ʻಭಾಗ್ಯವಂತರುʼ ಸೀರಿಯಲ್ ಮೂಲಕ ಕಿರುತೆರೆಗೆ ಮರಳಿದ ನಟ ಸುಚೇಂದ್ರ ಪ್ರಸಾದ್; ಜನನಿಯಾಗಿ ಮಿಂಚಲಿದ್ದಾರೆ ನಟಿ ತನ್ವಿ ರಾವ್
ಸನ್ ಉದಯ ವಾಹಿನಿಯಲ್ಲಿ ಜುಲೈ 6 ರಿಂದ ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 7.30 ಕ್ಕೆ ಹೊಸ ಕೌಟುಂಬಿಕ ಧಾರಾವಾಹಿ ‘ಭಾಗ್ಯವಂತರು’ ಪ್ರಸಾರವಾಗಲಿದೆ. ಬದುಕಿನಲ್ಲಿ ಹಲವು ಮಹತ್ವಾಕಾಂಕ್ಷೆಯ ಕನಸುಗಳನ್ನು ಹೊಂದಿರುವ ಜನನಿ, ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿಯನ್ನು ವರಿಸಿದ ನಂತರ ವೃತ್ತಿಜೀವನ ಹಾಗೂ ಕೌಟುಂಬಿಕ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಇದರ ಕಥಾಹಂದರವಾಗಿದೆ.
-
ಬೆಂಗಳೂರು: ಇತ್ತೀಚೆಗಷ್ಟೇ ʻಮೂಗುತಿ ಮಲ್ಲಿʼ ಮತ್ತು ʻಮಹಾಲಕ್ಷ್ಮೀ ಮದುವೆʼಯಂತಹ ಭಿನ್ನ ಕಥಾಹಂದರದ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಸನ್ ಉದಯ ವಾಹಿನಿ, ಈಗ ಮತ್ತೊಂದು ಕೌಟುಂಬಿಕ ಕಥಾನಕವನ್ನು ಹೊತ್ತು ತರುತ್ತಿದೆ. ಹುಟ್ಟಿದ ಮನೆ ಹಾಗೂ ಮೆಟ್ಟಿದ ಮನೆ ಎರಡನ್ನೂ ಬೆಳಗುವ ಹೆಣ್ಣುಮಗಳ ಕಥೆ ಹೊಂದಿರುವ ʻಭಾಗ್ಯವಂತರುʼ ಎಂಬ ಹೊಸ ಧಾರಾವಾಹಿ ಇದೇ ಜುಲೈ 6 ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7.30 ಕ್ಕೆ ಪ್ರಸಾರವಾಗಲು ಸಜ್ಜಾಗಿದೆ.
ಶಿಕ್ಷಣ ಮತ್ತು ಮಹತ್ವಾಕಾಂಕ್ಷೆಯ ಕಥೆ
ಈ ಧಾರಾವಾಹಿಯ ಕೇಂದ್ರಬಿಂದು ಜನನಿ, ತನ್ನ ತಂದೆ ಶ್ಯಾಮಸುಂದರ್ ಅವರ ಮುದ್ದಿನ ಮಗಳು. ತಂದೆಯ ಕನಸಿನಂತೆ ಉನ್ನತ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೊಡ್ಡ ಕಂಪನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ (MD) ಆಗಬೇಕೆಂಬ ಧ್ಯೇಯ ಹೊಂದಿರುವ ಮಹತ್ವಾಕಾಂಕ್ಷಿ ಹೆಣ್ಣುಮಗಳು. ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಿರುವ ಈಕೆಯನ್ನು, ಮಂಡ್ಯದ ಪ್ರತಿಷ್ಠಿತ ಹಾಗೂ ಶ್ರೀಮಂತ ಕುಟುಂಬದ ಗುಣಶೇಖರ್ ನಾಯಕ್ ಅವರ ಕೊನೆಯ ಸಹೋದರ 'ಶಕ್ತಿ'ಯೊಂದಿಗೆ ವಿವಾಹ ಮಾಡಲಾಗುತ್ತದೆ.
