ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಳಪತಿ ವಿಜಯ್‌ಯ ಟಿವಿಕೆಗೆ ‘ಸೀಟಿ’, ಕಮಲ್‌ ಹಾಸನ್‌ನ ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ನೀಡಿದ ಚುನಾವಣಾ ಆಯೋಗ

TVK: 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷ ಏಪ್ರಿಲ್–ಮೇಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸ್ಪರ್ಧಿಸುವ ರಾಜಕೀಯ ಪಕ್ಷಗಳಿಗೆ ಅಧಿಕೃತ ಚುನಾವಣಾ ಚಿಹ್ನೆಗಳನ್ನು ನಿಗದಿ ಮಾಡಿದೆ.

ಟಿವಿಕೆ ಚುನಾವಣಾ ಚಿಹ್ನೆ ಇದು

ವಿಜಯ್ - ಕಮಲ್ ಹಾಸನ್ (ಸಂಗ್ರಹ ಚಿತ್ರ) -

Profile
Sushmitha Jain Jan 22, 2026 9:45 PM

ಚೆನ್ನೈ, ಜ. 22: 234 ಸದಸ್ಯ ಬಲದ ತಮಿಳುನಾಡು (Tamil Nadu) ವಿಧಾನಸಭೆಗೆ ಇದೇ ವರ್ಷ ಎಪ್ರಿಲ್-ಮೇಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಚುನಾವಣಾ ಆಯೋಗವು ಪಕ್ಷಗಳಿಗೆ ಚಿಹ್ನೆಯನ್ನು ನಿಗದಿ ಮಾಡಿದೆ. ನಟ-ರಾಜಕಾರಣಿ ವಿಜಯ್ (Vijay) ಸ್ಥಾಪಿಸಿದ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷಕ್ಕೆ ಚುನಾವಣಾ ಆಯೋಗವು ಸೀಟಿ (Whistle)ಯನ್ನು ಅಧಿಕೃತ ಚುನಾವಣಾ ಚಿಹ್ನೆಯಾಗಿ ನೀಡಿದೆ. ಅದೇ ವೇಳೆ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮೈಯಂ (Makkal Needhi Maiam) ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಚಿಹ್ನೆಯನ್ನು ಮಂಜೂರು ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗ, “ಸಂಬಂಧಿತ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ನಿಲ್ಲಿಸದ ಕ್ಷೇತ್ರಗಳಲ್ಲಿ ಈ ಚಿಹ್ನೆಗಳು ಇತರ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲು ಲಭ್ಯ” ಎಂದು ತಿಳಿಸಿದೆ. “ಸಂಬಂಧಿತ ಪಕ್ಷಗಳಿಗೆ ನೀಡಲಾಗಿರುವ ಈ ಚಿಹ್ನೆಗಳು ಮುಂದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತವೆ. ಚುನಾವಣೆ ಮುಗಿದ ಬಳಿಕ, ಆ ಪಕ್ಷಗಳು ಈ ಚಿಹ್ನೆಗಳನ್ನು ಮುಂದುವರಿಸಲು ಅವಕಾಶ ಇರುವುದಿಲ್ಲ” ಎಂದು ಆಯೋಗ ಸ್ಪಷ್ಟಪಡಿಸಿದೆ.

ಎಎನ್‌ಐ ಸುದ್ದಿಸಂಸ್ಥೆಯ ಎಕ್ಸ್‌ ಪೋಸ್ಟ್‌:



2024ರ ಫೆಬ್ರವರಿಯಲ್ಲಿ ವಿಜಯ್ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಆ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ರ‍್ಯಾಲಿಗಳನ್ನು ನಡೆಸಿದ್ದಾರೆ. 2025ರ ಸೆಪ್ಟೆಂಬರ್ 27ರಂದು ಕರೂರ್‌ನಲ್ಲಿ ಆಯೋಜನೆಗೊಂಡಿದ್ದ ಟಿವಿಕೆ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಜನವರಿ 12ರಂದು ಮೊದಲ ಬಾರಿಗೆ ಸಿಬಿಐ ಮುಂದೆ ಹಾಜರಾಗಿದ್ದ ವಿಜಯ್, ಜನವರಿ 19ರಂದು ಸತತ ಆರು ತಾಸು ವಿಚಾರಣೆ ಎದುರಿಸಿದ್ದರು.

ಮುಂಬೈಯ ಮುಂದಿನ ಮೇಯರ್ ಪಟ್ಟ ಮಹಿಳೆಗೆ: ಕೋಟಾ ಲಾಟರಿ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ

ಇನ್ನು ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಹಲವು ಭಾಷಣಗಳಲ್ಲಿ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ತೀವ್ರ ಟೀಕೆಗಳನ್ನು ನಡೆಸಿದ್ದಾರೆ. "ಬಿಜೆಪಿಯನ್ನು ಸೈದ್ಧಾಂತಿಕ ಶತ್ರು ಹಾಗೂ ಡಿಎಂಕೆಯನ್ನು ರಾಜಕೀಯ ಶತ್ರು ಎಂದು ನಮ್ಮ ಪಕ್ಷ ಪರಿಗಣಿಸುತ್ತದೆʼʼ ಎಂದು ವಿಜಯ್ ಘೋಷಿಸಿದ್ದಾರೆ.

ಈ ನಡುವೆ ದ್ರಾವಿಡ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಒಳಗೊಂಡ ಯಾವುದೇ ಮೈತ್ರಿ ಕೂಟಕ್ಕೂ ಸೇರ್ಪಡೆಯಾಗುವುದಿಲ್ಲ ಎಂದು ಟಿವಿಕೆ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಪಕ್ಕಾ ಮಾಡಿಕೊಂಡಿದೆ. ಈ ನಡುವೆ, ವಿಜಯ್ ಅವರ ಇತ್ತೀಚಿನ ಸಿನಿಮಾ ‘ಜನ ನಾಯಗನ್’ ಸೆನ್ಸಾರ್ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಸದ್ಯ ಪ್ರಕರಣ ಮದ್ರಾಸ್ ಹೈಕೋರ್ಟ್ ಅಂಗಳದಲ್ಲಿದೆ.