ತಿರುಪತಿಯಿಂದ ಸೀದಾ ʻದಳಪತಿʼ ವಿಜಯ್ ಮನೆಗೆ ಬಂದ ನಟಿ ತ್ರಿಷಾ ಕೃಷ್ಣನ್; ಹುಟ್ಟುಹಬ್ಬಕ್ಕೆ ಇದಕ್ಕಿಂತ ಗಿಫ್ಟ್ ಬೇರೆ ಬೇಕಾ?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ಐತಿಹಾಸಿಕ ಗೆಲುವು ಸಾಧಿಸುತ್ತಿರುವ ಬೆನ್ನಲ್ಲೇ, ನಟಿ ತ್ರಿಷಾ ಕೃಷ್ಣನ್ ವಿಜಯ್ ನಿವಾಸಕ್ಕೆ ಭೇಟಿ ನೀಡಿರುವುದು ಸಂಚಲನ ಮೂಡಿಸಿದೆ. ಇಂದು (ಮೇ 4) ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ತ್ರಿಷಾ, ಅಲ್ಲಿಂದ ನೇರವಾಗಿ ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ಮನೆಗೆ ಆಗಮಿಸಿದ್ದಾರೆ.
-
ದಳಪತಿ ವಿಜಯ್ ಅವರ ʻತಮಿಳಿಗ ವೆಟ್ರಿ ಕಳಗಂʼ ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಡೀ ದೇಶದ ಕಣ್ಣು ಈಗ ತಮಿಳುನಾಡಿತ್ತ, ಅದರಲ್ಲೂ ದಳಪತಿ ವಿಜಯ್ ಅವರತ್ತ ನೆಟ್ಟಿದೆ. ಈ ಚಾಲ್ಲಿಯಲ್ಲಿರುವ ಮತ್ತೊಂದು ಹೆಸರು, ತ್ರಿಷಾ ಕೃಷ್ಣನ್! ಹೌದು, ನಟ ವಿಜಯ್ ಮತ್ತು ತ್ರಿಷಾ ನಡುವೆ ಎಂತಹ ಆಪ್ತತೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸದ್ಯ ಟಿವಿಕೆ ಗೆಲುವಿನಿಂದ ಖುಷಿಯಾಗಿರುವ ತ್ರಿಷಾ, ವಿಜಯ್ ಅವರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇಂದು ತ್ರಿಷಾ ಹುಟ್ಟುಹಬ್ಬ
ನಟಿ ತ್ರಿಷಾ ಕೃಷ್ಣನ್ ಅವರಿಗೆ ಇಂದು ಹುಟ್ಟುಹಬ್ಬ. ಇದೇ ದಿನ ತಮಿಳುನಾಡು ಚುನಾವಣೆ ಫಲಿತಾಂಶ ಘೋಷಣೆ ಆಗಿದೆ. ಟಿವಿಕೆ ಮುನ್ನಡೆಯಲ್ಲಿದೆ. ಇದೊಂಥರಾ ತ್ರಿಷಾಗೆ ಡಬಲ್ ಸಂಭ್ರಮ ಎನ್ನಬಹುದು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತ್ರಿಷಾ ಅವರು ತಿರುಪತಿಗೆ ಭೇಟಿ ನೀಡಿದ್ದರು. ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದ ತ್ರಿಷಾ, ಅಲ್ಲಿಂದ ಸೀದಾ ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ಮನೆಗೆ ಆಗಮಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷವು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, ಅತಿ ಹೆಚ್ಚು ಮತಗಳನ್ನು ಗಳಿಸುತ್ತಿರುವ ಬೆನ್ನಲ್ಲೇ, ನಟಿ ತ್ರಿಷಾ ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ವಿಜಯ್ ನಿವಾಸಕ್ಕೆ ಬಿಳಿ ಬಣ್ಣದ ಕಾರಿನಲ್ಲಿ ಆಗಮಿಸಿದ ತ್ರಿಷಾ, ಅಲ್ಲಿ ನೆರೆದಿದ್ದ ಕ್ಯಾಮೆರಾಗಳನ್ನು ನೋಡಿ ನಗು ಬೀರಿದ್ದಾರೆ.
ಟಿವಿಕೆಗಾಗಿ ತಿರುಪತಿಗೆ ಭೇಟಿ?
ಭಾನುವಾರ (ಮೇ 3) ತಡರಾತ್ರಿ ತ್ರಿಷಾ ಅವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ಸೋಮವಾರ ಬೆಳಿಗ್ಗೆಯೇ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ತಮಿಳುನಾಡು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವ ದಿನವೇ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವುದು, ವಿಜಯ್ ಪಕ್ಷದ ಯಶಸ್ಸಿಗಾಗಿ ಅವರು ಪ್ರಾರ್ಥನೆ ಸಲ್ಲಿಸಿರಬಹುದು ಎಂಬ ಚರ್ಚೆಗೆ ಕಾರಣವಾಗಿದೆ.
ಇಂದು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತ್ರಿಷಾ ತಿರುಪತಿಗೆ ಭೇಟಿ ನೀಡಿದ್ದರೂ, "ಟಿವಿಕೆ ಗೆಲುವಿಗಾಗಿ ತ್ರಿಷಾ ಪ್ರಾರ್ಥನೆ ಮಾಡುತ್ತಿದ್ದಾರೆ, ಅದಕ್ಕಾಗಿ ತಿರುಪತಿಗೆ ಭೇಟಿ ನೀಡಿದ್ದಾರೆ" ಎಂಬರ್ಥದ ಪೋಸ್ಟ್‌ಗಳು ಹರಿದಾಡುತ್ತಿವೆ. ಈ ಮಧ್ಯೆ ತ್ರಿಷಾ ಹುಟ್ಟುಹಬ್ಬಂದೇ ಟಿವಿಕೆ ವಿಜಯಶಾಲಿಯಾಗುತ್ತಿರುವುದನ್ನು ಕಂಡ ಫ್ಯಾನ್ಸ್, ತ್ರಿಷಾ ಹುಟ್ಟುಹಬ್ಬಕ್ಕೆ ಇದಕ್ಕಿಂತ ದೊಡ್ಡ ಗಿಫ್ಟ್ ಬೇಕೇ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಜಯ್ ಮನೆಗೆ ಬಂದ ತ್ರಿಷಾ
#Trisha at TVK Leader #ThalapathyVijay's House..⭐
— Laxmi Kanth (@iammoviebuff007) May 4, 2026
pic.twitter.com/jkuMxBDrJ8
ಮದುವೆಗೆ ಒಟ್ಟಿಗೆ ಹೋಗಿದ್ದ ವಿಜಯ್ & ತ್ರಿಷಾ
ಕಳೆದ ಮಾರ್ಚ್‌ನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಕುಟುಂಬದ ಮದುವೆಯಲ್ಲಿ ವಿಜಯ್ ಮತ್ತು ತ್ರಿಷಾ ಒಂದೇ ಬಣ್ಣದ ಉಡುಪಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಇದೇ ಸಮಯದಲ್ಲಿ ವಿಜಯ್ ಅವರ ವೈಯಕ್ತಿಕ ಜೀವನ ಮತ್ತು ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿದ್ದ ಸುದ್ದಿಗಳು ಹರಿದಾಡುತ್ತಿದ್ದವು. ಅಂತಹ ಸಮಯದಲ್ಲಿ ಅವರಿಬ್ಬರು ಒಟ್ಟಿಗೆ ಮದುವೆಗೆ ಹೋಗಿದ್ದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು.