ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೀವನ ಎಷ್ಟೊಂದು ಸರಳ ನೋಡಿ; ಆಸ್ತಿ ಮೌಲ್ಯದ ವಿವರ ಬಹಿರಂಗ
ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2026ರ ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ 85.87 ಲಕ್ಷ ರುಪಾಯಿ. ಯಾವುದೇ ಕಾರು, ಚಿನ್ನಾಭರಣ ಅಥವಾ ಸಾಲವಿಲ್ಲದ ಅವರ ಸರಳ ಜೀವನ ಶೈಲಿ ಗಮನ ಸೆಳೆದಿದೆ.
ಸುವೇಂದು ಅಧಿಕಾರಿ (ಎಐ ಚಿತ್ರ) -
ಕೋಲ್ಕತ್ತಾ, ಮೇ 9: ಭಾರತೀಯ ಜನತಾ ಪಕ್ಷ (BJP)ದ ಹಿರಿಯ ನಾಯಕ ಸುವೇಂದು ಅಧಿಕಾರಿ (Suvendu Adhikari) ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವ ಮೂಲಕ ಐತಿಹಾಸಿಕ ಜಯ ದಾಖಲಿಸಿದ ಸುವೇಂದು, ಸ್ವಾತಂತ್ರ್ಯಾನಂತರ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಮೇ 8ರಂದು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಅವರು ಈಗ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.
ಸುವೇಂದು ಅವರ ರಾಜಕೀಯ ಏಳಿಗೆಯಷ್ಟೇ ಕುತೂಹಲಕಾರಿಯಾದ ವಿಷಯವೆಂದರೆ ಅವರ ಆಸ್ತಿ ವಿವರ. 2026ರ ಚುನಾವಣಾ ಅಫಿಡವಿಟ್‌ನಲ್ಲಿ ಅವರು ಘೋಷಿಸಿಕೊಂಡಿರುವ ಆಸ್ತಿ ಮೌಲ್ಯವು ಒಬ್ಬ ಪ್ರಭಾವಿ ರಾಜ್ಯದ ಮುಖ್ಯಮಂತ್ರಿಗೆ ಹೋಲಿಸಿದರೆ ಅತ್ಯಂತ ಸಾಧಾರಣವಾಗಿದೆ.
85.87 ಲಕ್ಷ ರುಪಾಯಿಗಳ ಒಟ್ಟು ಆಸ್ತಿ
ಸುವೇಂದು ಅಧಿಕಾರಿ ಒಟ್ಟು 85.87 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ 24.57 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 61.30 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದೆ. ವಿಶೇಷವೆಂದರೆ, ಅವರ ಮೇಲೆ ಯಾವುದೇ ಬ್ಯಾಂಕ್ ಸಾಲ ಅಥವಾ ಸರ್ಕಾರಿ ಬಾಕಿಗಳಂತಹ ಹೊಣೆಗಾರಿಕೆಗಳು (Liabilities) ಇಲ್ಲ.
ಮಮತಾ ನೆರಳಿನಿಂದ ಹೊರಬಂದು ಬಂಗಾಳದಲ್ಲಿ ಬಿಜೆಪಿ ನಾಯಕನಾಗಿ ಸುವೇಂದು ಅಧಿಕಾರಿ ಬೆಳೆದಿದ್ದು ಹೇಗೆ?
ಚರಾಸ್ತಿ ಮತ್ತು ಉಳಿತಾಯ
ಸುವೇಂದು ಅವರ ಬಳಿ ಕೇವಲ 12,000 ರುಪಾಯಿ ನಗದು ಇದೆ. ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು ಅಥವಾ ಖಾಸಗಿ ವಾಹನಗಳಿಲ್ಲ. ಅಲ್ಲದೆ, ಯಾವುದೇ ಚಿನ್ನಾಭರಣಗಳನ್ನು ಅವರು ಹೊಂದಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅವರ ಉಳಿತಾಯದ ಬಹುಪಾಲು ಹಣವು ವಿವಿಧ ಬ್ಯಾಂಕ್ ಠೇವಣಿಗಳು, ಎನ್‌ಎಸ್‌ಸಿ (5.45 ಲಕ್ಷ ರುಪಾಯಿ), ಕಿಸಾನ್ ವಿಕಾಸ್ ಪತ್ರ (2.60 ಲಕ್ಷ ರುಪಾಯಿ) ಮತ್ತು ಎಲ್‌ಐಸಿ ಪಾಲಿಸಿಗಳಲ್ಲಿ (7.71 ಲಕ್ಷ ರುಪಾಯಿ) ಇದೆ.
ಸ್ಥಿರಾಸ್ತಿ ಮತ್ತು ಆದಾಯ
ಅವರ 61.30 ಲಕ್ಷ ರುಪಾಯಿ ಮೌಲ್ಯದ ಸ್ಥಿರಾಸ್ತಿಗಳು ಹೆಚ್ಚಾಗಿ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿವೆ. ನಂದಿಗ್ರಾಮ ಸೇರಿದಂತೆ ವಿವಿಧೆಡೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ತಮ್ಮೂರು ಮತ್ತು ಕುಮಾರ್‌ಪುರದಲ್ಲಿ ಫ್ಲಾಟ್‌ಗಳನ್ನು ಹೊಂದಿದ್ದು, ಇವುಗಳ ಮೌಲ್ಯ 24.75 ಲಕ್ಷ ರುಪಾಯಿಗಳಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಅವರು 17.38 ಲಕ್ಷ ರುಪಾಯಿ ಆದಾಯವನ್ನು ತೆರಿಗೆ ರಿಟರ್ನ್ಸ್‌ನಲ್ಲಿ ತೋರಿಸಿದ್ದಾರೆ.
ಒಟ್ಟಾರೆಯಾಗಿ, ಬಂಗಾಳದ ರಾಜಕೀಯ ಧ್ರುವೀಕರಣದ ಕೇಂದ್ರಬಿಂದುವಾಗಿರುವ ಸುವೇಂದು ಅಧಿಕಾರಿ, ಸಾಧಾರಣ ಹಣಕಾಸು ಸ್ಥಿತಿಯೊಂದಿಗೆ ರಾಜ್ಯದ ಅತ್ಯುನ್ನತ ಪೀಠವನ್ನು ಅಲಂಕರಿಸಿದ್ದಾರೆ.