ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ನೋಟಿಸ್; ಪಕ್ಷದ ವಿರುದ್ಧ ಸಿಡಿದೆದ್ದ ನಾಯಕರ ಮೇಲೆ ಅನರ್ಹತೆಯ ತೂಗುಗತ್ತಿ

SC Notice to Rebel TMC MPs: ಪಕ್ಷಾಂತರಗೊಂಡು ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಕೂಟವನ್ನು ಸೇರಿರುವ ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದು ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕ ದೊಡ್ಡ ಗೆಲುವು ಎಂದು ಅಭಿಷೇಕ್‌ ಬ್ಯಾನರ್ಜಿ ಪರ ವಕೀಲರು ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರಿಗೆ ಸುಪ್ರೀಂ ನೋಟಿಸ್

ಸಾಂದರ್ಭಿಕ ಚಿತ್ರ -

Priyanka P
Priyanka P Aug 25, 2026 9:05 PM

ನವದೆಹಲಿ, ಆ. 25: ಪಕ್ಷಾಂತರಗೊಂಡು ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ (NDA) ಕೂಟವನ್ನು ಸೇರಿರುವ ತೃಣಮೂಲ ಕಾಂಗ್ರೆಸ್‌ನ (TMC) 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್‌ 25) ನೋಟಿಸ್ ಜಾರಿ ಮಾಡಿದೆ. ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ನಾಯಕ ಅಭಿಷೇಕ್ ಬ್ಯಾನರ್ಜಿ (Abhishek Banerjee) ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ನೋಟಿಸ್ ನೀಡಲಾಗಿದೆ. 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಪಕ್ಷದ ಅರ್ಜಿಗಳ ಕುರಿತು ಸ್ಪೀಕರ್ ಓಂ ಬಿರ್ಲಾ ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಟಿಎಂಸಿ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ವಿಚಾರಣೆ ಮಾಡಿ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಸ್ಪೀಕರ್‌ಗೆ ನೋಟಿಸ್ ನೀಡುವುದಾಗಿ ಈ ಹಿಂದೆ ಸೂಚಿಸಿತ್ತು. ಆದರೆ ನ್ಯಾಯಾಲಯದಲ್ಲಿ ಸ್ಪೀಕರ್ ಅವರ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕೋರಿಕೆಯ ಮೇರೆಗೆ ಹಾಗೆ ಮಾಡಲಿಲ್ಲ.

ಸ್ಪೀಕರ್ ಪರವಾಗಿ ತಾವು ಹಾಜರಾಗುವುದಾಗಿ ಮೆಹ್ತಾ ಹೇಳಿದರು. ಅನರ್ಹತೆ ಅರ್ಜಿಗಳ ಕುರಿತು ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲು ತಮಗೆ ಸೂಚನೆ ಇದೆ ಎಂದು ಅವರು ಹೇಳಿದರು. ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ಅರ್ಜಿಯಲ್ಲಿ, ಸಂಸದರ ವಿರುದ್ಧ ಪ್ರಾರಂಭಿಸಲಾದ ಅನರ್ಹತೆ ಪ್ರಕ್ರಿಯೆಯ ನಿರ್ಧಾರದಲ್ಲಿ ಉಂಟಾಗಿರುವ ವಿಳಂಬವನ್ನು ಪ್ರಶ್ನಿಸಿದ್ದಾರೆ.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಹೇಳಿಕೆ: ಪಕ್ಷದ ಬಂಡಾಯ ಶಾಸಕ ಮದನ್ ಮಿತ್ರಾಗೆ ಕಾನೂನು ಸಂಕಷ್ಟ

ನ್ಯಾಯಾಲಯದ ಪ್ರಕ್ರಿಯೆಗಳಿಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬ್ಯಾನರ್ಜಿ ಪರ ಹಾಜರಾಗಿದ್ದ ಕಲ್ಯಾಣ್ ಬ್ಯಾನರ್ಜಿ ಅವರು, ಇದು ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕ ದೊಡ್ಡ ಗೆಲುವಾಗಿದೆ. ನ್ಯಾಯಾಲಯವು ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತ್ರಿಪುರಾ ಮೂಲದ ರಾಜಕೀಯ ಪಕ್ಷವಾದ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜತೆ ಸೇರುವುದಾಗಿ ಅಥವಾ ವಿಲೀನಗೊಂಡಿರುವುದಾಗಿ ಟಿಎಂಸಿಯ 20 ಲೋಕಸಭಾ ಸಂಸದರು ಘೋಷಿಸಿ, ಸದನದಲ್ಲಿ ಪ್ರತ್ಯೇಕ ಮಾನ್ಯತೆ ಕೋರಿದ ನಂತರ ಟಿಎಂಸಿ ಸಂಸದೀಯ ಪಕ್ಷದೊಳಗೆ ಈ ವಿವಾದ ಭುಗಿಲೆದ್ದಿದೆ.

ಬಂಡಾಯ ಸಂಸದರನ್ನು ತರುವಾಯ ಸಂಸತ್ತಿನಲ್ಲಿ ಎನ್‌ಸಿಪಿಐ ಪಕ್ಷದ ಸದಸ್ಯರೆಂದು ಪರಿಗಣಿಸಲಾಗಿದೆ ಮತ್ತು ಎನ್‌ಡಿಎ ಸಭೆಗಳಲ್ಲಿ ಅವರು ಭಾಗವಹಿಸಿದ್ದಾರೆ.