ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಂತರ್ ಮಂತರ್ ಬದಲು ದಿಲ್ಲಿ ಹಾಟ್‌ನಲ್ಲಿ ಪ್ರತಿಭಟನೆ: ನೇಹಾ ಬೋರಾ, ಯೋಗೇಂದ್ರ ಯಾದವ್ ನೇತೃತ್ವದಲ್ಲಿ ಹೋರಾಟ

Neha Bora: ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಪ್ರತಿಭಟನೆಯ ಸ್ಥಳವನ್ನು ದಿಲ್ಲಿ ಹಾಟ್‌ಗೆ ಬದಲಾಯಿಸುವುದಾಗಿ ಘೋಷಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ನೇಹಾ ಬೋರಾ ಮತ್ತು ಯೋಗೇಂದ್ರ ಯಾದವ್ ಮತ್ತಿತರರು ಮೆರವಣಿಗೆ ನಡೆಸಿದರು. ದೆಹಲಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪ್ರತಿಭಟನೆಯನ್ನು ಮುಂದುವರಿಸುವುದಾಗಿ ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.

ಜ್ಞಾನೇಶ್ ಕುಮಾರ್ ವಿರುದ್ಧ ದಿಲ್ಲಿ ಹಾಟ್‌ನಲ್ಲಿ ಪ್ರತಿಭಟನೆ

ನೇಹಾ ಬೋರಾ (ಸಂಗ್ರಹ ಚಿತ್ರ) -

Profile
Sushmitha Jain Oct 10, 2026 3:39 PM

ನವದೆಹಲಿ, ಅ. 10: ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಜ್ಞಾನೇಶ್ ಕುಮಾರ್ (Gyanesh Kumar) ಅವರ ರಾಜೀನಾಮೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಡೆಯಬೇಕಿದ್ದ ಪ್ರತಿಭಟನೆಯ ಸ್ಥಳವನ್ನು ಬದಲಾಯಿಸಲಾಗಿದೆ. ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು. ಆದರೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ದಿಲ್ಲಿ ಹಾಟ್‌ನಲ್ಲಿ (Dilli Haat) ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ (Neha Bora) ಎಕ್ಸ್‌ ಪೋಸ್ಟ್ ಮೂಲಕ ಘೋಷಿಸಿದ್ದಾರೆ.

“ಇಂದು ದಿಲ್ಲಿ ಹಾಟ್ ಜಂತರ್ ಮಂತರ್ ಆಗಲಿದೆ! ಅಲ್ಲಿಯೇ ಭೇಟಿಯಾಗೋಣ” ಎಂದು ನೇಹಾ ಬೋರಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ನೇಹಾ ಬೋರಾ ಅವರ ಎಕ್ಸ್‌ ಪೋಸ್ಟ್‌:



ಏಮ್ಸ್ ಸಮೀಪ ಜಮಾಯಿಸಿದ ಪ್ರತಿಭಟನಾಕಾರರು

ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಮುಂದುವರಿದಿರುವ ನಡುವೆಯೇ ನೇಹಾ ಬೋರಾ ಮತ್ತು ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಸಮೀಪ ಪ್ರತಿಭಟನಾಕಾರರೊಂದಿಗೆ ಜಮಾಯಿಸಿದರು. ಅಲ್ಲದೆ ದಿಲ್ಲಿ ಹಾಟ್‌ನಿಂದ ಜಂತರ್ ಮಂತರ್ ಕಡೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದಾರೆ ಎಂದು ಯೋಗೇಂದ್ರ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಎಸ್‌ಐಆರ್ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಲಿ” ಎಂಬ ಘೋಷಣೆಯನ್ನೂ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ, ನೆಹಾ ಬೋರಾ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದು, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಧನಂಜಯ್ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಡ್ಯಾನಿಶ್ ಅಲಿ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಿದರು. ಬಳಿಕ ನೇರಪ್ರಸಾರ ಏಕಾಏಕಿ ಸ್ಥಗಿತಗೊಂಡಿದೆ.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಣೆ

ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಆಯೋಜಕರು ಅನುಮತಿ ಕೋರಿದ್ದರು. ಆದರೆ ಕಡಿಮೆ ಅವಧಿಯ ಮುನ್ಸೂಚನೆ, ಭದ್ರತಾ ಕಳವಳಗಳು ಹಾಗೂ ಹಿಂದಿನ ಪ್ರತಿಭಟನೆಗಳ ವೇಳೆ ವಿಧಿಸಲಾಗಿದ್ದ ಷರತ್ತುಗಳ ಉಲ್ಲಂಘನೆಯ ಆರೋಪಗಳನ್ನು ಮುಂದಿಟ್ಟು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಪ್ರತಿಭಟನೆಯ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಿಸುವುದು ಹಾಗೂ ಪ್ರತಿಭಟನಾಕಾರರು, ಸ್ಥಳೀಯ ನಿವಾಸಿಗಳು ಮತ್ತು ಸಂಚಾರ ವ್ಯವಸ್ಥೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಬಂಧಗಳು ಅಗತ್ಯ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ದೆಹಲಿ ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಪ್ರತಿಭಟನೆ

ಹಲವು ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆಗೆ ಬೆಂಬಲ

ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (AISA), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (SFI), ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ (AISF) ಹಾಗೂ ಆಮ್ ಆದ್ಮಿ ಪಾರ್ಟಿಯ ವಿದ್ಯಾರ್ಥಿ ಘಟಕವಾದ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಫಾರ್ ಆಲ್ಟರ್ನೇಟಿವ್ ಪಾಲಿಟಿಕ್ಸ್ (ASAP) ಸೇರಿ ಹಲವು ಸಂಘಟನೆಗಳು ಕೈಜೋಡಿಸಿವೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪವನ್ನು ಮುಂದಿಟ್ಟು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಸಂಘಟನೆಗಳು ಒತ್ತಾಯಿಸಿವೆ.

ದೆಹಲಿಯಾದ್ಯಂತ ಬಿಗಿ ಭದ್ರತೆ

ಪ್ರತಿಭಟನೆಯ ಹಿನ್ನೆಲೆಯಲ್ಲಿ ನವದೆಹಲಿಯ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಕೆಲವು ಪ್ರದೇಶಗಳಲ್ಲಿ ಜನರ ಸಂಚಾರದ ಮೇಲೆಯೂ ನಿರ್ಬಂಧ ವಿಧಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಜ್ಞಾನೇಶ್ ಕುಮಾರ್ ಹಾಗೂ ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ವಿವಿಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿಂದೆ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ನೇಹಾ ಬೋರಾ ಸೇರಿ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ನಿರ್ಬಂಧಗಳ ನಡುವೆಯೂ ಪ್ರತಿಭಟನೆ ಮುಂದುವರಿಸುವುದಾಗಿ ಕಾಕ್ರೋಚ್‌ ಜನತಾ ಪಾರ್ಟಿ ಮತ್ತು ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ. ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಖಚಿತಪಡಿಸುವುದು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ತಮ್ಮ ಹೋರಾಟದ ಉದ್ದೇಶ ಎಂದು ಸಂಘಟನೆಗಳು ಹೇಳಿವೆ.