ಅಭಿಜಿತ್ ದೀಪ್ಕೆ ಬಂಧನದ ಬೆನ್ನಲ್ಲೇ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ ವಹಿಸಿರುವ ಅಜಿಂಕ್ಯ ಶಿಂಧೆ ಯಾರು?
Who Is Ajinkya Shinde: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಹಾಗೂ ಸಂಚಾಲಕ ಅಭಿಜಿತ್ ದೀಪ್ಕೆ ಬಂಧನದ ಬೆನ್ನಲ್ಲೇ ದಿಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನೇತೃತ್ವವನ್ನು ಅಜಿಂಕ್ಯ ಶಿಂಧೆ ಮುನ್ನಡೆಸುತ್ತಿದ್ದಾರೆ. ಬಂಧನದ ಭೀತಿಯಿಂದ ಮುಂಚಿತವಾಗಿ ಅಭಿಜಿತ್ ದೀಪ್ಕೆ ಮೊದಲೇ ರೆಕಾರ್ಡ್ ಮಾಡಿದ್ದ ವಿಡಿಯೊವನ್ನು ಸಿಜೆಪಿ ಹಂಚಿಕೊಂಡಿದೆ.
ಸಿಜೆಪಿ ಪ್ರತಿಭಟನೆಯ ನೇತೃತ್ವ ವಹಿಸಿದ ಅಜಿಂಕ್ಯ ಶಿಂಧೆ -
ನವದೆಹಲಿ, ಅ. 10: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ನೇತೃತ್ವವನ್ನು ತಮ್ಮ ಸಂಘಟನೆಯ ಪ್ರಮುಖ ಸದಸ್ಯ ಅಜಿಂಕ್ಯ ಶಿಂಧೆ (Ajinkya Shinde) ವಹಿಸಲಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಸಂಸ್ಥಾಪಕ ಹಾಗೂ ಸಂಚಾಲಕ ಅಭಿಜಿತ್ ದೀಪ್ಕೆ (Abhijeet Dipke) ತಿಳಿಸಿದ್ದಾರೆ. ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಹಿನ್ನೆಲೆಯಲ್ಲಿ ಶಿಂಧೆ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.
ಬಂಧನದ ಭೀತಿಯಿಂದ ಮುಂಚಿತವಾಗಿ ಶುಕ್ರವಾರ (ಅ. 9) ರಾತ್ರಿ ಅಭಿಜಿತ್ ದೀಪ್ಕೆ ರೆಕಾರ್ಡ್ ಮಾಡಿದ್ದ ವಿಡಿಯೊವನ್ನು ಸಿಜೆಪಿ ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಮಾತನಾಡಿರುವ ದೀಪ್ಕೆ, ತಮ್ಮನ್ನು ಹಾಗೂ ಸಿಜೆಪಿಯ ಸಹ ಸಂಚಾಲಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಣಾ ಅವರನ್ನು ವಶಕ್ಕೆ ಪಡೆದರೆ, ಜಂತರ್ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಯ ನೇತೃತ್ವವನ್ನು ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಅಭಿಜಿತ್ ದೀಪ್ಕೆ ಅವರ ವಿಡಿಯೊ ಸಂದೇಶ:
IMPORTANT Until Abhijeet Dipke, Saurav Das and Ashutosh Ranka are in detention, CJP’s Organization In-Charge Ajinkya Shinde will lead this protest at Jantar Mantar. Abhijeet had pre-recorded this video last night in anticipation of a potential arrest. @AjinkyaCJP https://t.co/WSQ69mKfTV
— Cockroach Janta Party - CJP (@Cockroachisback) October 10, 2026
“ನೀವು ಈ ವಿಡಿಯೊವನ್ನು ನೋಡುತ್ತಿದ್ದರೆ, ಆಶುತೋಷ್, ಸೌರವ್ ಮತ್ತು ನನ್ನನ್ನು ಬಂಧಿಸಲಾಗಿದೆ ಎಂದರ್ಥ. ನಮ್ಮ ನಂತರ ಈ ಚಳವಳಿಯ ನೇತೃತ್ವವನ್ನು ಅಜಿಂಕ್ಯ ವಹಿಸಲಿದ್ದಾರೆ. ದಯವಿಟ್ಟು ಅಜಿಂಕ್ಯ ಶಿಂಧೆ ಅವರನ್ನು ಬೆಂಬಲಿಸಿ. ಅವರು ಕಾಕ್ರೋಚ್ ಜನತಾ ಪಾರ್ಟಿಯನ್ನು ಮುನ್ನಡೆಸಲಿದ್ದಾರೆ” ಎಂದು ದೀಪ್ಕೆ ವಿಡಿಯೊದಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ, ಸಿಜೆಪಿಗೆ ಬೆಂಬಲ: ಯಾರು ಈ ಯುಟ್ಯೂಬರ್ ಧ್ರುವ್ ರಾಠಿ?
