ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಾಖಲೆ ಬರೆಯಲಿರುವ ಎಲ್ ನಿನೋ? ಭಾರತದಲ್ಲಿ ಮಳೆ ಕೊರತೆ ಹೆಚ್ಚುವ ಸಾಧ್ಯತೆ

El Nino: 2026ರಲ್ಲಿ ರೂಪುಗೊಳ್ಳುತ್ತಿರುವ ಎಲ್ ನಿನೋ ಆಧುನಿಕ ಇತಿಹಾಸದಲ್ಲೇ ಅತ್ಯಂತ ಪ್ರಬಲವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ಮುಂಗಾರು ದುರ್ಬಲವಾಗುವ ಸಾಧ್ಯತೆ ಹೆಚ್ಚಿದ್ದು, ಮಳೆ ಕೊರತೆಯಿಂದ ಕೃಷಿ ಹಾಗೂ ಬೀಜ ಬಿತ್ತನೆ ಮೇಲೆ ಈಗಾಗಲೇ ಪರಿಣಾಮ ಕಾಣಿಸುತ್ತಿದೆ.

ಭಾರತಕ್ಕೆ ಎಲ್ ನಿನೋ ಶಾಕ್; ಕೃಷಿಗೆ ಕಾದಿದೆಯೇ ಸಂಕಷ್ಟ?

ಎಐ ರಚಿತ ಚಿತ್ರ -

Profile
Sushmitha Jain Jul 16, 2026 9:02 AM

ನವದೆಹಲಿ, ಜುಲೈ 16: ವಿಶ್ವದ ಹವಾಮಾನ ತಜ್ಞರಲ್ಲಿ ಆತಂಕ ಮೂಡಿಸಿರುವ ಎಲ್ ನಿನೋ (El Nino) ಈ ಬಾರಿ ಆಧುನಿಕ ಇತಿಹಾಸದಲ್ಲೇ ಅತ್ಯಂತ ಪ್ರಬಲವಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನಗಳು ಸೂಚಿಸಿವೆ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (NOAA) ಎಲ್ ನಿನೋ ಪರಿಸ್ಥಿತಿ ಈಗಾಗಲೇ ರೂಪುಗೊಂಡಿದೆ ಎಂದು ದೃಢಪಡಿಸಿದ್ದು, 2026ರ ಅಂತ್ಯದ ವೇಳೆಗೆ ಇದು ಮತ್ತಷ್ಟು ತೀವ್ರಗೊಂಡು ಉತ್ತರ ಗೋಳಾರ್ಧದ ಚಳಿಗಾಲದಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.

ಹವಾಮಾನ ವಿಜ್ಞಾನಿ ಝೀಕ್ ಹೌಸ್‌ಫಾದರ್ (Zeke Hausfather) 14 ಋತುಮಾನದ ಹವಾಮಾನ ಮಾದರಿಗಳ 667 ಮುನ್ಸೂಚನೆಗಳನ್ನು ವಿಶ್ಲೇಷಿಸಿದ್ದು, ಈ ಬಾರಿ ಎಲ್ ನಿನೋ 1982–83, 1997–98 ಹಾಗೂ 2015–16ರ ದಾಖಲೆಯ ಎಲ್ ನಿನೋಗಳನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅಧ್ಯಯನದ ಪ್ರಕಾರ, ನಿನೋ 3.4 (Nino 3.4) ಸಮುದ್ರ ಮೇಲ್ಮೈ ತಾಪಮಾನ ವ್ಯತ್ಯಾಸವು 3.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು. ಇದು 2015–16ರಲ್ಲಿ ದಾಖಲಾಗಿದ್ದ 2.75 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು. ಅಧ್ಯಯನದಲ್ಲಿನ 90%ಕ್ಕೂ ಹೆಚ್ಚು ಮಾದರಿಗಳು ಈ ಬಾರಿ ಎಲ್ ನಿನೋ ಇದುವರೆಗೆ ದಾಖಲಾಗಿರುವ ಯಾವುದೇ ಎಲ್ ನಿನೋಗಿಂತ ಪ್ರಬಲವಾಗಲಿದೆ ಎಂದು ಸೂಚಿಸಿವೆ.

NOAAನ ದೈನಂದಿನ OISST v2.1 ದತ್ತಾಂಶದ ಪ್ರಕಾರ, ಜುಲೈ 13ರಂದು ನಿನೋ 2.2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಉಪಗ್ರಹ ದಾಖಲೆಗಳು ಆರಂಭವಾದ 1982ರ ಬಳಿಕ ಈ ಹಂತದಲ್ಲಿ ಇಷ್ಟೊಂದು ಹೆಚ್ಚಿನ ತಾಪಮಾನ ವ್ಯತ್ಯಾಸ ಎಂದಿಗೂ ದಾಖಲಾಗಿರಲಿಲ್ಲ. 1997ರಲ್ಲಿ ಇದೇ ಅವಧಿಯಲ್ಲಿ ಇದು 1.6 ಡಿಗ್ರಿ ಹಾಗೂ 2015ರಲ್ಲಿ 1.3 ಡಿಗ್ರಿಯಾಗಿತ್ತು.

