ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿಜಿಟಲ್ ಜಗತ್ತಿನಲ್ಲಿ ಮಹಿಳೆಯರ ದಾಪುಗಾಲು: ದೇಶದಲ್ಲಿ ಇಂಟರ್‌ನೆಟ್‌ ಬಳಕೆ ದ್ವಿಗುಣ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 ವರದಿ ಪ್ರಕಾರ, ಭಾರತದಲ್ಲಿ ಮಹಿಳೆಯರ ಡಿಜಿಟಲ್ ಬಳಕೆ ಮತ್ತು ಆರ್ಥಿಕ ಸಬಲೀಕರಣದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. 2019-21ರ ಅವಧಿಯಲ್ಲಿ 33.3% ಮಹಿಳೆಯರು ಮಾತ್ರ ಇಂಟರ್‌ನೆಟ್‌ ಬಳಸಿದ್ದರೆ, 2023-24ರಲ್ಲಿ ಈ ಪ್ರಮಾಣ 64.3%ಕ್ಕೆ ಏರಿಕೆಯಾಗಿ ದ್ವಿಗುಣಗೊಂಡಿದೆ. ಬ್ಯಾಂಕ್ ಖಾತೆ ಹೊಂದಿರುವ ಮಹಿಳೆಯರ ಪ್ರಮಾಣ 89%ಕ್ಕೆ ತಲುಪಿದ್ದು, ವೈಯಕ್ತಿಕ ಮೊಬೈಲ್ ಫೋನ್ ಹೊಂದಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಋತುಚಕ್ರ ಸ್ವಚ್ಛತಾ ಕ್ರಮಗಳ ಬಳಕೆಯಲ್ಲಿಯೂ ಸುಧಾರಣೆ ಕಂಡುಬಂದಿದ್ದು, ಮಹಿಳೆಯರ ಆರೋಗ್ಯ, ಆರ್ಥಿಕ ಸ್ವಾವಲಂಬನೆ ಹಾಗೂ ಡಿಜಿಟಲ್ ಒಳಗೊಳ್ಳುವಿಕೆಯಲ್ಲಿ ದೇಶವು ಮಹತ್ವದ ಸಾಧನೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.

ಮಹಿಳೆಯರ ಇಂಟರ್‌ನೆಟ್‌ ಬಳಕೆ ದ್ವಿಗುಣ

ಸಾಂದರ್ಭಿಕ ಚಿತ್ರ -

Profile
Sushmitha Jain May 30, 2026 5:10 PM

ನವದೆಹಲಿ, ಮೇ 30: ದೇಶದಲ್ಲಿ ಮಹಿಳೆಯರ ಡಿಜಿಟಲ್ ಬಳಕೆ ಹಾಗೂ ಆರ್ಥಿಕ ಸಬಲೀಕರಣದಲ್ಲಿ (Women's Digital Empowerment) ಗಮನಾರ್ಹ ಪ್ರಗತಿ ಕಂಡುಬಂದಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (National Family Health Survey-NFHS-6) ವರದಿ ತಿಳಿಸಿದೆ. 2019-21ರ ಅವಧಿಯಲ್ಲಿ ಕೇವಲ ಶೇಕಡ 33.3 ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ಇಂಟರ್‌ನೆಟ್‌ ಬಳಸಿದ್ದರು. ಆದರೆ 2023-24ರ ವೇಳೆಗೆ ಈ ಪ್ರಮಾಣ ಶೇಕಡ 64.3ಕ್ಕೆ ಏರಿಕೆಯಾಗಿ, ಕೇವಲ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಇದು ಮಹಿಳೆಯರ ಡಿಜಿಟಲ್ ಪ್ರವೇಶ ಹಾಗೂ ಬಳಕೆಯಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತಿದೆ.

ಅದೇ ರೀತಿ, ಬ್ಯಾಂಕ್ ಅಥವಾ ಉಳಿತಾಯ ಖಾತೆ ಹೊಂದಿರುವ ಮಹಿಳೆಯರ ಪ್ರಮಾಣ ಶೇಕಡ 78.6ರಿಂದ ಶೇಕಡ 89ಕ್ಕೆ ಏರಿಕೆಯಾಗಿದ್ದು, ವೈಯಕ್ತಿಕ ಮೊಬೈಲ್ ಫೋನ್ ಹೊಂದಿರುವ ಮಹಿಳೆಯರ ಪ್ರಮಾಣವೂ ಶೇಕಡ 53.9ರಿಂದ ಶೇಕಡ 63.6ಕ್ಕೆ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಈ ಅಂಕಿ-ಅಂಶಗಳು ಮಹಿಳೆಯರ ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಆರ್ಥಿಕ ಸ್ವಾವಲಂಬನೆಯಲ್ಲಿ ನಿರಂತರ ಪ್ರಗತಿಗೆ ಸಾಕ್ಷಿ ಎನಿಸಿಕೊಂಡಿದೆ.