ನಾಲ್ಕನೇ ಸೊಸೆಯಾಗಿ ಜನನಿ
ಶಕ್ತಿಯ ಅಣ್ಣ ಗುಣಶೇಖರನ ಮನೆಯಲ್ಲಿ ಈಗಾಗಲೇ ಮೂವರು 'ಡಬಲ್ ಡಿಗ್ರಿ' ಓದಿರುವ ಸುಶಿಕ್ಷಿತ ಸೊಸೆಯಂದಿರಿದ್ದು, ಇಡೀ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುತ್ತಾರೆ. ಇಂತಹ ಮನೆಗೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಜನನಿ ಕಾಲಿಡುತ್ತಾಳೆ. ಆದರೆ, ಗಂಡನ ಮನೆಯ ಜವಾಬ್ದಾರಿಗಳ ಜೊತೆಗೆ ತನ್ನ ವೃತ್ತಿಜೀವನದ ಕನಸುಗಳನ್ನು ಸರಿದೂಗಿಸಿಕೊಂಡು ಹೋಗುವುದು ಆಕೆಗೆ ದೊಡ್ಡ ಸವಾಲಾಗುತ್ತದೆ. ಈ ಸವಾಲನ್ನು ಜನನಿ ಹೇಗೆ ಎದುರಿಸುತ್ತಾಳೆ ಮತ್ತು ಎರಡು ಕುಟುಂಬಗಳಿಗೆ ಹೇಗೆ ಭಾಗ್ಯವಂತೆಯಾಗುತ್ತಾಳೆ ಎಂಬುದು ಈ ಧಾರಾವಾಹಿಯ ಮುಖ್ಯ ಕಥಾಹಂದರ.
ತಾರಾಗಣದಲ್ಲಿ ಘಟಾನುಘಟಿ ಕಲಾವಿದರು
ʻಭಾಗ್ಯವಂತರುʼ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ತನ್ವಿ ರಾವ್ (ಜನನಿ) ಮತ್ತು ವಿಕಾಸ್ (ಶಕ್ತಿ) ನಟಿಸುತ್ತಿದ್ದಾರೆ. ಇವರೊಂದಿಗೆ ಸ್ಯಾಂಡಲ್‌ವುಡ್‌ನ ಹೆಸರಾಂತ ಕಲಾವಿದರಾದ ಸುಚೇಂದ್ರ ಪ್ರಸಾದ್, ಶೋಭರಾಜ್ ಹಾಗೂ ಆರ್.ಕೆ. ಚಂದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುರೇಶ್ ರೈ, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಮಧುಸಾಗರ, ಲಕ್ಷ್ಮೀ ಹೆಗ್ಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್ ಹಾಗೂ ಜಯಲಕ್ಷ್ಮೀ ಪಟೇಲ್ ಒಳಗೊಂಡ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ʻಮಹಾಲಕ್ಷ್ಮೀ ಮದುವೆʼ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್; ಸನ್ ಉದಯ ಟಿವಿಗೆ ನಟಿ ಅಮೂಲ್ಯ ಗೌಡ ಗ್ರ್ಯಾಂಡ್ ಎಂಟ್ರಿ
ಎ.ಎಸ್.ಎಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮಣ ಬಂಗಾರು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಸಂಪೃಥ್ವಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಶುಭ್ರ ಪುತ್ರಕಳ ಅವರ ಕಥೆ-ಚಿತ್ರಕಥೆಗೆ, ಸುಮಾ ಶಿಂಗ್ನಳ್ಳಿ ಸಂಭಾಷಣೆ ಬರೆದಿದ್ದಾರೆ. ಗೌತಮ್ ಕೃಷ್ಣನ್ ಅವರ ಛಾಯಾಗ್ರಹಣ ಈ ಧಾರಾವಾಹಿಗಿದೆ. ತಂದೆ-ಮಗಳ ನಡುವಿನ ಬಾಂಧವ್ಯದ ಜೊತೆಗೆ, ಮದುವೆಯ ನಂತರವೂ ಮಹಿಳೆಯರ ಕನಸುಗಳು ಮತ್ತು ಅವರ ಮಹತ್ವಾಕಾಂಕ್ಷೆಗಳು ಸಮಾಜದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ಧಾರಾವಾಹಿ ಮನಮುಟ್ಟುವಂತೆ ವಿವರಿಸಲಿದೆಯಂತೆ. ಇದೇ ಸೋಮವಾರದಿಂದ (ಜುಲೈ 6) ರಾತ್ರಿ 7.30ಕ್ಕೆ 'ಭಾಗ್ಯವಂತರು' ಸನ್ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.