ಭಾರತದ ಮೇಲೆ ಪರಿಣಾಮ ಏನು?

ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ 2026ರ ನೈಋತ್ಯ ಮುಂಗಾರು ಮಳೆ ದೀರ್ಘಾವಧಿಯ ಸರಾಸರಿ (LPA)ಯ 90% ಮಾತ್ರ ಇರಬಹುದು ಎಂದು ಅಂದಾಜಿಸಿದೆ. ಸಾಮಾನ್ಯವಾಗಿ ಎಲ್ ನಿನೋದ ಪರಿಣಾಮವನ್ನು ತಗ್ಗಿಸುವ ಇಂಡಿಯನ್ ಓಷನ್ ಡೈಪೋಲ್ (IOD) ಈ ಬಾರಿ ತಟಸ್ಥ ಸ್ಥಿತಿಯಲ್ಲೇ ಉಳಿಯುವ ಸಾಧ್ಯತೆ ಇರುವುದರಿಂದ, ಎಲ್ ನಿನೋದ ಪರಿಣಾಮ ಭಾರತದ ಮುಂಗಾರಿನ ಮೇಲೆ ಹೆಚ್ಚು ಕಾಣಿಸಬಹುದು ಎಂದು IMD ಹೇಳಿದೆ.
ಮಾನ್ಸೂನ್‌ನಲ್ಲಿ IMD ಹೊರಡಿಸುವ ರೆಡ್, ಆರೆಂಜ್, ಯೆಲ್ಲೋ ಅಲರ್ಟ್‌ನ ಅರ್ಥವೇನು?

ಈ ಆತಂಕ ಈಗಾಗಲೇ ಮಳೆಯ ಅಂಕಿಅಂಶಗಳಲ್ಲಿ ಗೋಚರಿಸಿದೆ. ಜೂನ್‌ನಲ್ಲಿ ದೇಶದಲ್ಲಿ LPAಗಿಂತ ಸುಮಾರು 40% ಕಡಿಮೆ ಮಳೆ ದಾಖಲಾಗಿದ್ದು, ಕಳೆದ 126 ವರ್ಷಗಳಲ್ಲೇ ಐದನೇ ಅತಿ ಒಣ ಜೂನ್ ತಿಂಗಳಾಗಿದೆ. ಜುಲೈ ತಿಂಗಳಲ್ಲಿಯೂ ಮಳೆ ಕೊರತೆ ಮುಂದುವರಿದಿದ್ದು, ಇದುವರೆಗೆ 19% ಕಡಿಮೆ ಮಳೆ ದಾಖಲಾಗಿದೆ. ಒಟ್ಟಾರೆ ಮುಂಗಾರು ಕೊರತೆ 23%ಕ್ಕೆ ಏರಿಕೆಯಾಗಿದೆ.

ಕೃಷಿಗೆ ಸಂಕಷ್ಟ

ಮುಂಗಾರು ದುರ್ಬಲವಾಗಿರುವ ಪರಿಣಾಮ ಖಾರೀಫ್ ಬೆಳೆಗಳ ಬಿತ್ತನೆಗೂ ಹೊಡೆತ ಬಿದ್ದಿದೆ. ಕೇಂದ್ರ ಕೃಷಿ ಸಚಿವಾಲಯದ ಮಾಹಿತಿ ಪ್ರಕಾರ, ಜುಲೈ 10ರವರೆಗೆ 531.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಖರೀಫ್ ಬೆಳೆ ಬಿತ್ತನೆಯಾಗಿದ್ದು, ಇದು ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ. ದೇಶದ ಪ್ರಮುಖ ಖಾರೀಫ್ ಬೆಳೆ ಆಗಿರುವ ಭತ್ತದ ಬಿತ್ತನೆ ಅತ್ಯಂತ ಕಳವಳಕಾರಿ ಸ್ಥಿತಿಯಲ್ಲಿದ್ದು, ಸಾಮಾನ್ಯ ಪ್ರದೇಶದ ಕೇವಲ 28% ಭಾಗದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಸುಮಾರು 9% ಕಡಿಮೆ.

ಹವಾಮಾನ ತಜ್ಞರ ಪ್ರಕಾರ, ಎಲ್ ನಿನೋ ಮುಂದಿನ ತಿಂಗಳಲ್ಲಿ ಮತ್ತಷ್ಟು ತೀವ್ರಗೊಂಡರೆ ಭಾರತ ಸೇ ವಿಶ್ವದ ಹಲವು ಭಾಗಗಳಲ್ಲಿ ಭಾರೀ ಬಿಸಿಗಾಳಿ, ಪ್ರವಾಹ, ಬರ ಹಾಗೂ ಅಸಹಜ ಹವಾಮಾನ ವೈಪರೀತ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ.