ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಆಭರಣ ನಾಪತ್ತೆ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದಲ್ಲಿದ್ದ ಕಳ್ಳನನ್ನು ನೋಡಿ ಹೌಹಾರಿದ ಅಧಿಕಾರಿಗಳು
Jewellery Missing from Patient: ಸರ್ಕಾರಿ ಆಸ್ಪತ್ರೆಯಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿ ತಂದಿದೆ. ಯಾಕೆಂದರೆ ಆ ಆಭರಣಗಳನ್ನು ಕದ್ದಿದ್ದು ಯಾವುದೇ ಕಳ್ಳನಲ್ಲ, ಬದಲಿಗೆ ಶ್ವಾನ! ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರ್ಕಾರಿ ಆಸ್ಪತ್ರೆಯ ವಾರ್ಡ್‌ನಲ್ಲಿ ಓಡಾಡಿದ ಶ್ವಾನ -
ಭೋಪಾಲ್, ಆ. 25: ಸರ್ಕಾರಿ ಆಸ್ಪತ್ರೆಯಿಂದ (Government Hospital) ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಆಭರಣ ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿಯೊಂದು ಎದುರಾಗಿದೆ. ಯಾಕೆಂದರೆ ಆ ಆಭರಣಗಳನ್ನು ಕದ್ದಿದ್ದು ಯಾವುದೇ ವ್ಯಕ್ತಿಯಲ್ಲ, ಬದಲಿಗೆ ಶ್ವಾನ! ಮಧ್ಯ ಪ್ರದೇಶದಲ್ಲಿ (Madhya Pradesh) ಈ ಘಟನೆ ನಡೆದಿದೆ. ಮಂದ್ಸೌರ್‌ನ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ನಾಯಿಯೊಂದು ಒಳಗೆ ಬಂದು, ಮಹಿಳೆಯೊಬ್ಬರ ಚೀಲವನ್ನು ಬಾಯಿಯಲ್ಲಿ ಎತ್ತಿಕೊಂಡು ಓಡಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಚೀಲದಲ್ಲಿ ಚಿನ್ನಾಭರಣವಿತ್ತು.
ಆ ಬ್ಯಾಗ್ ನಹರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಾಯಂಪುರ್ ನಿವಾಸಿ ಲತಾಬಾಯಿ ವಾಲ್ಮೀಕಿ ಅವರಿಗೆ ಸೇರಿದ್ದು. ಅವರ ಮಗನ ತೋಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಭರಣ ಮತ್ತು ಸ್ವಲ್ಪ ಹಣವನ್ನು ಹೊಂದಿದ್ದ ಚೀಲವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು.
ಆಕೆಯ ದೂರಿನ ಪ್ರಕಾರ, ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವೆ ಬ್ಯಾಗ್ ಕಾಣೆಯಾಗಿದೆ. ಅದರಲ್ಲಿ ಬೆಳ್ಳಿ ಸೊಂಟದ ಪಟ್ಟಿ, ಬೆಳ್ಳಿಯ ಕಾಲ್ಗೆಜ್ಜೆ, ಚಿನ್ನದ ಮಂಗಳಸೂತ್ರ, ಎರಡು ಚಿನ್ನದ ಉಂಗುರಗಳು, ಚಿನ್ನದ ಮಣಿಗಳು, ಕಿವಿಯೋಲೆಗಳು, ಮೂಗುತಿ ಮತ್ತು ಬೆಳ್ಳಿಯ ಕಾಲ್ಬೆರಳ ಉಂಗುರಗಳು ಹಾಗೂ ಸುಮಾರು 2,000 ರುಪಾಯಿ ನಗದು ಇತ್ತು.
ಇಲ್ಲಿದೆ ವಿಡಿಯೊ:
🚨 STRAY DOG TURNS THIEF IN MANDSAUR!
— Ghar Ke Kalesh (@gharkekalesh) August 25, 2026
A stray dog was caught on CCTV carrying away a bag containing jewellery worth ₹4 lakh and nearly ₹2,000 cash from Mandsaur District Hospital.
