ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Treat: ತಿರುಪತಿಗೆ ಬಾಂಬ್ ಬೆದರಿಕೆ: ಐಎಸ್‌ಐ, ಎಲ್‌ಟಿಟಿಇ ಉಗ್ರಗಾಮಿಗಳ ಸಂಚಿನ ಶಂಕೆ

ತಿರುಪತಿ ತಿಮ್ಮಪ್ಪ ದೇವಸ್ಥಾನ ಬಾಂಬ್ ಬೆದರಿಕೆ ಕರೆ ಬಂದಿದ್ದು, ಐಎಸ್‌ಐ ಹಾಗೂ ತಮಿಳುನಾಡು ಮೂಲದ ಎಲ್‌ಟಿಟಿಇನ ಮಾಜಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆಗೆ ಭೀತಿ ಎದುರಾಗಿದೆ.

ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಬಂತು ಬಾಂಬ್ ಬೆದರಿಕೆ ಕರೆ

ತಿರುಪತಿ ದೇಗುಲ -

Profile Sushmitha Jain Oct 3, 2025 9:53 PM

ಅಮರಾವತಿ: ಆಂಧ್ರ ಪ್ರದೇಶದ (Andra Pradesh) ತಿರುಪತಿ ತಿರುಮಲ ದೇವಸ್ಥಾನಕ್ಕೆ(Tirupati Temple) ಬಾಂಬ್‌ ಬೆದರಿಕೆ(Bomb Treat) ಬಂದಿದ್ದು, ಮತ್ತೊಮ್ಮೆ ಅಲ್ಲಿ ಬಿಗುವಿನ ವಾತಾವಾರಣ ಸೃಷ್ಟಿಯಾಗಿದೆ. ನಿರಂತರವಾಗಿ ತಿರುಪತಿ ದೇಗುಲಕ್ಕೆ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನ ಸಮೀಪದ 3 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದೀಗ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಐಎಸ್‌ಐ ಹಾಗೂ ತಮಿಳುನಾಡು ಮೂಲದ ಎಲ್‌ಟಿಟಿಇನ ಮಾಜಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆದರಿಕೆ ಕರೆ ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಗುಪ್ತಚರ ಇಲಾಖೆ  ಬಾಂಬ್‌ ಸ್ಫೋಟದ ಸಾಧ್ಯತೆಯ ಕುರಿತು ಎಚ್ಚರಿಕೆಯ ಮಾಹಿತಿ ನೀಡಿದ್ದು, ದೇಗುಲದ ಸುತ್ತಲೂ ಮುತ್ತಲೂ ಹೈ ಅಲರ್ಟ್ ಘೋಷಿಸಲಾಗಿದೆ.

ತಮಿಳುನಾಡಿನಲ್ಲಿ ಸಕ್ರಿಯವಾಗಿರುವ  ಐಎಸ್‌ಐ ಮತ್ತು ಎಲ್‌ಟಿಟಿಇನ ಮಾಜಿ ಉಗ್ರರಿಂದ ಈ ಸಂಚು ನಡೆದಿರಬಹುದು ಎಂಬ ಆರೋಪ ಕೇಳಿಬಂದಿದ್ದು, ಗುಪ್ತಚಾರ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಆರ್‌ಡಿಎಕ್ಸ್ ಸ್ಪೋಟಕಗಳನ್ನು ಇಟ್ಟಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಪೊಲೀಸರ ಕೈಗೆ ಎರಡು ಅನುಮಾನಸ್ಪದ ಪತ್ರಗಳು ಸಿಕ್ಕಿದ್ದು, ಪರಿಶೀಲನೆ ನಡೆಸಿರುವ ಪೊಲೀಸರು ಆ ಪತ್ರದಲ್ಲಿ  ತಿರುಪತಿಯ ಪ್ರಮುಖ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್‌ ಸ್ಫೋಟದ ಬೆದರಿಕೆ ಇರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ದೊರಕಿದ ಕೂಡಲೇ ಬಾಂಬ್‌ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಪರಿಶೀಲನೆ ನಡೆಸಿವೆ.

ಮುಖ್ಯ ಸ್ಥಳಗಳಲ್ಲಿ ತೀವ್ರ ತಪಾಸಣೆ

ಭದ್ರತಾ ಸಿಬ್ಬಂದಿ ತಿರುಪತಿಯ ಆರ್‌ಟಿಸಿ ಬಸ್ ನಿಲ್ದಾಣ, ಶ್ರೀನಿವಾಸಂ, ವಿಷ್ಣುನಿವಾಸಂ, ಕಪಿಲತೀರ್ಥಂ ಮತ್ತು ಗೋವಿಂದರಾಜುಲ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದಾರೆ. ನ್ಯಾಯಾಧೀಶರ ಮನೆ ಹಾಗೂ ನ್ಯಾಯಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನೂ ಕೂಡ ಮುನ್ನೆಚ್ಚರಿಕೆಯ ಭಾಗವಾಗಿ ಪರಿಶೀಲಿಸಲಾಗಿದೆ.

ಈ ಸುದ್ದಿಯನ್ನು ಓದಿ: Physical Abuse: ಅತ್ಯಾಚಾರ ಪ್ರಕರಣದಲ್ಲಿ ಖ್ಯಾತ ನಟ, ನಿರ್ದೇಶಕ ಉತ್ತರ್ ಕುಮಾರ್ ಅರೆಸ್ಟ್‌

ದೇವಾಲಯ ಭದ್ರತೆ ಬಿಗಿತ

ತಿರುಪತಿಯ ಧಾರ್ಮಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ತಿರುಮಲ, ಶ್ರೀಕಾಳಹಸ್ತಿ ಹಾಗೂ ತಿರುಚನೂರು ಪದ್ಮಾವತಿ ಅಮ್ಮವಾರಿ ದೇವಸ್ಥಾನಗಳಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ.  ಇನ್ನು ಬಾಂಬ್‌ ನಿಷ್ಕ್ರಿಯ ದಳ ಹಾಗೂ ಪೊಲೀಸರು ನಗರವ್ಯಾಪಿ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಶಾಂತತೆಯನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ. ಇಲ್ಲಿಯವರೆಗೂ ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲದಿದ್ದರೂ, ಮುಂದಿನ ಆದೇಶದವರೆಗೆ ಭದ್ರತಾ ಕ್ರಮಗಳು  ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.