ʼʼವೈದ್ಯಕೀಯ ಶಿಕ್ಷಣದಲ್ಲಿ ಹಿರಿಯ ನಾಗರಿಕರಿಗೆ ಮೀಸಲಾತಿ ಏಕಿಲ್ಲ?ʼʼ ಕೋರ್ಟ್ ಮೊರೆ ಹೋದ 71 ವರ್ಷದ ನೀಟ್ ಅಭ್ಯರ್ಥಿ
Allahabad High Court: ವೈದ್ಯಕೀಯ ಶಿಕ್ಷಣದಲ್ಲಿ ಹಿರಿಯ ನಾಗರಿಕರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಉತ್ತರ ಪ್ರದೇಶದ 71 ವರ್ಷದ ನೀಟ್ ಅಭ್ಯರ್ಥಿ ಅಶೋಕ್ ಬಾಹರ್ ಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅಶೋಕ್ ಎಂಬಿಬಿಎಸ್ ಪ್ರವೇಶದಲ್ಲಿ ಶೇಕಡಾ 1ರಷ್ಟು ಮೀಸಲಾತಿಯನ್ನು ಅರ್ಹ ಹಿರಿಯ ನಾಗರಿಕರಿಗೆ ನೀಡಬೇಕು ಎಂದು ಹೇಳಿದ್ದಾರೆ.
ಅಶೋಕ್ ಬಹರ್ -
ಲಖನೌ, ಜು. 19: ವೈದ್ಯಕೀಯ ಶಿಕ್ಷಣದಲ್ಲಿ ಹಿರಿಯ ನಾಗರಿಕರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಉತ್ತರ ಪ್ರದೇಶದ 71 ವರ್ಷದ ನೀಟ್ ಅಭ್ಯರ್ಥಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೌದು, ಹಿರಿಯ ನಾಗರಿಕರಿಗೆ ಎಂಬಿಬಿಎಸ್ ಸೀಟ್‌ನಲ್ಲಿ ಪ್ರತ್ಯೇಕ ಮೀಸಲಾತಿ ಅಥವಾ ವಿಶೇಷ ಕೋಟಾ ಒದಗಿಸಬೇಕೆಂದು ಅಲಹಬಾದ್ ಹೈಕೋರ್ಟ್‌ನ (Allahabad High Court) ಲಖನೌ ಬೆಂಚ್‌ಗೆ ಅಶೋಕ್ ಬಹರ್ (Ashok Bahar) ಮನವಿ ಸಲ್ಲಿಸಿದಾರೆ. ಸದ್ಯ ಈ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಅಶೋಕ್ ನೀಟ್ ಯುಜಿ 2026 ಪರೀಕ್ಷೆ ಬರೆದಿದ್ದರು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅಶೋಕ್ ಎಂಬಿಬಿಎಸ್ ಪ್ರವೇಶದಲ್ಲಿ ಶೇಕಡಾ 1ರಷ್ಟು ಮೀಸಲಾತಿಯನ್ನು ಅರ್ಹ ಹಿರಿಯ ನಾಗರಿಕರಿಗೆ ನೀಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆ ಜುಲೈ 21ರಂದು ವಿಚಾರಣೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಮೀಸಲಾತಿಗೆ ಆಗ್ರಹಿಸಿ ಕೋರ್ಟ್ ಮೊರೆ ಹೋದ 71 ವರ್ಷದ ನೀಟ್ ಅಭ್ಯರ್ಥಿ:
🚨A 71-year-old NEET UG 2026 aspirant
— Indian Infra Report (@Indianinfoguide) July 18, 2026
Ashok Bahar has moved the Allahabad High Court seeking 1% reservation or a special quota for senior citizens in MBBS admissions:(India today) pic.twitter.com/Lx0z8ZzFM3
ಅಶೋಕ್ ಮನವಿಗೆ ಕಾರಣವೇನು?