Police traced its route and recovered everything. The belongings were later returned to the… pic.twitter.com/MjYAzeQfCH
ಬೆಲೆಬಾಳುವ ವಸ್ತುಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಬ್ಯಾಗ್ ಕಾಣೆಯಾಗಿದೆ ಎಂದು ಲತಾಬಾಯ್ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದರು. ನಾಪತ್ತೆಯಾದ ಆಭರಣಗಳ ಮೌಲ್ಯವನ್ನು ಪರಿಗಣಿಸಿ, ಪೊಲೀಸರು ತಕ್ಷಣವೇ ಶಂಕಿತ ಕಳ್ಳನಿಗಾಗಿ ಹುಡುಕಾಟ ಪ್ರಾರಂಭಿಸಿದರು. ಬ್ಯಾಗ್ ಅನ್ನು ಪತ್ತೆಹಚ್ಚುವ ಕಾರ್ಯವನ್ನು ಮುಖ್ಯಪೇದೆ ಅಜಯ್ ಸೋಲಂಕಿ ಅವರಿಗೆ ವಹಿಸಲಾಯಿತು.
ಆಸ್ಪತ್ರೆಯ ಆವರಣದಾದ್ಯಂತ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿದ್ದು, ಈ ವೇಳೆ ಅಚ್ಚರಿಗೊಳಗಾಗಿದ್ದಾರೆ. ಆ ವಿಡಿಯೊದಲ್ಲಿ ಶಸ್ತ್ರಚಿಕಿತ್ಸಾ ವಾರ್ಡ್‌ನಿಂದ ನಾಯಿಯೊಂದು ಲತಾ ಅವರ ಬ್ಯಾಗ್ ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡು ಬಂದಿದೆ. ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ಪೊಲೀಸರು ಶ್ವಾನದ ಚಲನವಲನವನ್ನು ಪತ್ತೆಹಚ್ಚಿದರು. ಆಸ್ಪತ್ರೆಯ ಕಾಂಪೌಂಡ್ ಪರಿಶೀಲಿಸಿದಾಗ ನಾಪತ್ತೆಯಾಗಿರುವ ಬ್ಯಾಗ್ ಗೊತ್ತಾಗಿದೆ.
ಬ್ಯಾಗ್ ಒಳಗಿದ್ದ ಆಭರಣಗಳು ಮತ್ತು ನಗದು ಹಾಗೇ ಇದ್ದವು. ಪರಿಶೀಲನೆ ಪೂರ್ಣಗೊಳಿಸಿದ ನಂತರ ಪೊಲೀಸರು, ಶ್ವಾನದ ಬಳಿಯಿಂದ ವಶಪಡಿಸಿಕೊಂಡ ಬೆಲೆಬಾಳುವ ವಸ್ತುಗಳನ್ನು ಅವರಿಗೆ ಹಿಂದಿರುಗಿಸಿದರು. ಬ್ಯಾಗ್ ಪತ್ತೆಹಚ್ಚಿ ಲಕ್ಷಾಂತರ ರುಪಾಯಿ ಮೌಲ್ಯದ ಆಭರಣಗಳನ್ನು ಸುರಕ್ಷಿತವಾಗಿ ತನಗೆ ಮರಳಿಸಿದ್ದಕ್ಕಾಗಿ ಪೊಲೀಸ್ ತಂಡಕ್ಕೆ ಮನೆಯವರು ಧನ್ಯವಾದ ಅರ್ಪಿಸಿದರು.
ಇದು ಆಸ್ಪತ್ರೆಯಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಸ್ಪತ್ರೆಯ ಬೀದಿ ನಾಯಿಯೊಂದು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಪ್ರವೇಶಿಸಿ, ಆವರಣದಲ್ಲಿ ಓಡಾಡಿ, ಬ್ಯಾಗ್ ಕಚ್ಚಿಕೊಂಡು ಹೋಗಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎದ್ದಿದೆ.