ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಬೆನ್ನಲ್ಲೇ ಬೀದಿ ದೀಪ ತೆರವು; ಸೇಡಿನ ಕ್ರಮ ಎಂದ ಗ್ರಾಮಸ್ಥರು

Viral News: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಹಿನ್ನೆಲೆಯಲ್ಲಿ ಬೀದಿ ದೀಪಗಳನ್ನು ತೆಗೆಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ರಾಜಸ್ಥಾನದಲ್ಲಿಉ ಈ ಘಟನೆ ನಡೆದಿದೆ. ಹಲವು ಹಳ್ಳಿಗಳಲ್ಲಿ ಅಳವಡಿಸಿದ ಬೀದಿ ದೀಪಗಳನ್ನು ಪಂಚಾಯತ್ ಸಮಿತಿ ಚುನಾವಣೆ ಫಲಿತಾಂಶದ ನಂತರ ತೆರವುಗೊಳಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಬಿಜೆಪಿ ಅಭ್ಯರ್ಥಿಗೆ ಸೋತ ಬೆನ್ನಲ್ಲೇ ಬೀದಿ ದೀಪ ತೆರವು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 22, 2026 3:58 PM

ಜೈಪುರ, ನ. 22: ಚುನಾವಣೆಯ ಸೋಲು ಕೆಲವೊಮ್ಮೆ ಪ್ರತೀಕಾರದ ಕ್ರಮಕ್ಕೆ ಕಾರಣವಾಗುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕೆಲವು ದಿನಗಳ ಹಿಂದೆ ಆಂಧ್ರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತ ಬಳಿಕ ಅಭ್ಯರ್ಥಿ ಹಿಂದೆ ಮತದಾರರಿಗೆ ಹಂಚಿದ್ದ ಹಣ ವಾಪಸ್‌ ಕೇಳುವ ಮೂಲಕ ಸುದ್ದಿಯಾಗಿದ್ದ. ಇದೀಗ ರಾಜಸ್ಥಾನದಲ್ಲಿ ಅಂತಹದ್ದೇ ಘಟನೆ ನಡೆದಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಹಿನ್ನೆಲೆಯಲ್ಲಿ ಬೀದಿ ದೀಪಗಳನ್ನು ತೆಗೆಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ (Viral News). ಸದ್ಯ ಈ ವಿಚಾರ ಭಾರಿ ಚರ್ಚೆ ಹುಟ್ಟುಹಾಕಿದೆ.

ಟಾಂಕ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಹಳ್ಳಿಗಳಲ್ಲಿ ಅಳವಡಿಸಿದ ಬೀದಿ ದೀಪಗಳನ್ನು ಪಂಚಾಯತ್ ಸಮಿತಿ ಚುನಾವಣೆ ಫಲಿತಾಂಶದ ನಂತರ ತೆರವುಗೊಳಿಸಲಾಗಿದೆ. ನಿವಾಯಿ ಕ್ಷೇತ್ರದ ಶಾಸಕ ರಾಮ್ ಸಹಾಯ್ ವರ್ಮ ಅವರ ಆಪ್ತ ಸಹಾಯಕರ ಪತ್ನಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬೆನ್ನಲ್ಲೇ ಬೀದಿ ದೀಪ ತೆರವುಗೊಳಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಬೀದಿ ದೀಪಗಳ ತೆರವು:



ಪೀಪ್ಲು ಪಂಚಾಯತ್ ಸಮಿತಿಯ ವಾರ್ಡ್ 4ರಲ್ಲಿ ಈ ವಿವಾದ ಭುಗಿಲೆದ್ದಿದೆ. ಇಲ್ಲಿನ ರನೋಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕುಮ್ಹಾರೋನ್ ಕಿ ಧನಿ, ಬೇಗಂಪುರ, ಹನೀಫ್‌ಗಂಜ್ ಮತ್ತು ಬಿಜಲ್‌ಪುರ ಗ್ರಾಮಗಳಲ್ಲಿನ ಸುಮಾರು 50 ಎಲ್‌ಇಡಿ ಬೀದಿದೀಪಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಅಭ್ಯರ್ಥಿಯ ಸೋಲೇ ಕಾರಣ ಎನ್ನಲಾಗಿದೆ.