ಅಜಿಂಕ್ಯ ಶಿಂಧೆ ಯಾರು?
ಅಜಿಂಕ್ಯ ಶಿಂಧೆ ಮಹಾರಾಷ್ಟ್ರ ಮೂಲದವರಾಗಿದ್ದು, ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಲಾತೂರ್ ಮೂಲದ ಅಜಿಂಕ್ಯ ಶಿಂಧೆಗೆ 35 ವರ್ಷ ವಯಸ್ಸಾಗಿದ್ದು, ಅವರು ರಾಯಗಢದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ.
ಆಗಸ್‌ನಲ್ಲಿ ಶಿಂಧೆ ಅವರನ್ನು ಅಭಿಜಿತ್ ದೀಪ್ಕೆ ಸಿಜೆಪಿಯ ರಾಷ್ಟ್ರೀಯ ಸಂಘಟನಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದರು. ಈ ತಿಂಗಳ ಆರಂಭದಲ್ಲಿ ಮುಂಬೈಯಲ್ಲಿ ನಡೆದ ಸಂಘಟನೆಯ ಪ್ರತಿಭಟನೆಯ ಆಯೋಜಕರಾಗಿದ್ದರು. ಶಿಂದೆಮುಂಬೈಯಲ್ಲಿ ಸಿಜೆಪಿ ನಡೆಸುತ್ತಿರುವ ಹೋರಾಟದ ಪ್ರಮುಖ ನಾಯಕ ಎನಿಸಿಕೊಂಡಿದ್ದಾರೆ.
ಗಾಂಧಿ ಜಯಂತಿಯಂದು ದಾದರ್‌ನಲ್ಲಿ ಕಾನೂನುಬಾಹಿರವಾಗಿ ಗುಂಪುಗೂಡಿ ಘೋಷಣೆ ಕೂಗಿದ ಆರೋಪದ ಮೇಲೆ ಅಭಿಜಿತ್ ದೀಪ್ಕೆ, ಪ್ರಣವ್ ಅಹಿರೇ, ಅಶುತೋಷ್ ರಂಕಾ, ಅಜಿಂಕ್ಯ ಶಿಂಧೆ, ಸೌರಭ್ ದಾಸ್, ಆಫ್ರೀನ್ ನವಾಜ್, ಸೌಮ್ಯಾ ಕೊರ್ಡೆ, ಅಂಕಿತ್ ಭಾರದ್ವಾಜ್, ವಿಜಯ್ ಮಲಂಗಿ, ಯೋಗೇಶ್ ಇಂಗ್ಲೆ ಹಾಗೂ 400ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಪ್ರಕರಣ ಎದುರಿಸಿದ ಸಿಜೆಪಿ ನಾಯಕರಲ್ಲಿ ಇವರೂ ಒಬ್ಬರಾಗಿದ್ದಾರೆ.
ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗೂ ಮೊದಲೇ 1000ಕ್ಕೂ ಜನರ ಬಂಧನ
ಭಾರತದಾದ್ಯಂತ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ 'ಸ್ಕೂಲ್ ಟೀಕ್ ಕರೋ' ಅಭಿಯಾನವನ್ನು ಮುನ್ನಡೆಸಿದ ಸಿಜೆಪಿ ನಾಯಕರಲ್ಲಿ ಇವರೂ ಕೂಡ ಒಬ್ಬರು.
ದೆಹಲಿ ವಿಮಾನ ನಿಲ್ದಾಣದಲ್ಲಿ ದಿಪ್ಕೆ, ರಂಕಾ, ದಾಸ್ ಬಂಧನ
ಶನಿವಾರ (ಅ. 10) ದೆಹಲಿಯಲ್ಲಿ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಚಾಲಕ ಅಭಿಜಿತ್ ದೀಪ್ಕೆ ಮತ್ತು ಸಹ-ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬಂಧಿಸಲಾಯಿತು. ಪ್ರಯಾಣಿಕರು ಇಳಿಯಲು ಪ್ರಾರಂಭಿಸುವ ಮೊದಲು ಪೊಲೀಸರು ವಿಮಾನದೊಳಗೆ ಪ್ರವೇಶಿಸಿರುವ ವಿಡಿಯೊವನ್ನು ಸಂಘಟನೆಯು ಪೋಸ್ಟ್ ಮಾಡಿದೆ.
ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಂಧನಗಳನ್ನು ದೃಢಪಡಿಸಿದ್ದು, ನೈಋತ್ಯ ಜಿಲ್ಲಾ ಪೊಲೀಸರ ತಂಡಗಳನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.