ಹಿರಿಯ ನಾಗರಿಕರಿಗೆ ಏಕೆ ವಿಶೇಷ ಸವಲತ್ತು ನೀಡುತ್ತಿಲ್ಲ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ವಿವಿಧ ಗುಂಪುಗಳಿಗೆ ಮೀಸಲಾತಿ, ವಿಶೇಷ ಸವಲತ್ತು ನೀಡಲಾಗುತ್ತಿದ್ದು, ಹಿರಿಯ ನಾಗರಿಕರನ್ನೂ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹಿರಿಯ ನಾಗರಿಕರು ನೀಟ್ ಬರೆದರೆ ಉತ್ತಮ ಅಂಕ ಗಳಿಸುವ ಅವಕಾಶವಿದೆ ಎಂದಿದ್ದಾರೆ. ಅಶೋಕ್ ಬಹರ್ ಅವರ ವಕೀಲ ಪಂಕಜ್ ಧೀರ್ ಸಿಂಗ್ ರಾಣಾ ಈ ವಿಚಾರದಲ್ಲಿನ ಸುಪ್ರೀಂ ಕೋರ್ಟ್‌ನ ನಿಲುವನ್ನು ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಟ್-ಯುಜಿಯ ಗರಿಷ್ಠ ವಿದ್ಯಾರ್ಹತೆಯನ್ನು ತೆಗೆದು ಹಾಕಿತ್ತು. ಅಂದರೆ ವಯಸ್ಸಿನ ಹಂಗಿಲ್ಲದೆ ಯಾರೂ ಬೇಕಾದರೂ ಪರೀಕ್ಷೆ ಬರೆಯಬಹುದಾಗಿದೆ. ಹಿರಿಯ ನಾಗರಿಕರು ಕಾನೂನುಬದ್ಧವಾಗಿ ವೈದ್ಯಕೀಯ ಎಂಟ್ರೆನ್ಸ್ ಪರೀಕ್ಷೆಗೆ ಹಾಜರಾಗಬಹುದಾದರೆ, ಅವರ ಪ್ರವೇಶಕ್ಕೆ ಅನುಕೂಲವಾಗುವ ರೀತಿ ನಿಯಮ ರೂಪಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಅಶೋಕ್ ಬಾಹರ್‌ನ ಬಹು ದಿನಗಳ ಕನಸು
ವೈದ್ಯರಾಗಬೇಕು ಎನ್ನುವುದು ಅಶೋಕ್ ಬಹರ್ ಅವರ 5 ದಶಕಗಳ ಕನಸು. ಅವರು ಮೊದಲು ವೈದ್ಯಕೀಯ ಪವೇಶ ಪರೀಕ್ಷೆ ಬರೆದಿದ್ದು 1974ರಲ್ಲಿ. ಆದರೆ ಅದರಲ್ಲಿ ಅವರು ತೇರ್ಗಡೆಯಾಗಲಿಲ್ಲ. 2023ರಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರು. ಆದರೆ ಪ್ರವೇಶ ಪರೀಕ್ಷೆಯ ಕೇಂದ್ರಕ್ಕೆ ತಲುಪಲು ಸಾಧ್ಯವಾಗದೆ ಆ ಅವಕಾಶವೂ ಕೈತಪ್ಪಿತು. ಆದರೂ ಅವರು ತಮ್ಮ ಪ್ರಯತ್ನ ಬಿಡಲಿಲ್ಲ. ಈ ವರ್ಷ ಮತ್ತೆ ನೀಟ್ ಯುಜಿ 2026 ಬರೆದರು.
ವೈದ್ಯರಾಗಬೇಕೆಂಬ ಕನಸನ್ನು ಅಶೋಕ್ ಅವರಲ್ಲಿ ಬಿತ್ತಿದ್ದು ತಾಯಿ ಸಾವಿತ್ರಿ ದೇವಿ. 1990ರಲ್ಲಿ ನಿಧನರಾಗುವಾಗಲೂ ಅವರು ತಮ್ಮ ಪುತ್ರ ವೈದ್ಯನಾಗಬೇಕೆಂದೇ ಬಯಸಿದ್ದರು. ಅಶೋಕ್ ಅವರ ಪತ್ನಿ ಡಾ. ಮಂಜು ಬಹರ್ ಇದೀಗ ಅಶೋಕ್ ಅವರಿಗೆ ಉತ್ತೇಜನ ನೀಡುತ್ತಿದ್ದಾರೆ. ವಿಶೇಷ ಎಂದರೆ ಅಶೋಕ್ ಅವರ ಕುಟುಂಬದಲ್ಲಿ ಸುಮಾರು 20 ಮಂದಿ ವೈದ್ಯರಿದ್ದಾರೆ. ಅದರಲ್ಲೂ ಅನೇಕರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭೆ
ಹಾಗೆ ನೋಡಿದರೆ ಅಶೋಕ್ ಬಹರ್ ವಿವಿಧ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವುದು ಇವರ ಪಾಲಿಸಿ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ ಕೂಡ. ಅವರು ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯದಿಂದ ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ ಮತ್ತು ರಸಾಯನ ಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಕಾನೂನು ಪದವಿ ಮತ್ತು ಎಂಬಿಎ ಪದವಿ ಪಡೆದಿದ್ದಾರೆ.
’ಗೋವನ್ನು ರಾಷ್ಟ್ರೀಯ ಪ್ರಾಣಿ’ - ಅಲಹಾಬಾದ್ ಕೋರ್ಟ್ ಅಭಿಪ್ರಾಯಕ್ಕೆ ಭಾರೀ ಬೆಂಬಲ
ಅಶೋಕ್ ಇಂಡಿಯನ್ ಡ್ರಗ್ಸ್ & ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಸ್ವಯಂಪ್ರೇರಿತ ನಿವೃತ್ತಿ ಪಡೆದ ನಂತರ ಅವರು ವಿದೇಶಾಂಗ ಸಚಿವಾಲಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅಲ್ಲದೆ ಹೈಕೋರ್ಟ್ ವಕೀಲರೂ ಹೌದು. ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸಲು ಬಯಸುವ ಹಿರಿಯ ನಾಗರಿಕರಿಗೆ ಸರ್ಕಾರವು ವಿಶೇಷ ಸವಲತ್ತು ಒದಗಿಸಬೇಕು ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.