ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಾಷ್ಟ್ರೀಯ ಯುವ ದಿನ: ಏನಿದರ ಮಹತ್ವ?

National Youth Day: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಯುವ ಜನತೆಯನ್ನು ಸ್ವಯಂ-ಸಶಕ್ತೀಕರಣ, ಶಿಸ್ತು ಮತ್ತು ರಾಷ್ಟ್ರ ನಿರ್ಮಾಣದತ್ತ ಪ್ರೇರೇಪಿಸುವುದು ಇದರ ಉದ್ದೇಶ. ಸ್ವಾಮಿ ವಿವೇಕಾನಂದರ ಆದರ್ಶಗಳು ಹಾಗೂ ಬೋಧನೆಗಳು ದೇಶದ ಯುವಕರಿಗೆ ದಾರಿದೀಪ ಎಂಬ ಕಾರಣದಿಂದ 1984ರಲ್ಲಿ ಭಾರತ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಘೋಷಿಸಿದೆ.

ಇಂದು ರಾಷ್ಟ್ರೀಯ ಯುವ ದಿನ; ಏನಿದರ ಮಹತ್ವ?

ಸ್ವಾಮಿ ವಿವೇಕಾನಂದರು -

Profile
Sushmitha Jain Jan 12, 2026 6:00 AM

ಬೆಂಗಳೂರು, ಜ. 12: ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನು(National Youth Day) ಆಚರಿಸಲಾಗುತ್ತದೆ. ಇದು ಭಾರತದ ಯುವ ಶಕ್ತಿಗೆ ಮೀಸಲಾಗಿರುವ ಅತ್ಯಂತ ಮಹತ್ವದ ದಿನ. ಈ ದಿನವನ್ನು ವಿಶೇಷವಾಗಿ ಆಚರಿಸುವುದಕ್ಕೆ ಕಾರಣ ಸ್ವಾಮಿ ವಿವೇಕಾನಂದರ ಜನ್ಮದಿನ (Swami Vivekananda). ಯುವಕರಿಗೆ ದಾರಿದೀಪವಾಗಿದ್ದ ಮಹಾನ್ ಚಿಂತಕ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಗೌರವಿಸಿ, ಭಾರತ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಅವರ ಜನ್ಮದಿನವನ್ನೇ ಯುವ ದಿನವಾಗಿ ಆಚರಿಸಲು ಕಾರಣವೇನು? ಯುವ ಜನತೆಗೂ ಸ್ವಾಮಿ ವಿವೇಕಾನಂದರಿಗೂ ಇರುವ ಸಂಬಂಧ ಏನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಯಾವ ವರ್ಷದಿಂದ ಆಚರಿಸಲಾಗುತ್ತಿದೆ ಎಂಬುದರ ಜತೆಗೆ, ಸ್ವಾಮಿ ವಿವೇಕಾನಂದರು ಯಾರು ಮತ್ತು ದೇಶದ ಪ್ರಗತಿಗೆ ಅವರು ನೀಡಿದ ಕೊಡುಗೆ ಏನು ಎಂಬುದು ಗಮನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ಜೀವನ, ತತ್ವಗಳು ಹಾಗೂ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವ ಹಿನ್ನೆಲೆ ಮತ್ತು ಇತಿಹಾಸವನ್ನು ತಿಳಿದುಕೊಳ್ಳುವುದು ಅಗತ್ಯ.

ಬಾಲ್ಯ ಜೀವನ

ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರ ಮೂಲ ಹೆಸರು ನರೇಂದ್ರನಾಥ ದತ್. ಬಾಲ್ಯದಿಂದಲೇ ಅವರಲ್ಲಿ ಅಪಾರ ಬುದ್ಧಿಶಕ್ತಿ, ಅಧ್ಯಯನದ ಮೇಲಿನ ಆಸಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆ ಅವರಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿತ್ತು. ವೇದಾಂತ ತತ್ವಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರು, ಧರ್ಮ ಮತ್ತು ಜೀವನದ ನಿಜಾರ್ಥವನ್ನು ಹುಡುಕುವಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. 25ನೇ ವಯಸ್ಸಿನಲ್ಲಿ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸನ್ಯಾಸ ಸ್ವೀಕರಿಸಿ, ನಂತರ ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದ ಪ್ರಸಿದ್ಧರಾದರು. 1881ರಲ್ಲಿ ರಾಮಕೃಷ್ಣ ಪರಮಹಂಸರೊಂದಿಗೆ ಅವರ ಭೇಟಿ ಜೀವನದ ದಿಕ್ಕನ್ನೇ ಬದಲಿಸಿತು.