15ರಿಂದ 24 ವರ್ಷದೊಳಗಿನ ಯುವತಿಯರಲ್ಲಿ ಸ್ವಚ್ಛ ಮತ್ತು ಸುರಕ್ಷಿತ ಋತುಚಕ್ರ ಆರೈಕೆ ವಿಧಾನಗಳ ಬಳಕೆ ಶೇಕಡ 77.6ರಿಂದ ಶೇಕಡ 79.2ಕ್ಕೆ ಏರಿಕೆಯಾಗಿದ್ದು, ರಾಷ್ಟ್ರೀಯ ಕಿಶೋರ ಆರೋಗ್ಯ ಕಾರ್ಯಕ್ರಮದಡಿ ಜಾರಿಯಲ್ಲಿರುವ ಮೆನ್ಸ್ಟ್ರುಯಲ್ ಹೈಜಿನ್ ಸ್ಕೀಮ್ (MHS) ಹಾಗೂ ಜನೌಷಧಿ ಯೋಜನೆಯಡಿ ಕಡಿಮೆ ದರದಲ್ಲಿ ಲಭ್ಯವಾಗುವ ಸ್ಯಾನಿಟರಿ ನ್ಯಾಪ್ಕಿನ್‌ಗಳು ಈ ಸಾಧನೆಗೆ ಕಾರಣಎಂದು ಸಚಿವಾಲಯ ತಿಳಿಸಿದೆ.

ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಮುಂದುವರಿದ ಭಾರತೀಯ ಹಡಗುಗಳ ಸಂಚಾರ: ಇದು ಹೇಗೆ?

ವರದಿಯ ಪ್ರಕಾರ, ತಾಯಿ ಮತ್ತು ಶಿಶು ಆರೋಗ್ಯ, ಪೌಷ್ಟಿಕತೆ, ಮಹಿಳಾ ಸಬಲೀಕರಣ ಹಾಗೂ ಅಗತ್ಯ ಸೇವೆಗಳ ಲಭ್ಯತೆಯಲ್ಲಿ ದೇಶವು ಸ್ಥಿರ ಪ್ರಗತಿ ಸಾಧಿಸಿದೆ. ಆದರೆ ಜೀವನಶೈಲಿ ಸಂಬಂಧಿತ ರೋಗಗಳು, ಸಾಂಕ್ರಾಮಿಕವಲ್ಲದ ಕಾಯಿಲೆಗಳು, ಅಪೌಷ್ಟಿಕತೆ ಮತ್ತು ಸ್ಥೂಲಕಾಯ ಸಮಸ್ಯೆಗಳು ಹೆಚ್ಚುತ್ತಿರುವುದು ಹೊಸ ಸವಾಲುಗಳಾಗಿವೆ. ಇದಕ್ಕಾಗಿ ತಡೆಗಟ್ಟುವ ಆರೋಗ್ಯ ಸೇವೆಗಳು, ಆರೋಗ್ಯಯುತ ಜೀವನಶೈಲಿ ಮತ್ತು ಸಮತೋಲಿತ ಪೌಷ್ಟಿಕ ಆಹಾರದ ಕುರಿತು ಹೆಚ್ಚಿನ ಗಮನ ಅಗತ್ಯವಾಗಿದೆ ಎಂದು ವರದಿ ಸೂಚಿಸಿದೆ.

ಸುಮಾರು 6.79 ಲಕ್ಷ ಮನೆಗಳನ್ನು ಮತ್ತು 715 ಜಿಲ್ಲೆಗಳನ್ನು ಒಳಗೊಂಡ NFHS-6 ಸಮೀಕ್ಷೆಯನ್ನು 2023-24ರಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ್ದು, ಮಹಾರಾಷ್ಟ್ರದ ಮುಂಬೈಯ International Institute for Population Sciences ಸಂಸ್ಥೆ ಇದರ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ. ಒಟ್ಟಾರೆ, ಈ ವರದಿ ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಸಾಧನೆಯತ್ತ ಸ್ಥಿರ ಹೆಜ್ಜೆ ಇಡುತ್ತಿರುವುದನ್ನು ಮತ್ತೊಮ್ಮೆ ದೃಢಪಡಿಸಿದೆ.