ʼʼಮತದಾನದ ಮೊದಲು ಹಂಚಿದ ಹಣ ವಾಪಸ್‌ ಕೊಡಿʼʼ: ಸೋತ ಬಳಿಕ ವರಸೆ ಬದಲಾಯಿಸಿದ ಅಭ್ಯರ್ಥಿಯ ವಿಡಿಯೊ ವೈರಲ್‌

ನಿವಾಯಿ ಶಾಸಕ ರಾಮ್‌ಸಹಾಯ್ ವರ್ಮ ಅವರ ಆಪ್ತ ಸಹಾಯಕ ಅಲೋಕ್ ಶರ್ಮ ಅವರ ಸೂಚನೆಯ ಮೇರೆಗೆ ಈ ದೀಪಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಅಲೋಕ್ ಶರ್ಮ ಅವರ ಪತ್ನಿ ಪ್ರಿಯಾಂಕಾ ಶರ್ಮ ವಾರ್ಡ್ 4ರಿಂದ ಪಂಚಾಯತ್ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಸೋತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಆರೋಪವಿದೆ.

ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಬೀದಿದೀಪಗಳನ್ನು ತೆರವುಗೊಳಿಸಲು ಪ್ರಾರಂಭಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ರಿಯಾಂಕಾ ಶರ್ಮ ಸೋಲಿನಿಂದಾಗಿ ಈ ಕ್ರಮ ಕೈಗೊಂಡಿರುವ ಅನುಮಾನವಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಗ್ರಾಮಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದಲೇ ಈ ದೀಪಗಳನ್ನು ತೆಗೆದುಹಾಕಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಅಧಿಕಾರಿಗಳ ವಾದವೇನು?

ವಿದ್ಯುತ್ ಕಂಬಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದನ್ನು ಪತ್ತೆಹಚ್ಚಿದ ನಂತರ ದೀಪಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರ ವಿರೋಧದ ನಡುವೆಯೂ ಈ ತಂಡವು ಕುಮ್ಹಾರೋನ್ ಕಿ ಧಾನಿಯಲ್ಲಿ ಸುಮಾರು 10 ವಿದ್ಯುತ್ ಕಂಬಗಳಿಂದ ಬೀದಿದೀಪಗಳನ್ನು ತೆರವುಗೊಳಿಸಿದೆ. ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿಗಳು ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಒಪ್ಪಿಕೊಂಡಿದ್ದರಿಂದ 40 ಬೀದಿದೀಪಗಳನ್ನು ಉಳಿಸಿಕೊಳ್ಳಲಾಗಿದೆ.

ಕೇರಳಂ ಮೀರಿಸುವ ಹೊನ್ನಾವರ ಹಿನ್ನೀರು ಸ್ವರ್ಗ; ಭೇಟಿ ನೀಡುವಂತೆ ಪ್ರವಾಸಿಗರಿಗೆ ಆನಂದ್ ಮಹೀಂದ್ರಾ ಕರೆ

ಆರೋಪ ತಳ್ಳಿ ಹಾಕಿದ ಶಾಸಕ

ನಿವಾಯಿ ಶಾಸಕ ರಾಮ್‌ಸಹಾಯ್ ವರ್ಮ ವಿವಾದದ ಬಗ್ಗೆ ಮಾತನಾಡಿ ಬೀದಿದೀಪಗಳನ್ನು ತೆರವುಗೊಳಿಸಿರುವುದಕ್ಕೂ ಪ್ರಿಯಾಂಕಾ ಶರ್ಮಾ ಅವರ ಚುನಾವಣಾ ಸೋಲಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಅನಧಿಕೃತವಾಗಿ ಸಂಪರ್ಕ ಕಲ್ಪಿಸಿದ್ದರಿಂದ ಮತ್ತು ಬಿಲ್‌ ಸರಿಯಾಗಿ ಪಾವತಿಸದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.