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವಾಗಿ ಏಕೆ ಆಚರಿಸಲಾಗುತ್ತದೆ?

ಸ್ವಾಮಿ ವಿವೇಕಾನಂದರು ಕೇವಲ ಆಧ್ಯಾತ್ಮಿಕ ನಾಯಕ ಮಾತ್ರವಲ್ಲ, ಬಹುಮುಖ ಪ್ರತಿಭೆಯ ವ್ಯಕ್ತಿತ್ವವಾಗಿದ್ದರು. ಧರ್ಮ, ತತ್ವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಸಾಹಿತ್ಯ ಮತ್ತು ಕಲೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಜತೆಗೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿಯೂ ಪರಿಣತಿ ಹೊಂದಿದ್ದರು. ದೈಹಿಕವಾಗಿ ಸಹ ಸದೃಢರಾಗಿದ್ದ ಅವರು ಉತ್ತಮ ಕ್ರೀಡಾಪಟು ಕೂಡ ಆಗಿದ್ದರು.
ಯುವಕರಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ರಾಷ್ಟ್ರಭಕ್ತಿ ಬೆಳೆಸುವ ಅವರ ವಿಚಾರಗಳು ಇಂದು ಕೂಡ ಯುವಜನತೆಗೆ ಅಪಾರ ಪ್ರೇರಣೆಯಾಗಿವೆ. “ನೀವು ಎದ್ದೇಳಿ, ಎಚ್ಚೆತ್ತುಕೊಳ್ಳಿ” ಎಂಬ ಅವರ ಸಂದೇಶ ಯುವ ಮನಸ್ಸುಗಳಿಗೆ ಶಕ್ತಿಯನ್ನು ತುಂಬುತ್ತದೆ. ಈ ಕಾರಣದಿಂದಲೇ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಯುವ ದಿನದ ಆರಂಭ

1984ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅಧಿಕೃತವಾಗಿ ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು. ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ತತ್ವಗಳು ಭಾರತೀಯ ಯುವಕರ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯುತ್ತಮ ಮಾರ್ಗದರ್ಶಕವಾಗಿವೆ ಎಂದು ಸರ್ಕಾರ ಅಭಿಪ್ರಾಯಪಟ್ಟಿತು. ಅಂದಿನಿಂದ ಪ್ರತಿವರ್ಷ ಜನವರಿ 12ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ವಿವೇಕಾನಂದ ಜಯಂತಿಯ ಮಹತ್ವ

ವಿವೇಕಾನಂದ ಜಯಂತಿ ಕೇವಲ ಅವರ ಜನ್ಮೋತ್ಸವವಲ್ಲ; ಅದು ಅವರ ಆಲೋಚನೆಗಳನ್ನು ಮರುಸ್ಮರಿಸುವ ದಿನವಾಗಿದೆ. ಅವರ ಬೋಧನೆಗಳು ಆಧ್ಯಾತ್ಮಿಕತೆಯನ್ನು ಮೀರಿ ಸಾಮಾಜಿಕ ಸುಧಾರಣೆ, ರಾಷ್ಟ್ರೀಯ ಏಕತೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಸ್ವಾಮಿ ವಿವೇಕಾನಂದರ ಸ್ವಯಂ-ಸಬಲೀಕರಣ, ಸೇವಾಭಾವನೆ ಮತ್ತು ಏಕತೆಯ ಸಂದೇಶವು ಇಂದಿಗೂ ಎಲ್ಲಾ ವರ್ಗದ ಜನರನ್ನು ಸ್ಪರ್ಶಿಸುತ್ತಿದೆ. ಆದ್ದರಿಂದ, ರಾಷ್ಟ್ರೀಯ ಯುವ ದಿನವು ಯುವಕರಿಗೆ ತಮ್ಮ ಸಾಮರ್ಥ್ಯವನ್ನು ಅರಿತು, ರಾಷ್ಟ್ರದ ಪ್ರಗತಿಗೆ ಶಕ್ತಿಯಾಗಿ ನಿಲ್ಲುವ ಪ್ರೇರಣೆಯ ದಿನವಾಗಿ ಉಳಿದಿದೆ.