬಲವದ ನಂಬಿಕೆಯಾಗಿತ್ತು.
ಸುದೀರ್ಘ ಕೆಲಸದ ಅವಧಿಯ ನಂತರವೂ, ಅವರು ಮುಂಬೈಯ ವಿಖ್ರೋಲಿ ಪ್ರದೇಶದ ನೈಟ್ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದರು. ಸತತ ಓದಿನಿಂದ ಅವರು 12ನೇ ತರಗತಿಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು. ನಂತರ ಓದು ಮುಂದುವರಿಸಿದ ಪ್ರತೀಕ್ಷಾ ಸೈಕಾಲಜಿಯಲ್ಲಿ (ಮನೋವಿಜ್ಞಾನ) ಪದವಿ ಮುಗಿಸಿದರು. ಓದು, ಕೆಲಸ ಮತ್ತು ಮಾತೃತ್ವವನ್ನು ಒಟ್ಟಿಗೆ ನಿಭಾಯಿಸುವುದು ದೊಡ್ಡ ಸವಾಲಾಗಿದ್ದರು, ಸೋಲೊಪ್ಪಿಕೊಳ್ಳದೆ ಮುನ್ನಡೆದರು. ಅವರ ಶೈಕ್ಷಣಿಕ ಅರ್ಹತೆ ಹೆಚ್ಚುತ್ತಿದ್ದಂತೆ, ಅವರಿಗೆ ಅವಕಾಶಗಳು ನಿಧಾನವಾಗಿ ತೆರೆದುಕೊಂಡವು. ಪ್ರತೀಕ್ಷಾ ಅವರಿಗೆ ಮೊದಲು ಪೌರಕಾರ್ಮಿಕಳ ಹುದ್ದೆಯಿಂದ ಮೆಸೆಂಜರ್ ಹುದ್ದೆಗೆ ಬಡ್ತಿ ಸಿಕ್ಕಿತು. ಪದವಿ ಪೂರ್ಣಗೊಳಿಸಿದ ನಂತರ, ಅವರು 'ಕ್ಲರ್ಕ್-ಕಮ್-ಕ್ಯಾಷಿಯರ್' ಆದರು. ಅಲ್ಲಿಗೆ ಅವರು ತೃಪ್ತರಾಗಲಿಲ್ಲ.
ಎರಡನೇ ಅವಕಾಶ, ಮರು ಮದುವೆ
ಪ್ರತೀಕ್ಷಾ 1993ರಲ್ಲಿ ಪ್ರಮೋದ್ ಎಂಬುವರನ್ನು ಮರುಮದುವೆಯಾದರು. ಪ್ರಮೋದ್ ಬಳಿಕ ಪ್ರತೀಕ್ಷಾ ಅವರಿಗೆ ದೊಡ್ಡ ಬೆಂಬಲವಾಗಿ ನಿಂತರು. ʼʼನಾವಿಬ್ಬರೂ ಐಐಟಿ ಪೊವಾಯಿಯಲ್ಲಿ ಕೆಲಸ ಮಾಡುತ್ತಿದ್ದೆವು. ಅವರು ನನಗೆ ಮದುವೆಯ ಪ್ರಸ್ತಾಪವಿಟ್ಟಾಗ, ನಾನು ಮೂರು ಷರತ್ತುಗಳ ಮೇಲೆ ಮಾತ್ರ ಒಪ್ಪಿಕೊಂಡೆ. ಮೊದಲನೆಯದಾಗಿ, ನನ್ನ ಪದವಿ ಮುಗಿದ ನಂತರವೇ ನಾನು ಮದುವೆಯಾಗುತ್ತೇನೆ. ಎರಡನೆಯದಾಗಿ, ಅವರು ನನ್ನ ಮಗನನ್ನು ಸ್ವೀಕರಿಸಬೇಕು. ಮೂರನೆಯದಾಗಿ, ಅವರು ಕೂಡ ತಮ್ಮ ಪದವಿಯನ್ನು ಪೂರ್ಣಗೊಳಿಸಬೇಕು. ಆ ಮೂರೂ ಷರತ್ತುಗಳನ್ನು ಅವರು ಒಪ್ಪಿಕೊಂಡರುʼʼ ಎಂದು ಪ್ರತೀಕ್ಷಾ ವಿವರಿಸಿದರು.
ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಟ್ರೈನಿ ಆಫೀಸರ್ ಆಗಿ ಪ್ರತೀಕ್ಷಾ ಆಯ್ಕೆಯಾದರು. ವರ್ಷಗಳು ಉರುಳಿದಂತೆ, ಅವರು ಸಂಸ್ಥೆಯ ಉನ್ನತ ಹಂತಗಳನ್ನು ಏರುತ್ತಾ ಉಪ ಜನರಲ್ ಮ್ಯಾನೇಜರ್ (DGM ನಂತಹ ಹಿರಿಯ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಂಡರು. ಅಂತಿಮವಾಗಿ 2022ರ ಜೂನ್‌ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ (AGM) ಹುದ್ದೆಯನ್ನು ಅಲಂಕರಿಸಿದರು.

ಒಂದು ಕಾಲದಲ್ಲಿ ತಾವು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದ ಅದೇ ಬ್ಯಾಂಕ್‌ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ನಿರ್ವಹಿಸಿದರು. ಪ್ರತೀಕ್ಷಾ ಅವರ ಈ ಪಯಣವು ಅಷ್ಟು ಸುಲಭವಾಗಿರಲಿಲ್ಲ. ಎಲ್ಲ ನೋವು-ಸೋಲು, ಸವಾಲುಗಳನ್ನು ದಾಟಿ ದಿಟ್ಟ ಮಹಿಳೆಯಾಗಿ ಅವರು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಕಷ್ಟದಲ್ಲಿದ್ದಾಗ ಧೃತಿಗೆಡದೆ ಹೋರಾಡುವ ಮನೋಭಾವಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ. ಜೀವನದಲ್ಲಿ ಸನ್ನಿವೇಶಗಳು ಎಷ್ಟೇ ಕಠಿಣವಾಗಿದ್ದರೂ, ಬಡತನ ಎಷ್ಟೇ ಕಾಡಿದರೂ ಸತತ ಪರಿಶ್ರಮ, ದೃಢಸಂಕಲ್ಪ ಹಾಗೂ ಶಿಕ್ಷಣದ ಮೇಲಿನ ನಂಬಿಕೆ ಇದ್ದರೆ ಯಾವುದೇ ವ್ಯಕ್ತಿ ಶೂನ್ಯದಿಂದ ಎಂತಹ ದೊಡ್ಡ ಸಾಮ್ರಾಜ್ಯವನ್ನಾದರೂ ಕಟ್ಟಬಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಸದ್ಯ ಅವರು ನಿವೃತ್ತಿ ಹೊಂದಿದ್ದಾರೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.