ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

cow slaughter ban: ತಮಿಳುನಾಡಿನಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸಿ ಮದ್ರಾಸ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣ್ ಅವರಿದ್ದ ದ್ವಿಪೀಠವು ಮಹತ್ವದ ತೀರ್ಪೊಂದನ್ನು ನೀಡಿತ್ತು.

ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 1, 2026 12:35 PM

ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸಿ ಮದ್ರಾಸ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ( Supreme Court) ಮೇಲ್ಮನವಿ ಸಲ್ಲಿಸಿದೆ. ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958 ರ ಸೆಕ್ಷನ್ 4 ರ ಅಡಿಯಲ್ಲಿ ಅನುಮತಿಸಲಾದ ಪ್ರಕರಣಗಳನ್ನು ಹೊರತುಪಡಿಸಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಆದೇಶವನ್ನು ಮದ್ರಾಸ್ ಹೈಕೋರ್ಟ್ ಹೊರಡಿಸಿತ್ತು.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣ್ ಅವರಿದ್ದ ದ್ವಿಪೀಠವು ಮಹತ್ವದ ತೀರ್ಪೊಂದನ್ನು ನೀಡಿತ್ತು. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲದೆ, ವರ್ಷದ "ಯಾವುದೇ ದಿನವೂ" ರಾಜ್ಯದಲ್ಲಿ ಹಸು ಅಥವಾ ಕರುಗಳನ್ನು ಕೊಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿರುವುದನ್ನು ತಡೆಯಬೇಕು ಎಂದು ಕೋರಿ 'ಇಂದು ಮಕ್ಕಳ್ ಕಚ್ಚಿ' ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್‌ ಈ ಆದೇಶ ಪ್ರಕಟಿಸಿತ್ತು.

ಇದೀಗ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಹೈಕೋರ್ಟ್ ತನ್ನ ವ್ಯಾಪ್ತಿಯನ್ನು ಮೀರಿ ಸಂಪೂರ್ಣ ನಿಷೇಧ ಹೇರಿದೆ ಎಂದು ವಾದಿಸಿದೆ. ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ, 10 ವರ್ಷಕ್ಕಿಂತ ಮೇಲ್ಪಟ್ಟ, ಕೆಲಸ ಮಾಡಲು ಅಥವಾ ತಳಿ ಅಭಿವೃದ್ಧಿಗೆ ಯೋಗ್ಯವಲ್ಲದ ಮತ್ತು ಅದಕ್ಕೆ ಸಂಬಂಧಿಸಿದ ಸಕ್ಷಮ ಅಧಿಕಾರಿಯಿಂದ ಅಧಿಕೃತ ಪ್ರಮಾಣಪತ್ರ ಪಡೆದ ಹಸುಗಳನ್ನು ಮಾತ್ರ ವಧೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಹೈಕೋರ್ಟ್ ಈ ಕಾಯ್ದೆಯ ನಿಬಂಧನೆಗಳ ವ್ಯಾಪ್ತಿಯನ್ನು ಮೀರಿ, ಸಂಪೂರ್ಣವಾಗಿ ಗೋಹತ್ಯೆಯನ್ನು ನಿಷೇಧಿಸುವಂತೆ ಆದೇಶಿಸಿದೆ ಎಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ತಿಳಿಸಿದೆ.

ಮದ್ರಾಸ್ ಹೈಕೋರ್ಟ್ ಸಂವಿಧಾನದ ವಿಧಿ 48 ಅನ್ನು ಉಲ್ಲೇಖಿಸಿ, ಗೋವುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಭಾರ ಹೊರುವ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸುತ್ತದೆ. ಇದರೊಂದಿಗೆ, ಬಕ್ರೀದ್ ಹಬ್ಬದ ದಿನದಂದು ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಹೈಕೋರ್ಟ್ ನೆನಪಿಸಿತ್ತು. ಹಲವು ಮುಸ್ಲಿಮರು ಬಕ್ರೀದ್ ದಿನದಂದು ಹಸುವನ್ನು ಬಲಿ ಕೊಡುವುದಿಲ್ಲ ಮತ್ತು ಇದು ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸಲು ಕಡ್ಡಾಯವಾದ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಹೈಕೋರ್ಟ್ ಪೀಠವು ತನ್ನ ಆದೇಶದಲ್ಲಿ ತಿಳಿಸಿತ್ತು.